ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡು ಗಾಯಗೊಂಡ ಮಹಿಳೆ ಮನೆಗೆ ಸಂಸದ ಶ್ರೇಯಸ್ ಎಂ ಪಟೇಲ್ ಭೇಟಿ ನೀಡಿ ಕುಟುಂಬಸ್ಥರಿಗೆ ಧನಸಹಾಯ ಮಾಡಿದರು.ತಾಲೂಕಿನ ಕವಳಿಕೆರೆ ಗ್ರಾಮದಲ್ಲಿ ಅನಿಲ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿ ಸ್ಫೋಟಗೊಂಡು ಗಾಯಗೊಂಡ ಕುಟುಂಬದ ಮನೆಗೆ ಸಂಸದರು ಭೇಟಿ ನೀಡಿ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕವಳಿಕೆರೆ ಗ್ರಾಮದಲ್ಲಿ ಅನಿಲ ಸೋರಿಕೆಯಿಂದ ಉಂಟಾದ ಅನಾಹುತ ನಿಜಕ್ಕೂ ಬೇಸರ ತಂದಿದೆ. ಅನಿಲ ಸೋರಿಕೆ ಸ್ಫೋಟದಿಂದ ಮನೆಯಲ್ಲಿದ್ದ ಶೃತಿಯವರಿಗೆ ಬೆಂಕಿ ತಗುಲಿ 80%ರಷ್ಟು ಸುಟ್ಟು ಹೋಗಿದ್ದು, ಮನೆ ಸಹ ಸಂಪೂರ್ಣ ಹಾನಿಯಾಗಿದೆ. ಮನೆಯಲ್ಲಿದ್ದ ವಸ್ತುಗಳು, ಪರಿಕರಗಳು, ಮನೆಯ ಮೇಲ್ಛಾವಣಿ ಒಡೆದು ಹೋಗಿದ್ದು, ಒಂದು ದೊಡ್ಡ ದುರಂತವೇ ಆಗಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಒಂದು ಚಿಕ್ಕ ಸುಟ್ಟ ಗಾಯವನ್ನೇ ತಡೆಯಲು ಸಾಧ್ಯವಿಲ್ಲ, ಅಂತಹದರಲ್ಲಿ ಮಹಿಳೆ ಸಂಪೂರ್ಣ ಸುಟ್ಟು ಆ ನೋವನ್ನು ಹೇಗೆ ತಡೆದುಕೊಳ್ಳುತ್ತಿದ್ದಾರೋ ತಿಳಿಯುತ್ತಿಲ್ಲ. ಇತ್ತ ಅವರ ಮಾವನಿಗೂ ಆರೋಗ್ಯ ಸಮಸ್ಯೆ ಇದ್ದು ಕುಟುಂಬಸ್ಥರ ಮನೆಯ ಪರಿಸ್ಥಿತಿ ಹೇಳತೀರದಾಗಿದೆ. ಮೈಸೂರಿನ ಜೆಎಸ್‌ಎಸ್ ಒಂದೇ ಆಸ್ಪತ್ರೆಯಲ್ಲಿ ಸೊಸೆ ಹಾಗೂ ಮಾವನನ್ನು ದಾಖಲು ಮಾಡಿದ್ದು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇದೆಂತಹ ದುರ್ದೈವದ ಸಂಗತಿ. ಇಂತಹ ನೋವಿನ ಸಂಗತಿ ಮತ್ತೆ ಯಾವ ಕುಟುಂಬಕ್ಕೂ ಬರಬಾರದೆಂದು ದೇವರಲ್ಲಿ ಪ್ರಾರ್ಥಿಸಿದರು.ಗಾಯಗೊಂಡ ಶೃತಿ ಅವರಿಗೆ ಎರಡು ಮಕ್ಕಳಿದ್ದು, ಒಂದು ಮಗುವು ಹಾಸನದ ಖಾಸಗಿ ಶಾಲೆಯಲ್ಲಿ ಎಲ್‌ಕೆಜಿ ವಿದ್ಯಾಭ್ಯಾಸ ಮಾಡುತ್ತಿದ್ದು, ಶಾಲೆಯ ವ್ಯವಸ್ಥಾಪಕರಿಗೆ ದೂರವಾಣಿ ಮೂಲಕ ಮಾತನಾಡಿ, ಶಾಲೆಯ ಶುಲ್ಕದಲ್ಲಿ ರಿಯಾಯಿತಿಯನ್ನು ಮಾಡಿಕೊಡಿ ಎಂದು ಕೇಳಿದಾಗ ಶಾಲೆಯ ಮುಖ್ಯಸ್ಥರಾದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರುದ್ರೇಗೌಡ ಅವರು ಸಂಸದರ ಮಾತಿಗೆ ಗೌರವ ಕೊಟ್ಟು ಆ ಮಗುವಿನ ಒಂದು ವರ್ಷದ ಪೂರ್ತಿ ಶುಲ್ಕವನ್ನು ಪಡೆಯದೆ ಉಚಿತವಾಗಿ ಶಿಕ್ಷಣ ನೀಡಲು ಒಪ್ಪಿಗೆ ನೀಡಿದರು. ಇದನ್ನು ಕೇಳಿದ ಕುಟುಂಬದವರು ಹಾಗೂ ಗ್ರಾಮಸ್ಥರು ಸಂಸದರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಹಿರಿಯ ಮುಖಂಡರುಗಳಾದ ಬಿ ಕೆ ಲಿಂಗರಾಜು, ಶಾಂತಕೃಷ್ಟ, ರಂಗೇಗೌಡರು, ಅಜ್ಜನಹಳ್ಳಿ ಲೋಕೇಶ್, ಖಾಲಿದ್ ಪಾಷಾ, ಪೃಥ್ವಿ ಜಯರಾಮ್, ಪ್ರಭು, ಟೀಕರಾಜು, ಹರೀಶ್ ಭರತವಳ್ಳಿ ಗ್ರಾಮಸ್ಥರು ಇನ್ನು ಮುಂತಾದ ಮುಖಂಡರು ಹಾಜರಿದ್ದರು.