ಹನೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಂಸದರಿಗೆ ಸನ್ಮಾನಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಅಭಿವೃದ್ಧಿ ಕಾರ್ಯಗಳ ಪರಿಶೀಲನೆಗೆ ಆಗಮಿಸಿದ್ದ ಸಂಸದ ಸುನೀಲ್ ಬೋಸ್ ಅವರನ್ನು ಹನೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸಿದರು.ಪಾಲಾರ್‌ ಗ್ರಾಮದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಸದರು ಆಗಮಿಸಿದರು.

ಸಂಸದರನ್ನು ಸ್ವಾಗತಿಸಿ ಮಾತನಾಡಿದ ಸಂಘದ ಅಧ್ಯಕ್ಷ ದೇವರಾಜ್ ನಾಯ್ಡು, ಚಾಮರಾಜನಗರ ಜಿಲ್ಲೆಯ 5 ತಾಲೂಕುಗಳ ಪೈಕಿ ಹನೂರು ತಾಲೂಕಿನಲ್ಲಿಯೇ ಮೊಟ್ಟಮೊದಲ ಬಾರಿಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ವಂತ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದು ನಮಗೆಲ್ಲ ಹೆಮ್ಮೆಯ ವಿಷಯ’ ಎಂದು ಹೇಳಿದರು.

‘ಭವನ ನಿರ್ಮಾಣಕ್ಕೆ ಮಾಜಿ ಶಾಸಕ ಆರ್‌. ನರೇಂದ್ರ ಅವರು 10 ಸೆಂಟ್ಸ್‌ ಸರ್ಕಾರಿ ನಿವೇಶನ ಮಂಜೂರು ಮಾಡಿಸಿಕೊಟ್ಟು 5 ಲಕ್ಷ ರು. ಅನುದಾನ ನೀಡಿದ್ದರು. ನಂತರ ಮಾಜಿ ಸಂಸದ ದಿ। ವಿ. ಶ್ರೀನಿವಾಸ್ ಪ್ರಸಾದ್ ಅವರು ಹಾಗೂ ಹಾಲಿ ಶಾಸಕ ಎಂ.ಆರ್‌. ಮಂಜುನಾಥ್ ಅವರು ಕೂಡ ಶಾಸಕರ ಹಾಗೂ ಸಂಸದರ ನಿಧಿಯಿಂದ ಅನುದಾನ ನೀಡಿದ್ದಾರೆ. ಆದರೂ ಕಟ್ಟಡದ ಕಾಮಗಾರಿ ಪೂರ್ಣವಾಗುವುದಿಲ್ಲ. ಭವನದ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಳ್ಳಲು ಅಂದಾಜು 20-25 ಲಕ್ಷ ರು. ಹೆಚ್ಚುವರಿ ಅನುದಾನದ ಅಗತ್ಯವಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸಂಸದರ ನಿಧಿಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ’ ಮನವಿ ಮಾಡಿದರು.

ಮಾಜಿ ಶಾಸಕ ಆರ್‌. ನರೇಂದ್ರ ಮಾತನಾಡಿ, ‘ಹನೂರು ತಾಲೂಕು ಸಂಪೂರ್ಣವಾಗಿ ಅರಣ್ಯ ಮತ್ತು ಕಾಡಂಚಿನ ಗ್ರಾಮಗಳನ್ನು ಹೊಂದಿದೆ. ಕಾಡು ಪ್ರಾಣಿಗಳ ದಾಳಿ, ಕೃಷಿ ಸಮಸ್ಯೆ, ಮೂಲಭೂತ ಸೌಲಭ್ಯಗಳ ಕೊರತೆ ಸೇರಿದಂತೆ ಇಲ್ಲಿನ ಜನರ ಸಮಸ್ಯೆಗಳನ್ನು ಸರ್ಕಾರದವರೆಗೆ ತಲುಪಿಸುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರು ರಾತ್ರಿ ಹಗಲು ಎನ್ನದೆ ಕೆಲಸ ಮಾಡುತ್ತಾರೆ’ ಎಂದು ಪತ್ರಕರ್ತರ ಕೆಲಸವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.


‘ನಾನು ಶಾಸಕನಾಗಿದ್ದಾಗ ಪತ್ರಕರ್ತರಿಗೆ ಒಂದು ಸೂಕ್ತ ಕಟ್ಟಡ ಇರಬೇಕು ಎಂಬ ಉದ್ದೇಶದಿಂದ ಜಾಗ ಮಂಜೂರು ಮಾಡಿಸಿ ಅನುದಾನ ನೀಡಿದ್ದೆ. ಈಗ ಕಟ್ಟಡ ಆರಂಭವಾಗಿದೆ. ಇದನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕಾಗಿದೆ. ಸಂಸದ ಸುನೀಲ್ ಬೋಸ್ ಅವರು ಈ ವಿಷಯದಲ್ಲಿ ವಿಶೇಷ ಆಸಕ್ತಿ ವಹಿಸಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು’ ಎಂದು ಅವರು ಸಂಸದರಿಗೆ ಮನವಿ ಮಾಡಿದರು.

ಪತ್ರಕರ್ತರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಸದ ಸುನೀಲ್ ಬೋಸ್ ಅವರು, ‘ಪ್ರಜಾಪ್ರಭುತ್ವದಲ್ಲಿ ಮಾಧ್ಯಮದ ಪಾತ್ರ ಬಹಳ ದೊಡ್ಡದು. ಜನರ ಧ್ವನಿಯಾಗಿ ಕೆಲಸ ಮಾಡುವ ಪತ್ರಕರ್ತರಿಗೆ ಸರ್ಕಾರದಿಂದಲೂ ಗೌರವ ಸಿಗಬೇಕು’ ಎಂದು ಹೇಳಿದರು.

‘ಹನೂರು ಭಾಗದ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ಈಗಾಗಲೇ ಈ ಭವನಕ್ಕೆ ಹಿಂದಿನ ಜನಪ್ರತಿನಿಧಿಗಳು ಅನುದಾನ ನೀಡಿರುವುದು ಸಂತಸದ ವಿಷಯ. ಕಾಮಗಾರಿ ಪೂರ್ಣಗೊಳಿಸಲು ಇನ್ನೂ ಅನುದಾನ ಬೇಕು ಎಂದು ನೀವು ಹೇಳಿದ್ದೀರಿ. ನಾನು ಸಂಸದನಾದ ಮೇಲೆ ಕ್ಷೇತ್ರದ ಪ್ರತಿಯೊಂದು ಸಂಘ ಸಂಸ್ಥೆಗಳಿಗೂ ನೆರವು ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಭವನದ ಮುಂದುವರೆದ ಕಾಮಗಾರಿಗೆ ಅಗತ್ಯವಿರುವ ಅನುದಾನವನ್ನು ನನ್ನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಬಿಡುಗಡೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಮಹಾದೇಶ್ ಎಂ, ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭುಸ್ವಾಮಿ ಎಂ, ಖಜಾಂಚಿ ಸೋಮಶೇಖರ್‌. ಆರ್‌, ಉಪಾಧ್ಯಕ್ಷರಾದ ಗೋವಿಂದ ಕೆ, ರಮೇಶ್, ಸಹ ಕಾರ್ಯದರ್ಶಿ ನಂದೀಶ್, ಸದಸ್ಯ ಮಹದೇವಸ್ವಾಮಿ ಜಿ, ಅಭಿಲಾಶ್, ವಿಜಯ ಕುಮಾರ್‌, ನಿರಂಜನ್, ಶಿವಕುಮಾತ್‌, ಪತ್ರಕರ್ತ ರಾಜೇಶ್ ಸೇರಿದಂತೆ ಹಲವರು ಹಾಜರಿದ್ದರು.

--

23ಸಿಎಚ್‌ಎನ್‌51

ಹನೂರು ಪಟ್ಟಣಕ್ಕೆ ಆಗಮಿಸಿದ ಸಂಸದ ಸುನಿಲ್ ಬೋಸ್ ಅವರಿಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

===

ಇಂದು ಪತ್ರಿಕಾ ದಿನಾಚರಣೆ

ಹನೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹನೂರು ತಾಲೂಕು ಘಟಕದಿಂದ ಪತ್ರಿಕಾ ದಿನಾಚರಣೆ ಸಮಾರಂಭವನ್ನು ಜು.24ರ ಶುಕ್ರವಾರ ಬೆಳಗ್ಗೆ 10ಕ್ಕೆ ಕಮ್ಮವಾರಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹ್ಮಠದ ಪೀಠಾಧ್ಯಕ್ಷ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ವಹಿಸಲಿದ್ದಾರೆ.

ಹನೂರು ಶಾಸಕ ಎಂ.ಆರ್‌. ಮಂಜುನಾಥ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಂಸದ ಸುನೀಲ್ ಬೋಸ್ ಜ್ಯೋತಿ ಬೆಳಗಲಿದ್ದಾರೆ. ಮಾಜಿ ಶಾಸಕ ಆರ್‌. ನರೇಂದ್ರ ಅವರು ಡಿವಿಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ. ದೇವರಾಜ ನಾಯ್ಡು ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್‌.ಎನ್. ಸಿದ್ದಲಿಂಗಸ್ವಾಮಿ ಅವರು ಆಶಯ ನುಡಿಗಳನ್ನಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಶಾಸಕಿ ಪರಿಮಳ ನಾಗಪ್ಪ, ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಜನಧ್ವನಿ ಬಿ. ವೆಂಕಟೇಶ್, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಎಸ್. ದತ್ತೇಶ್‌ ಕುಮಾರ್‌, ಸಮಾಜ ಸೇವಕ ಹಾಗೂ ಬಿಜೆಪಿ ಮುಖಂಡ ನಿಶಾಂತ್, ತಹಸೀಲ್ದಾರ್‌ ಚೈತ್ರ ಕೆ.ಎನ್, ಇಒ ಉಮೇಶ್, ಹನೂರು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಆನಂದ್ ಮೂರ್ತಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ರೇಖಾ, ಕಮ್ಮ ಸಮುದಾಯದ ಅಧ್ಯಕ್ಷ ದಿನಮಣಿ ನಾಯ್ಡು, ರಾಜ್ಯ ಸಮಿತಿ ಸದಸ್ಯ ಮಹೇಂದ್ರ ಸಿ, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್. ಲಕ್ಕೂರು ಭಾಗವಹಿಸಲಿದ್ದಾರೆ.ಸಮಾರಂಭದಲ್ಲಿ ಶ್ರೀಮತಿ ಸಾವಿತ್ರಮ್ಮ ಗೋವಿಂದ ನಾಯ್ಡು ದತ್ತಿ ಪ್ರಶಸ್ತಿಯನ್ನು ವಿಜಯವಾಣಿ ತಾಲೂಕು ವರದಿಗಾರ ಎಸ್. ಲಿಂಗರಾಜು ಅವರಿಗೆ ನೀಡಿ ಗೌರವಿಸಲಾಗುವುದು.ಅದೇ ರೀತಿ ಸೆಸ್ಕಾಂ ಹನೂರು ಉಪವಿಭಾಗದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಎಇಇ ರಂಗಸ್ವಾಮಿ ಅವರಿಗೆ ಉತ್ತಮ ಸೇವಕ ಪ್ರಶಸ್ತಿ ನೀಡಲಾಗುವುದು.

ತಾಲೂಕಿನ ಎಲ್ಲಾ ಪತ್ರಕರ್ತ ಮಿತ್ರರು ಸಮಾರಂಭದಲ್ಲಿ ಭಾಗವಹಿಸಬೇಕು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ. ದೇವರಾಜ ನಾಯ್ಡು ಮತ್ತು ಪ್ರಧಾನ ಕಾರ್ಯದರ್ಶಿ ಪ್ರಭುಸ್ವಾಮಿ. ಎಂ ಮನವಿ ಮಾಡಿದ್ದಾರೆ.