ಸ್ಮಶಾನಗಳ ಅಭಿವೃದ್ಧಿಗೆ ಸಂಸದ ತುಕಾರಾಂ ತಾಕೀತು

| Published : Sep 11 2024, 01:13 AM IST

ಸಾರಾಂಶ

ಮಂಗಳವಾರ ಹೊಸಪೇಟೆಯ ಜಿಲ್ಲಾಡಳಿತ ಭವನದಲ್ಲಿ ಕೇಂದ್ರ ಪುರಷ್ಕೃತ ಕಾರ್ಯಕ್ರಮಗಳ 2024-25ನೇ ಸಾಲಿನ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ವೇಳೆ ಸ್ಮಶಾನಗಳ ಅಭಿವೃದ್ಧಿ ಕುರಿತು ಚರ್ಚೆ ನಡೆಯಿತು.

ಹೊಸಪೇಟೆ: ಜಿಲ್ಲೆಯ ಗ್ರಾಮೀಣ ಭಾಗದ 586 ಸ್ಮಶಾನಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಬೇಕು. ಸ್ಮಶಾನಗಳಿಗೆ ತೆರಳಲು ರಸ್ತೆಗಳೇ ಇಲ್ಲ. ಹೀಗಿದ್ದರೂ ಕ್ರಮವಹಿಸಲಾಗುತ್ತಿಲ್ಲ ಎಂದು ಬಳ್ಳಾರಿ ಸಂಸದ ಈ. ತುಕಾರಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಕೇಂದ್ರ ಪುರಷ್ಕೃತ ಕಾರ್ಯಕ್ರಮಗಳ 2024-25ನೇ ಸಾಲಿನ ಪ್ರಗತಿ ಪರಿಶೀಲನಾ ಸಭೆ (ದಿಶಾ)ಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ನವೆಂಬರ್‌ನಲ್ಲಿ ನಡೆದ ದಿಶಾ ಸಭೆಯಲ್ಲೇ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಅವರು 586 ಸ್ಮಶಾನಗಳನ್ನು ಅಭಿವೃದ್ಧಿಪಡಿಸಲು ಸೂಚಿಸಿದ್ದಾರೆ. ಆದರೆ, ಈಗ ಬರೀ 60 ಸ್ಮಶಾನಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಜಿಪಂ ಅಧಿಕಾರಿ ಭೀಮಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿ ದಿವಾಕರ್‌ ಮಾತನಾಡಿ, ಮೊದಲು ಕೆಲಸ ಮಾಡೋದನ್ನು ಕಲಿತುಕೊಳ್ಳಿ. ನೀವು ಕ್ರಿಯಾಯೋಜನೆ ರೂಪಿಸಿ ಕೊಡಿ, ಜಿಪಂ ಸಿಇಒ ಅಕ್ರಮ್‌ ಶಾ ಅವರು ಅನುಮೋದನೆ ನೀಡುತ್ತಾರೆ ಎಂದು ಖಾರವಾಗಿಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹಳ್ಳಿಗಳಿಗೆ ಭೇಟಿ ಕೊಡಿ

ಜಿಲ್ಲಾಮಟ್ಟದ ಅಧಿಕಾರಿಗಳು ಗ್ರಾಮೀಣ ಭಾಗಕ್ಕೆ ತೆರಳಬೇಕು. ಹಳ್ಳಿಗಳಿಗೆ ಭೇಟಿ ನೀಡಿದಾಗಲೇ ಕೆಲಸ ಮಾಡಲು ಸಾಧ್ಯ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಮಗೆಲ್ಲರಿಗೂ ಕೆಲಸ ಮಾಡಲು ಇದೊಂದು ಅವಕಾಶ ಸಿಕ್ಕಿದೆ. ಹಾಗಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಂದು ಟೀಮ್‌ ಆಗಿ ಕೆಲಸ ಮಾಡಬೇಕು ಎಂದರು.

ಕೃಷಿ ವಲಯಕ್ಕೆ ಮಾಸ್ಟರ್‌ ಪ್ಲಾನ್‌

ವಿಜಯನಗರ ಜಿಲೆಯ ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ಮತ್ತು ಹರಪನಹಳ್ಳಿ ತಾಲೂಕುಗಳಲ್ಲಿ ನುರಿತ ಕೃಷಿತಜ್ಞರ ತಂಡದಿಂದ ಸಮೀಕ್ಷೆ ನಡೆಸಿ ಮಾಸ್ಟರ್‌ ಪ್ಲಾನ್‌ ರೂಪಿಸಬೇಕು. ತಜ್ಞರ ಮಾರ್ಗದರ್ಶನದಂತೆ ಜಿಲ್ಲೆಯ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಲು ವಿಶೇಷ ಕ್ರಮ ವಹಿಸಬೇಕು ಎಂದು ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.

ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಮಣ್ಣಿನ ಗುಣವನ್ನಾಧರಿಸಿ ರೈತರು ಬೆಳೆ ಬೆಳೆಯಬೇಕು. ರೇಷ್ಮೆ, ಹುಣಸೆ, ದ್ರಾಕ್ಷಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ಒಂದು ಮಾಸ್ಟರ್ ಪ್ಲಾನ್ ಮಾಡಬೇಕು. ಜಿಲ್ಲೆಯ ಯಾವ ಯಾವ ತಾಲೂಕಿನಲ್ಲಿ ಯಾವ ರೀತಿಯ ಮಣ್ಣು ಇದೆ. ಯಾವ ಕಡೆಗೆ ಯಾವ ರೀತಿ ಬೆಳೆಯುತ್ತಾರೆ ಎಂಬುದರ ಬಗ್ಗೆ ಅಧ್ಯಯನ ನಡೆಸಿ ಸಮಗ್ರ ವರದಿ ನೀಡಬೇಕು. ಶಾಸಕರೆಲ್ಲರೂ ಒಟ್ಟುಗೂಡಿ ಈ ಬಗ್ಗೆ ಸಮಗ್ರ ಚರ್ಚಿಸಿ, ಯಾವ ಮಣ್ಣಿನಲ್ಲಿ ಯಾವ ರೀತಿ ಬೆಳೆ ಬೆಳೆದರೆ ಹೆಚ್ಚು ಲಾಭವಾಗುತ್ತದೆ ಎಂಬುದರ ಬಗ್ಗೆ ಜಿಲ್ಲೆಯ ರೈತರಿಗೆ ಹೊಸದೊಂದು ಮಾರ್ಗದರ್ಶಿ ಯೋಜನೆ ರೂಪಿಸೋಣ ಎಂದರು.

ನಿಖರ ಅಂಕಿ-ಅಂಶ ಇರಲಿ

ಜಿಲ್ಲೆಯ ತಾಲೂಕುವಾರು ಜನಸಂಖ್ಯೆ ವಿವರ, ತಾಲೂಕುವಾರು ಆಸ್ಪತ್ರೆಗಳ ವಿವರದೊಂದಿಗೆ ಸಭೆಗೆ ಆಗಮಿಸಬೇಕು ಎಂದು ಆರ್‌ಸಿಎಚ್‌ಒ ಡಾ. ಬಿ. ಜಂಬಯ್ಯ ಅವರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಇದುವರೆಗೆ 3208 ಜನರಿಗೆ ರಕ್ತ ತಪಾಸಣೆ ನಡೆಸಿದ್ದು, ಈ ಪೈಕಿ 222 ಜನರಲ್ಲಿ ಡೆಂಘೀ ಸೋಂಕು ಪತ್ತೆಯಾಗಿದ್ದು, ಚಿಕಿತ್ಸೆ ಪಡೆದು ಎಲ್ಲರೂ ಗುಣಮುಖರಾಗಿದ್ದಾರೆ ಎಂದು ಡಾ. ಷಣ್ಮುಖ ನಾಯ್ಕ ಸಭೆಗೆ ಮಾಹಿತಿ ನೀಡಿದರು.

ಅಪೌಷ್ಟಿಕ ಮಕ್ಕಳ ಸಂಖ್ಯೆ ಶೂನ್ಯಕ್ಕಿಳಿಯಲಿ

ಅಂಗನವಾಡಿಗಳು ಸುಧಾರಣೆಯಾಗಬೇಕು. ಗುಣಮಟ್ಟದ ಆಹಾರ ಪೂರೈಕೆ ಮತ್ತು ಸಕಾಲಕ್ಕೆ ಚಿಕಿತ್ಸೆ ಕೊಡಿಸುವ ಮೂಲಕ ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆಯನ್ನು ಶೂನ್ಯಕ್ಕಿಳಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಇಲಾಖೆಯ ಉಪ ನಿರ್ದೇಶಕಿ ಶ್ವೇತಾ ಅವರಿಗೆ ಸಂಸದರು ಸೂಚಿಸಿದರು.

ಅಪೌಷ್ಟಿಕತೆ ಹೋಗಲಾಡಿಸಲು ಸಿಎಸ್‌ಆರ್‌ ನಿಧಿ ಸದ್ಬಳಕೆ ಮಾಡಿಕೊಳ್ಳಬೇಕು. ಜಿಲ್ಲೆಯ ಆರು ತಾಲೂಕುಗಳಲ್ಲೂ ವಿಶೇಷ ಕೇಂದ್ರಗಳನ್ನು ತೆರೆಯಬೇಕು. ಇದಕ್ಕಾಗಿ ಒಂದು ಯೋಜನೆ ರೂಪಿಸಿ ಕೊಟ್ಟರೆ ಎನ್‌ಎಂಡಿಸಿಯಿಂದ ನಾನು ಅನುದಾನ ಕೊಡಿಸುವೆ ಎಂದರು.

ಬಾಲ್ಯ ವಿವಾಹ ತಡೆಗಟ್ಟಿ

ಬಾಲ್ಯ ವಿವಾಹ, ಭ್ರೂಣ ಹತ್ಯೆ, ಫೋಕ್ಸೊ ಪ್ರಕರಣಗಳ ಚರ್ಚೆ ಬಂದಾಗ ಯಾರೂ ವಿಜಯನಗರ ಜಿಲ್ಲೆಯತ್ತ ಬೊಟ್ಟು ಮಾಡಬಾರದು. ಜಿಲ್ಲೆಯ ಹೆಸರು ಕೆಡಬಾರದು. ಜಿಲ್ಲಾಧಿಕಾರಿ, ಜಿಪಂ ಸಿಇಒ ಮತ್ತು ಎಸ್ಪಿಯವರು ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯಲ್ಲಿ ಪೋಕ್ಸೊ ಕಾಯಿದೆಯ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಯುದ್ಧೋಪಾದಿಯಲ್ಲಿ ಹಮ್ಮಿಕೊಳ್ಳಲು ತುರ್ತು ಕ್ರಮ ವಹಿಸಬೇಕು ಎಂದರು.

ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ, ಡಾ. ಎನ್.ಟಿ. ಶ್ರೀನಿವಾಸ್‌, ಎಲ್. ಕೃಷ್ಣ ನಾಯ್ಕ, ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ ಶಾ, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಸಹಾಯಕ ಆಯುಕ್ತ ವಿವೇಕಾನಂದ ಪಿ., ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಭೀಮ್ಪಪ ಲಾಳಿ, ಮುಖ್ಯ ಯೋಜನಾಧಿಕಾರಿ ಅನ್ನದಾನಸ್ವಾಮಿ ಜೆ.ಎಂ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ತಹಸೀಲ್ದಾರರು ಮತ್ತು ತಾಪಂ ಇಒಗಳು ಇದ್ದರು.