ಸಂಸದ ತುಕಾರಾಂ ಕುಟುಂಬಕ್ಕೆ ಟಿಕೆಟ್‌ ಬೇಡ

| Published : Oct 17 2024, 12:05 AM IST

ಸಾರಾಂಶ

ಸಂಡೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಹಾಗೂ ಮೀಸಲಾತಿ ಒಂದೇ ಕುಟುಂಬಕ್ಕೆ ಮೀಸಲಾಗುವುದು ಬೇಡ.

ಸಂಡೂರು: ಕಾಂಗ್ರೆಸ್ ಪಕ್ಷದ ಹಲವು ಸಮಾನ ಮನಸ್ಕ ಮುಖಂಡರು ಬುಧವಾರ ತಾಲೂಕಿನ ತೋರಣಗಲ್ಲಿನಲ್ಲಿ ಸಭೆ ನಡೆಸಿ, ಸಂಡೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಹಾಗೂ ಮೀಸಲಾತಿ ಒಂದೇ ಕುಟುಂಬಕ್ಕೆ ಮೀಸಲಾಗುವುದು ಬೇಡ. ಈ ಬಾರಿಯ ಉಪ ಚುನಾವಣೆಯಲ್ಲಿ ಸಂಸದ ಈ.ತುಕಾರಾಂ ಅವರ ಕುಟುಂಬವನ್ನು ಹೊರತುಪಡಿಸಿ ವಾಲ್ಮೀಕಿ ಸಮಾಜದ ಹಾಗೂ ಸಂತೋಷ್ ಲಾಡ್ ಅವರ ಅಭಿಮಾನಿಗಳಲ್ಲಿ ಒಬ್ಬರಿಗೆ ನೀಡುವಂತೆ ವರಿಷ್ಠರಿಗೆ ಮನವಿ ಮಾಡಲು ತೀರ್ಮಾನಿಸಿದರು.

ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಜಿಪಂ ಮಾಜಿ ಸದಸ್ಯ ಅಂತಾಪುರದ ತುಮಟಿ ಲಕ್ಷ್ಮಣ ಮಾತನಾಡಿ, ಈ ಹಿಂದೆ ಸಂಸದ ಈ.ತುಕಾರಾಂ ಹಲವು ಸಭೆ ಸಮಾರಂಭಗಳಲ್ಲಿ ತಮ್ಮನ್ನು ಹೊರತು ಪಡಿಸಿ ತಮ್ಮ ಕುಟುಂಬದವರು ಯಾರೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಸಮಾಜದ ಇತರರು ಬೆಳೆಯಬೇಕು ಎಂದು ಹೇಳಿಕೊಂಡಿದ್ದರು. ಈಗ ಅವರು ತಮ್ಮ ಅಭಿಪ್ರಾಯಕ್ಕೆ ಬದ್ಧರಾಗಬೇಕು. ಈಗಾಗಲೇ ತುಕಾರಾಂ ನಾಲ್ಕು ಬಾರಿ ವಿಧಾನಸಭಾ ಸದಸ್ಯರಾಗಿ, ಮಂತ್ರಿಯಾಗಿ, ಸಂಸದರಾಗಿ ಆಯ್ಕೆಯಾಗಿದ್ದಾರೆ. ವಾಲ್ಮೀಕಿ ಸಮಾಜ ದೊಡ್ಡದಿದೆ. ಹೀಗಾಗಿ ಈ ಬಾರಿ ಸಮಾಜದ ಬೇರೆಯವರಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.

ಈ ಹಿಂದೆ ಸಂತೋಷ್ ಲಾಡ್ ನನ್ನನ್ನು ಮಸ್ಕಿ ಕ್ಷೇತ್ರಕ್ಕೆ ಪಕ್ಷ ಸಂಘಟನೆಗೆ ಕಳುಹಿಸಿದ್ದರು. ನಾನು ೬ ತಿಂಗಳು ಅಲ್ಲಿ ಪಕ್ಷ ಸಂಘಟನೆ ಮಾಡಿದೆ. ನನಗೆ ಅಲ್ಲಿ ಟಿಕೆಟ್ ಸಿಗಲಿಲ್ಲ. ಈ ಬಾರಿ ಸಂಡೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ಕೇಳಿದ್ದೇನೆ. ಮೀಸಲಾತಿ ಒಂದೇ ಕುಟುಂಬಕ್ಕೆ ಸೀಮಿತವಾಗಬಾರದು ಎಂದರು.

ಸಭೆಯಲ್ಲಿ ಚರ್ಚಿತವಾದ ವಿಷಯವನ್ನು ಫೋನ್ ಮೂಲಕ ಮುಖಂಡರು ಸಂತೋಷ್ ಲಾಡ್ ಗಮನಕ್ಕೆ ತಂದರು. ಈ ಕುರಿತು ಚರ್ಚಿಸಲು ಗುರುವಾರ ಬೆಂಗಳೂರಿಗೆ ಬರಲು ಸಂತೋಷ್‌ ಲಾಡ್ ತಿಳಿಸಿದರು. ಈ ಹಿನ್ನೆಲೆಯಲ್ಲಿ ಪಕ್ಷದ ಹಲವು ಮುಖಂಡರು ಗುರುವಾರ ಬೆಂಗಳೂರಿಗೆ ತೆರಳಿ, ಲಾಡ್‌ಗೆ ಬೇಡಿಕೆ ಸಲ್ಲಿಸಲು ತೀರ್ಮಾನಿಸಿದರು.

ಸಭೆಯಲ್ಲಿ ಪಕ್ಷದ ಮುಖಂಡರಾದ ಪಿ.ರವಿಕುಮಾರ್, ಶಿವಕುಮಾರ್, ನವಲೂಟಿ ಜಯಣ್ಣ, ವಸಂತಕುಮಾರ್, ಕೆ.ವಿ. ಸುರೇಶ್, ಈರೇಶ್ ಶಿಂಧೆ, ಎ. ಪೊಂಪಣ್ಣ, ಸಿದ್ದೇಶ್, ಹೊಸಗೇರಪ್ಪ ಸೇರಿದಂತೆ ನೂರಾರು ಮುಖಂಡರು ಭಾಗವಹಿಸಿದ್ದರು.

ಸಂಡೂರು ತಾಲೂಕಿನ ತೋರಣಗಲ್ಲಿನಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ಸಮಾನ ಮನಸ್ಕರ ನಡೆಯಿತು.