ಹೊಳೆ ನರಸೀಪುರದಲ್ಲಿ ಹೇಮಾವತಿ ನದಿ ಪಾತ್ರದ ನೆರೆ ಪೀಡಿತ ಪ್ರದೇಶಲ್ಲಿ ಸಂತ್ರಸ್ತರಿಗೆ ಸಂಸದ ಶ್ರೇಯಸ್‌ ಸಾಂತ್ವನ

| Published : Jul 27 2024, 01:03 AM IST / Updated: Jul 27 2024, 11:14 AM IST

ಹೊಳೆ ನರಸೀಪುರದಲ್ಲಿ ಹೇಮಾವತಿ ನದಿ ಪಾತ್ರದ ನೆರೆ ಪೀಡಿತ ಪ್ರದೇಶಲ್ಲಿ ಸಂತ್ರಸ್ತರಿಗೆ ಸಂಸದ ಶ್ರೇಯಸ್‌ ಸಾಂತ್ವನ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರ ಪಟ್ಟಣದ ಹೇಮಾವತಿ ನದಿ ಪಾತ್ರದ ನೆರೆ ಪೀಡಿತ ಪ್ರದೇಶಕ್ಕೆ ತೆರಳಿ ಸಂಸದ ಶ್ರೇಯಸ್ ಎಂ.ಪಟೇಲ್ ಅವರು ಸಂತ್ರಸ್ತ ಜನರನ್ನು ಭೇಟಿ ಮಾಡಿ ಸಾಂತ್ವನದ ಮಾತುಗಳನ್ನು ಆಡಿದರು 

 ಹೊಳೆನರಸೀಪುರ : ಹೇಮಾವತಿ ಜಲಾಶಯ ತುಂಬಿರುವುದು ಸಂತಸದ ವಿಷಯ. ಆದರೆ ನದಿ ಪಾತ್ರದ ಜನರು ಸಂಕಷ್ಟಕ್ಕೆ ಸಿಲುಕಿರುವುದು, ಹೆಚ್ಚಿನ ಮಳೆಯಿಂದ ಮನೆಗಳು ಬಿದ್ದಿರುವುದು ಹಾಗೂ ಬೆಳೆಗಳು ನಾಶವಾಗಿರುವುದು ನೋವನ್ನುಂಟುಮಾಡಿದೆ. ಯಾಸಿನ್ ನಗರದ ಜನರು ಪದೇ ಪದೆ ಸಮಸ್ಯೆಗೆ ಸಿಲುಕುತ್ತಿದ್ದು, ನೈಜ ಫಲಾನುಭವಿಗಳನ್ನು ಗುರುತಿಸಿ, ಅವರ ಸಮಸ್ಯೆಗೆ ಶಾಶ್ವತ ಪರಿಹಾರ ಮತ್ತು ಬಡವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಸಲಹೆ ನೀಡಿದರು. 

ಪಟ್ಟಣದ ಹೇಮಾವತಿ ನದಿ ಪಾತ್ರದ ನೆರೆ ಪೀಡಿತ ಪ್ರದೇಶಕ್ಕೆ ತೆರಳಿ ಸಂಸದ ಶ್ರೇಯಸ್ ಎಂ.ಪಟೇಲ್ ಅವರು ಸಂತ್ರಸ್ತ ಜನರನ್ನು ಭೇಟಿ ಮಾಡಿ ಸಾಂತ್ವನದ ಮಾತುಗಳನ್ನು ಆಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಜಲಾಶಯದಿಂದ ೭೫ ಸಾವಿರ ಕ್ಯುಸೆಕ್‌ ನೀರು ಬಿಟ್ಟಿರುವ ಕಾರಣ ನೆರೆ ಸಮಸ್ಯೆ ಉಂಟಾಗಿದೆ. ೨೦೧೯ರಲ್ಲೂ ಇದೇ ರೀತಿಯ ಸಮಸ್ಯೆ ಉಂಟಾಗಿತ್ತು ಮತ್ತು ಯಾಸಿನ್ ನಗರ ಬಡಾವಣೆಯ ಜನರು ಸಮಸ್ಯೆಗೆ ಸಿಲುಕಿದ್ದರು. ಪಟ್ಟಣದ ಶಾದಿಮಹಲ್, ಟಿಪ್ಪು ಶಾದಿ ಮಹಲ್ ಹಾಗೂ ಗುತ್ತಮ್ಮ ತಮ್ಮೇಗೌಡ ಕಲ್ಯಾಣ ಮಂಟಪದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸಮಸ್ಯೆ ಸಿಲುಕಿದ ಜನರು ಅಲ್ಲಿ ಆಶ್ರಯ ಪಡೆಯಲು ವ್ಯವಸ್ಥೆ ಮಾಡಲಾಗಿದೆ ಎಂದರು.

2019ರಲ್ಲಿ ಯಾಸಿನ್ ನಗರದ ನೆರೆ ಪೀಡಿತ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆಂದು 5 ಲಕ್ಷ ರು. ಪರಿಹಾರ ಘೋಷಣೆ ಮಾಡಲಾಗಿತ್ತು, ಆದರೆ ಇವರ ಮನೆಯ ಖಾತೆಯಾಗಿಲ್ಲದ ಕಾರಣದಿಂದ ತಾಲೂಕು ಆಡಳಿತ ವತಿಯಿಂದ ಒಂದು ಲಕ್ಷ ರು. ಹಣ ಪರಿಹಾರ ನೀಡಲಾಗಿತ್ತು. ಪಟ್ಟಣದ ಕುವೆಂಪು ಬಡಾವಣೆ, ಸೂರನಹಳ್ಳಿ, ಅರಕಲಗೂಡು ಹಾಗೂ ಚನ್ನರಾಯಪಟ್ಟಣದ ಹೆದ್ದಾರಿಯೂ ಜಲಾವೃತ್ತಗೊಂಡು ಅವಾಂತರ ಸೃಷ್ಠಿಸಿದೆ. ಜಲಾಶಯದ ಒಳಹರಿವು ಹೆಚ್ಚಿರುವ ಕಾರಣ ಹೆಚ್ಚಿನ ಹೊರಹರಿವು ಬಿಡುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ನಾಗರಿಕರ ರಕ್ಷಣೆಗಾಗಿ ತಾಲೂಕು ಆಡಳಿತ ಹಾಗೂ ಪುರಸಭೆ ಕೈಗೊಳ್ಳುವ ತುರ್ತು ಕಾರ್ಯಕ್ಕೆ ನಮ್ಮ ಸಮ್ಮತವಿದೆ ಎಂದರು ಮತ್ತು ಎನ್‌ಡಿಆರ್‌ಎಫ್‌ ಅಡಿಯಲ್ಲಿ ಪರಿಹಾರ ಧನ ವಿತರಣೆ ಕುರಿತಂತೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ, ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

ನದಿ ದಂಡೆಯಲ್ಲಿ ಹುಚ್ಚಾಟ ಅಥವಾ ಸೆಲ್ಫಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬೇಡಿ, ಇವರುಗಳನ್ನು ನಿಯಂತ್ರಿಸಲು ಕಠಿಣ ಕ್ರಮಕೈಗೊಂಡು, ಯಾವುದೇ ಅನಾಹುತ ನಡೆಯದಂತೆ ಜಾಗ್ರತೆ ವಹಿಸಬೇಕಿದೆ ಎಂದು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್‌ ಸಲಹೆ ನೀಡಿದರು.

ತಹಸೀಲ್ದಾರ್‌ ಕೆ.ಕೆ.ಕೃಷ್ಣಮೂರ್ತಿ, ಮುಖ್ಯಾಧಿಕಾರಿ ಮಹೇಂದ್ರ, ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು, ಮಾಜಿ ಸದಸ್ಯ ಕುಮಾರ್‌, ಮುಖಂಡ ಎಚ್‌.ಟಿ.ಲಕ್ಷ್ಮಣ, ಇತರರು ಇದ್ದರು.