ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಗುಲಾಬಿ ನೀಡಿ ಶುಭಹಾರೈಕೆ

| Published : Mar 22 2025, 02:01 AM IST

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಗುಲಾಬಿ ನೀಡಿ ಶುಭಹಾರೈಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದರು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳಿಗೆಲ್ಲಾ ಗುಲಾಬಿ ನೀಡಿ ಪರೀಕ್ಷಾ ಹಬ್ಬದ ರೀತಿ ತೆಗೆದುಕೊಂಡು ಪರೀಕ್ಷೆಯನ್ನು ಧೈರ್ಯದಿಂದ ಬರೆಯುವಂತೆ ಮಕ್ಕಳಿಗೆ ಶುಭ ಹಾರೈಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಈಗಾಗಲೇ ರಾಜ್ಯಾದ್ಯಂತ ಪ್ರಾರಂಭವಾಗಿದ್ದು, ಇದನ್ನು ಪರೀಕ್ಷಾ ಹಬ್ಬ ಎಂದು ಕರೆಯಬಹುದು. ನಮ್ಮ ಜಿಲ್ಲೆಯಲ್ಲೂ ಕೂಡ ಸುಮಾರು ೭೭ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದ್ದು, ಸುಮಾರು ೨೦ ಸಾವಿರಕ್ಕೂ ಹೆಚ್ಚು ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಮೊದಲ ಪರೀಕ್ಷೆಯನ್ನು ಪ್ರಥಮ ಭಾಷೆ ಕನ್ನಡ ಬರೆಯುತ್ತಿದ್ದು, ಜಿಲ್ಲಾ ಡಿಡಿಪಿಐ, ಎಲ್ಲಾ ಬಿಇಒಗಳು ಪರೀಕ್ಷೆ ಬರೆಯಲು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಪರೀಕ್ಷೆ ಬರೆಯುವ ಎಸ್ಸೆಸ್ಸೆಲ್ಸಿ ಮಕ್ಕಳ ಉತ್ಸಾಹ ನೋಡಿದರೇ ಈ ಬಾರಿ ಉತ್ತಮ ಫಲಿತಾಂಶ ನಮ್ಮ ಜಿಲ್ಲೆಗೆ ಬರುತ್ತದೆ ಎಂದು ಸಂಸದರು ವಿಶ್ವಾಸ ವ್ಯಕ್ತಪಡಿಸಿದರು. ಧೈರ್ಯದಿಂದ ಮತ್ತು ಆತ್ಮಸ್ಥೈರ್ಯದಿಂದ ಎಲ್ಲಾ ಪರೀಕ್ಷೆಯನ್ನು ಬರೆಯಲಿ ಎಂದು ಸಂಸದ ಶ್ರೇಯಸ್. ಎಂ. ಪಟೇಲ್ ಶುಭ ಹಾರೈಸಿದರು.

ಪರೀಕ್ಷಾ ಹಬ್ಬ:

ನಗರದ ಶ್ರೀ ಗಂಧದ ಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಶಾಲೆಯ ಪರೀಕ್ಷಾ ಕೇಂದ್ರಗಳಿಗೆ ಶುಕ್ರವಾರ ಭೇಟಿ ನೀಡಿದ ಸಂಸದರು, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳಿಗೆಲ್ಲಾ ಗುಲಾಬಿ ನೀಡಿ ಪರೀಕ್ಷಾ ಹಬ್ಬದ ರೀತಿ ತೆಗೆದುಕೊಂಡು ಪರೀಕ್ಷೆಯನ್ನು ಧೈರ್ಯದಿಂದ ಬರೆಯುವಂತೆ ಮಕ್ಕಳಿಗೆ ಶುಭ ಹಾರೈಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಈಗಾಗಲೇ ರಾಜ್ಯಾದ್ಯಂತ ಪ್ರಾರಂಭವಾಗಿದ್ದು, ಇದನ್ನು ಪರೀಕ್ಷಾ ಹಬ್ಬ ಎಂದು ಕರೆಯಬಹುದು. ನಮ್ಮ ಜಿಲ್ಲೆಯಲ್ಲೂ ಕೂಡ ಸುಮಾರು ೭೭ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದ್ದು, ಸುಮಾರು ೨೦ ಸಾವಿರಕ್ಕೂ ಹೆಚ್ಚು ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಮೊದಲ ಪರೀಕ್ಷೆಯನ್ನು ಪ್ರಥಮ ಭಾಷೆ ಕನ್ನಡ ಬರೆಯುತ್ತಿದ್ದು, ಜಿಲ್ಲಾ ಡಿಡಿಪಿಐ, ಎಲ್ಲಾ ಬಿಇಒಗಳು ಪರೀಕ್ಷೆ ಬರೆಯಲು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಾರೆ ಎಂದರು.

ಉತ್ತಮ ಫಲಿತಾಂಶ ನಿರೀಕ್ಷೆ:

ಈ ಬಾರಿ ನಮ್ಮ ಹಾಸನ ಜಿಲ್ಲೆ ರಾಜ್ಯಕ್ಕೆ ಪ್ರಥಮ ಬರುತ್ತೇವೆ ಎಂದು ಭಾವಿಸುತ್ತೇವೆ. ಮಕ್ಕಳನ್ನು ಪರೀಕ್ಷೆಗೆ ಸಿದ್ಧ ಮಾಡುವುದರಲ್ಲಿ ಸರಕಾರಿ ಶಾಲೆ ಶಿಕ್ಷಕರಾಗಿರಬಹುದು, ಖಾಸಗಿ ಶಾಲೆಯ ಶಿಕ್ಷಕರಾಗಿರಬಹುದು ಅದ್ಭುತವಾಗಿ ಶ್ರಮ ಹಾಕಿದ್ದು, ಅವರಿಗೆಲ್ಲಾ ಧನ್ಯವಾದಗಳನ್ನು ಹೇಳುತ್ತೇನೆ. ಪರೀಕ್ಷೆ ಬರೆಯುವ ಎಸ್ಸೆಸ್ಸೆಲ್ಸಿ ಮಕ್ಕಳ ಹುರುಪು ನೋಡಿದರೇ ಈ ಬಾರಿ ಉತ್ತಮ ಫಲಿತಾಂಶ ನಮ್ಮ ಜಿಲ್ಲೆಗೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಕ್ಕಳಿಗೆಲ್ಲಾ ಒಳ್ಳೆಯದಾಗಲಿ ಎಂದು ಮಾಧ್ಯಮದ ಮೂಲಕ ಶುಭ ಹಾರೈಸುತ್ತಿದ್ದೇನೆ. ಇನ್ನು ಐದು ಪರೀಕ್ಷೆಗಳಿದ್ದು, ಎಲ್ಲಾವನ್ನು ಧೈರ್ಯವಾಗಿ ಬರೆಯಲಿ ಎಂದು ಭಗವಂತನಲ್ಲಿ ಕೇಳುವುದಾಗಿ ಹೇಳಿದರು.

ಪರೀಕ್ಷೆಗೆ ಸಕಲ ಸಿದ್ಧತೆ:

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್ ಮಾಧ್ಯಮದೊಂದಿಗೆ ಮಾತನಾಡಿ, ಶುಕ್ರವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗಿದ್ದು, ಪ್ರಥಮ ಭಾಷೆ ಕನ್ನಡ ಭಾಷೆಯ ಪರೀಕ್ಷೆ ಮೊದಲ ದಿನದಂದು ಬರೆಯುತ್ತಿದ್ದು, ಪರೀಕ್ಷೆ ಬರೆಯುವ ಕೇಂದ್ರಕ್ಕೆ ಸಂಸದರು ಆಗಮಿಸಿ ಮಕ್ಕಳಿಗೆಲ್ಲಾ ಶುಭಾಶಯ ಕೋರಿದ್ದಾರೆ. ಮಕ್ಕಳು ಪರೀಕ್ಷೆ ಬರೆಯಲು ಎಲ್ಲಾ ಸಿದ್ಧತೆ ಮಾಡಿಕೊಡಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವ ಸಮಸ್ಯೆ ಆಗದಂತೆ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದ್ದರೇ ಪ್ರತಿ ಕೇಂದ್ರದಲ್ಲೂ ಕೂಡ ಆರೋಗ್ಯ ಕಲ್ಯಾಣ ಇಲಾಖೆಯಿಂದ ನೇಮಕ ಮಾಡಲಾಗಿದೆ ಎಂದರು. ಪೊಲೀಸ್ ಬಿಗಿ ಬಂದು ಬಸ್ತ್‌ನೊಡನೆ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಈಗಾಗಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಮೊದಲೇ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೨೦ ಸಾವಿರದ ೩೪೪ ವಿದ್ಯಾರ್ಥಿಗಳು ೭೭ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಈ ಪರೀಕ್ಷೆಯನ್ನು ಬಹಳ ಪಾರದರ್ಶಕವಾಗಿ ನಡೆಸಲಾಗುತ್ತಿದ್ದು, ಸಿಸಿ ಕ್ಯಾಮರಾ ಕೂಡ ಅಳವಡಿಸಲಾಗಿದೆ. ಜಿಲ್ಲಾ ಪಂಚಾಯಿತಿಯಲ್ಲೂ ಕೂಡ ವೆಬ್ ಕಾಮ್‌ನ ನಿಯಂತ್ರಣ ಕೇಂದ್ರ ಅಳವಡಿಸಲಾಗಿದೆ. ಮಕ್ಕಳನ್ನು ಒತ್ತಡ ರಹಿತವಾಗಿ ಪರೀಕ್ಷೆ ಬರೆಯಲು ಪೋಷಕರು ಅವಕಾಶ ಮಾಡಿಕೊಡಬೇಕು ಎಂದು ಕಿವಿಮಾತು ಹೇಳಿದರು. ಪರೀಕ್ಷೆ ಪೇಪರ್ ಔಟಾಗಿದೆ ಎಂದು ಯಾವುದೇ ಒಂದು ಸುಳ್ಳು ವದಂತಿಗೂ ಕೂಡ ಕಿವಿಗೊಡಬಾರದು ಎಂದು ಹೇಳಿದರು. ಇನ್ನು ಮಾರ್ಚ್‌ ೨೨ರಂದು ಕರ್ನಾಟಕ ಬಂದ್ ಕರೆ ಕೊಡಲಾಗಿದ್ದರೂ ಶನಿವಾರದಂದು ಪರೀಕ್ಷೆ ಇಲ್ಲದಿರುವುದರಿಂದ ಮಕ್ಕಳಿಗೆ ಯಾವ ಸಮಸ್ಯೆ ಆಗುವುದಿಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಮಕ್ಕಳು ಶುಕ್ರವಾರ ಬೆಳಿಗ್ಗೆ ೮:೩೦ರಿಂದಲೇ ತಮ್ಮ ಪರೀಕ್ಷಾ ಕೇಂದ್ರಗಳಲ್ಲಿ ಜಮಾಯಿಸಿದ್ದರು. ಕೆಲವರು ಕೊನೆ ಕ್ಷಣದ ಸಿದ್ಧತೆಯಲ್ಲಿ ಕುಳಿತು ಓದುತ್ತಿದ್ದರೇ ಇನ್ನು ಕೆಲ ವಿದ್ಯಾರ್ಥಿಗಳು ಕನ್ನಡ ಭಾಷೆ ಈಜೀ ಎಂದು ಸಂತೋಷದಿಂದ ಸ್ನೇಹಿತರೊಡನೆ ಮಾತನಾಡಿ ಸಮಯ ಕಳೆಯುತ್ತಿದ್ದರು. ಇನ್ನು ಸ್ವಲ್ಪ ಸಮಯ ತಡವಾಗಿ ಬಂದ ವಿದ್ಯಾರ್ಥಿಗಳು ಕೊಠಡಿ ಸಂಖ್ಯೆಯನ್ನು ಗಾಬರಿಯಿಂದ ನೋಟಿಸ್ ಬೋರ್ಡಿನಲ್ಲಿ ವೀಕ್ಷಣೆ ಮಾಡುತ್ತಿದ್ದು, ಈ ವೇಳೆ ಪೊಲೀಸ್ ಪೇದೆ ಓರ್ವರು ಮಾನವೀಯತೆ ದೃಷ್ಠಿಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದರು.

ಪರೀಕ್ಷಾ ಕೇಂದ್ರಗಳಲ್ಲಿ ತಪಾಸಣೆ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುಳಾ ಉಪಸ್ಥಿತರಿದ್ದರು.