ಮೇಲ್ಮನವಿ ಮರು ಪರಿಶೀಲನೆಗೆ ಸಂಸದ ಶ್ರೇಯಸ್ ಎಂ. ಪಟೇಲ್‌ ಸೂಚನೆ

| Published : Mar 01 2025, 01:04 AM IST

ಸಾರಾಂಶ

ಕಡೂರು, ತಾಲೂಕಿನ ಎಮ್ಮೆದೊಡ್ಡಿ ಪ್ರದೇಶದಲ್ಲಿ ಮಂಜೂರಾಗಿದ್ದ ಭೂಮಿಯನ್ನು ಅರಣ್ಯ ಇಲಾಖೆ ರದ್ದುಪಡಿಸಿ ಎಸಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿರುವ ಬಗ್ಗೆ ಮರು ಪರಿಶೀಲನೆ ನಡೆಸುವಂತೆ ಅರಣ್ಯಾಧಿಕಾರಿಗಳಿಗೆ ಸಂಸದ ಶ್ರೇಯಸ್ ಎಂ. ಪಟೇಲ್‌ ಸೂಚನೆ ನೀಡಿದರು.

ಪ್ರಗತಿ ಪರಿಶೀಲನಾ ಸಭೆ: ಎಮ್ಮೆದೊಡ್ಡಿ ಪ್ರದೇಶದಲ್ಲಿ ಮಂಜೂರಾಗಿದ್ದ ಭೂಮಿಯನ್ನು ಅರಣ್ಯ ಇಲಾಖೆ ರದ್ದು

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಎಮ್ಮೆದೊಡ್ಡಿ ಪ್ರದೇಶದಲ್ಲಿ ಮಂಜೂರಾಗಿದ್ದ ಭೂಮಿಯನ್ನು ಅರಣ್ಯ ಇಲಾಖೆ ರದ್ದುಪಡಿಸಿ ಎಸಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿರುವ ಬಗ್ಗೆ ಮರು ಪರಿಶೀಲನೆ ನಡೆಸುವಂತೆ ಅರಣ್ಯಾಧಿಕಾರಿಗಳಿಗೆ ಸಂಸದ ಶ್ರೇಯಸ್ ಎಂ. ಪಟೇಲ್‌ ಸೂಚನೆ ನೀಡಿದರು.

ಶುಕ್ರವಾರ ಪಟ್ಟಣದ ತಾಪಂನಲ್ಲಿ ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್ ಹಾಗೂ ಶಾಸಕ ಕೆ.ಎಸ್.ಆನಂದ್ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅರಣ್ಯ ಇಲಾಖೆಯಿಂದ ಕ್ಷೇತ್ರದ ರೈತರಿಗೆ ಒಂದಿಲ್ಲೊಂದು ಸಮಸ್ಯೆಯಾಗುತ್ತಿವೆ ಎಂದು ಶಾಸಕ ಕೆ.ಎಸ್.ಆನಂದ್ ಸಭೆಯ ಗಮನಕ್ಕೆ ತಂದರು. ಆಗ ಸಂಸದರು ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕೂಡಲೇ ಎಸಿ ನ್ಯಾಯಾಲಯದಲ್ಲಿರುವ ಮೇಲ್ಮನವಿ ವಾಪಸ್ ಪಡೆದು ರೈತರ ಪರವಾಗಿ ನಿಲ್ಲಲು ಸೂಚನೆ ನೀಡಿದರು.

ಆದರೆ ಅಧಿಕಾರಿಗಳು ಇದಕ್ಕೆ ಒಪ್ಪದೆ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು ಎಂದೇ ವಾದ ಮಾಡಿದರು. ಸಂಸದರು, ಶಾಸಕರು ಮತ್ತು ಎಸಿಎಫ್ ನಡುವೆ ಸುದೀರ್ಘ ಚರ್ಚೆಗಳು ನಡೆದವು. ಅಂತಿಮವಾಗಿ ಯಾವ ತೀರ್ಮಾನಕ್ಕೂ ಬಾರದೆ ಎಸಿಎಫ್ ಮೋಹನ್ ಮೇಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ರೈತರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದರ್ಪ ತೋರಿಸುತ್ತಿದ್ದು ಹೋರಿ ತಿಮ್ಮನಹಳ್ಳಿ ರೈತರ ಜಮೀನಿಗೆ ನುಗ್ಗಿ ಕಳೆ ನಾಶಕ ಸಿಂಪಡಿಸಿ ಬೆಳೆ ನಾಶ ಮಾಡಿದ್ದಾರೆ. ನಿಮ್ಮ ಅರಣ್ಯ ಕಾನೂನಿನಲ್ಲಿ ಹೀಗೆ ಮಾಡಲು ಅವಕಾಶ ಇದೆಯೇ ಎಂದು ಶಾಸಕ ಆನಂದ್ ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಸಂಸದ ಶ್ರೇಯಸ್‌ ರೈತರನ್ನು ಒಕ್ಕಲೆಬ್ಬಿಸಿದರೆ ಸರಿ ಇರುವುದಿಲ್ಲ. ಬೆಳೆ ನಾಶ ಮಾಡಿದ್ದನ್ನು ಖಂಡಿಸುತ್ತೇನೆ ಎಂದಾಗ, ಶಾಸಕ ಆನಂದ್, ಈ ದೇಶ ಹಾಳಾಗುತ್ತಿದ್ದರೆ ಅದು ಅರಣ್ಯ ಇಲಾಖೆ ಅಧಿಕಾರಿಗಳಿಂದ ಎಂದು ಗರಂ ಆದರು. ಇಂಜಿನಿಯರ್ ರವಿ ಮೇಲೆ ಹರಿಹಾಯ್ದು ಕ್ರಿಯಾ ಯೋಜನೆ ತರಿಸಿಕೊಂಡು ಬೇರೆ ಕ್ರಿಯಾ ಯೋಜನೆ ಮಾಡಲು ಮುಂದಾಗಿರುವುದರ ಬಗ್ಗೆ ಗರಂ ಆದ ಸಂಸದ ಮತ್ತು ಶಾಸಕರು ನಾವೇನು ಧನಕಾಯುವ ಜನಪ್ರತಿ ನಿಧಿಗಳೆ ಎಂದು ಪ್ರಶ್ನಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಂಸದರು, ಶಾಸಕರು ನೀಡಿದ ಕ್ರಿಯಾ ಯೋಜನೆಯಂತೆ ಕಾಮಗಾರಿ ಮಾಡಲು ಆದೇಶಿಸಿದರು. ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳ ಸಿದ್ಧತೆ ಬಗ್ಗೆ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟರಾಜು ಮಾಹಿತಿ ನೀಡಿದರು. ಕಳೆದ ಬಾರಿ ಕಡೂರು ಜಿಲ್ಲೆಯಲ್ಲಿ 7 ನೇ ಸ್ಥಾನದಲ್ಲಿದೆ. ಈ ಬಾರಿ ಮೊದಲನೇ ಸ್ಥಾನ ತರಬೇಕೆಂದರು. ಪರೀಕ್ಷೆ ಬರೆಯುವ ಮಕ್ಕಳಿಗೆ ಬಸ್ ಉಚಿತವಾಗಿ ನೀಡುವ ವ್ಯವಸ್ಥೆ ಮಾಡಲು ನಿರ್ದೇಶಿಸಿದರು.ಆರೋಗ್ಯ ಇಲಾಖೆ ಡಿಎಚ್‍ಒ ಸಭೆಗೆ ಬಾರದಿದ್ದಕ್ಕೆ ಗರಂ ಆದ ಸಂಸದರು ಕೂಡಲೆ ಅವರಿಗೆ ನೋಟಿಸ್ ನೀಡಲು ಜಿಪಂ ಉಪ ಕಾರ್ಯದರ್ಶಿ ಶಂಕರ್ ಕೊರವರ್ ಸೂಚಿಸಿದರು. ಸಭೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಬದಲಿಗೆ ಸಹಾಯಕ ಅಧಿಕಾರಿಗಳನ್ನು ಕಳುಹಿಸಿದ ಅಧಿಕಾರಿಗಳಿಗೂ ನೋಟಿಸ್ ನೀಡುವಂತೆ ತಿಳಿಸಿದರು.ಪಟ್ಟಣದ ಸಮೀಪದ ನಗದಿಯತ್ ಕಾವಲಿನ ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್ ಸರಬರಾಜು ಮಾಡಲು ಸೂಚಿಸಿ, ಕಡೂರು-ಬೀರೂರು ರೈಲ್ವೆ ನಿಲ್ದಾಣದ ಸಮಸ್ಯೆ, ಕಾಮಗಾರಿ ಹಾಗು ಮೇಲುಸೇತುವೆ ನಿರ್ಮಾಣದ ಬಗ್ಗೆ ಸಂಸದರು ಮಾಹಿತಿ ಪಡೆದರು. ಅಂಚೆ ಇಲಾಖೆ, ಬಿಎಸ್‍ಎನ್‍ಎಲ್ ಪ್ರಗತಿ ಪರಿಶೀಲಿಸಿದರು. ಬೀರೂರು ಅಂಚೆ ಕಚೇರಿಗೆ ನಿವೇಶನ ಗುರುತಿಸಲು ಸೂಚಿಸಿದರು.

ಸಮಾಜ ಕಲ್ಯಾಣ, ಬಿಸಿಎಂ, ಲೋಕೋಪಯೋಗಿ, ಕೃಷಿ,ತೋಟಗಾರಿಗೆ ಸೇರಿದಂತೆ ಮತ್ತಿತರ ಇಲಾಖೆಗಳ ಮಾಹಿತಿ ಪಡೆದು ಮುಂದಿನ ಸಭೆಯಲ್ಲಿ ಸಂಭಂಧಿಸಿದ ಅಧಿಕಾರಿಗಳು ಸಂಪೂರ್ಣ ಮಾಹಿತಿ ಸಮೇತ ಬರುವಂತೆ ಸಂಸದರು ಸೂಚಿಸಿದರು.ಸಭೆಯಲ್ಲಿ ಶಾಸಕ ಆನಂದ್, ಜಿಪಂ ಉಪಕಾರ್ಯದರ್ಶಿ ಆಡಳಿತ ಶಂಕರ್ ಕೊರವರ, ತಹಸೀಲ್ದಾರ್ ಮಂಜುನಾಥ್, ಇಒ ಪ್ರವೀಣ್ ಹಾಗೂ ಅಧಿಕಾರಿಗಳು ಇದ್ದರು.

-- ಬಾಕ್ಸ್ --11ಗಂಟೆಗೆ ಇದ್ದ ಕಡೂರಿನ ಪ್ರಗತಿ ಪರಿಶೀಲನಾ ಸಭೆಗೆ ಎರಡೂವರೆ ಗಂಟೆಗಳ ಕಾಲ ತಡವಾಗಿ ಸಂಸದರು ಬಂದಿದ್ದರಿಂದ ಜಿಲ್ಲಾ ,ತಾಲೂಕು ಮಟ್ಟದ ಅಧಿಕಾರಿಗಳು ಕಾದು ಕೂರುವಂತಾಯಿತು. ನಂತರ 1.15 ಕ್ಕೆ ಸಂಸದರು ಬಂದಾಗ ಸಭೆ ಆರಂಭ ವಾದರೂ ಅನೇಕ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ಸಿಬ್ಬಂದಿಯನ್ನು ಕಳುಹಿಸದ ಕಾರಣ ಸಂಸದರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ದೊರಕದೆ ಸಭೆಯಲ್ಲಿ ಸಮಸ್ಯೆಗಳಿಗೆ ಉತ್ತರ ಸಿಗದಾಯಿತು.

28ಕೆಕೆಡಿಯು1.ಹಾಸನ ಕ್ಷೇತ್ರದ ಸಂಸದ ಶ್ರೇಯಸ್ ಎಂ ಪಟೇಲ್ ಕಡೂರು ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಶಾಸಕ ಕೆ.ಎಸ್.ಆನಂದ್ ,ಪ್ರವೀಣ್,ಶಂಕರ್ ಕೊರವರ,ಮಂಜುನಾಥ್ ಇದ್ದರು.