ಸಾರಾಂಶ
ಗುಂಡ್ಲುಪೇಟೆ ತಾಲೂಕಿನ ಮೂಡುಗೂರು ಸಹಕಾರ ಸಂಘದ ಚುನಾವಣೆಯಲ್ಲಿ ಎಂ.ಪಿ.ಸುನೀಲ್ ಬಣದ ಅಭ್ಯರ್ಥಿಗಳು ಜಯಗಳಿಸಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಮೂಡುಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ನಾಯಕ ಎಂ.ಪಿ.ಸುನೀಲ್ ಬಣ ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.ಸಂಘದ ೧೨ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ನಾಯಕ ಎಂ.ಪಿ.ಸುನೀಲ್ ಬಣದ ಸಾಲಗಾರರಲ್ಲದ ಕ್ಷೇತ್ರದಿಂದ ಎಂ.ಎ.ವೃಷಬೇಂದ್ರಪ್ಪ, ಸಾಲಗಾರರ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಪುಟ್ಟಸಿದ್ದಮ್ಮ, ಸಾಲಗಾರರ ಮಹಿಳಾ ಮೀಸಲು ಕ್ಷೇತ್ರದಿಂದ ನಾಗರತ್ನಮ್ಮ ಹಾಗೂ ಮಹದೇವಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರು. ೮ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎಂ.ಪಿ.ಸುನೀಲ್ ಸೇರಿದಂತೆ ೮ ಮಂದಿ ೮ ಕ್ಷೇತ್ರಗಳಿಗೆ ಸ್ಪರ್ಧಿಸಿದರೆ, ಬಿಜೆಪಿ ಬೆಂಬಲಿತರು ೭ ಕ್ಷೇತ್ರಗಳಿಗೆ ಸ್ಪರ್ಧಿಸಿ, ಚುನಾವಣೆ ಎದುರಿಸಿದರು. ಚುನಾವಣೆಯಲ್ಲಿ ಎಂ.ಪಿ.ಸುನೀಲ್ ಬಣದ ಎಲ್ಲಾ ಕ್ಷೇತ್ರಗಳಲ್ಲೂ ಜಯಭೇರಿ ಭಾರಿಸಿದರು. ೭ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತರೆಲ್ಲ ಸೋಲುಂಡು ಎಂ.ಪಿ.ಸುನೀಲ್ ಬಣದ ಎದುರು ಮಂಡಿಯೂರಿದರು.
ಪ್ರತಿಷ್ಠೆ ಕಣವಾಗಿದ್ದ ಸಾಲಗಾರರ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಂ.ಪಿ.ಸುನೀಲ್ ಎಲ್ಲಾ ಅಭ್ಯರ್ಥಿಗಳಿಂತ ಹೆಚ್ಚಿನ ಮತಗಳಲ್ಲಿ ಗೆದ್ದು ವಿರೋಧಿ ಬಣಕ್ಕೆ ಹಣ್ಣು ಗಾಯಿ ನೀರುಗಾಯಿ ಮಾಡಿದ್ದಾರೆ.ಬಿಜೆಪಿಗೆ ಮುಖಭಂಗ:
ಮೂಡುಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲೇ ಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಹಠಕ್ಕೆ ಬಿದ್ದು ಅಭ್ಯರ್ಥಿಗಳ ಕಣಕ್ಕಿಳಿಸಿದ್ದರು. ಆದರೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿದ್ದ ಸ್ಪರ್ಧಿಸಿದ್ದವರೆಲ್ಲರೂ ಸೋಲು ಕಾಣುವ ಮೂಲಕ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಎಂ.ಪಿ.ಸುನೀಲ್ ಬೆಂಬಲಿಗರು ಜಯಗಳಿಸುತ್ತಿದ್ದಂತೆಯೇ ಸುನೀಲ್ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಮಯದಲ್ಲಿ ಮೂಡುಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯ ಜನರಿದ್ದರು. ಎಂ.ಪಿ.ಸುನೀಲ್ ಬಣ ಜಯಭೇರಿಗೆ ಗ್ರಾಮದ ಕಾಂಗ್ರೆಸ್ಸಿಗರು ಬೆಂಬಲಿಸಿದ್ದಾರೆ.