ಕಳೆದ ವರ್ಷ ಕೆ.ಜಿ.ಗೆ ಸುಮಾರು ರು. 180 ರಷ್ಟಿದ್ದ ದಾಳಿಂಬೆ ಬೆಲೆ, ಪ್ರಸ್ತುತ ರು. 100-120ಕ್ಕೆ ಕುಸಿದಿದ್ದು, ಕೆಳದರ್ಜೆಯ ಹಣ್ಣುಗಳು ರು. 60ರ ಆಸುಪಾಸಿನಲ್ಲಿ ಮಾರಾಟವಾಗುತ್ತಿವೆ.

ದಾಳಿಂಬೆ ಬೆಲೆ ತೀವ್ರ ಕುಸಿತ । ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ಗೆ ಸಂಸದ ಡಾ. ಕೆ. ಸುಧಾಕರ್ ಪತ್ರ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯ ದಾಳಿಂಬೆ ಬೆಳೆಗಾರರು ಎದುರಿಸುತ್ತಿರುವ ತೀವ್ರ ಬೆಲೆ ಕುಸಿತದ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಅವರು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಕೇಂದ್ರ ಸರ್ಕಾರದ ತುರ್ತು ಮಧ್ಯಸ್ಥಿಕೆಗೆ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 2,500 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿದ್ದು, ಸಾವಿರಾರು ರೈತ ಕುಟುಂಬಗಳು ಈ ಬೆಳೆಯ ಮೇಲೆ ಅವಲಂಬಿತವಾಗಿವೆ. ಪ್ರಸಕ್ತ ಸಾಲಿನಲ್ಲಿ ಉತ್ತಮ ಇಳುವರಿ ಹಾಗೂ ಗುಣಮಟ್ಟದ ಬೆಳೆ ಬಂದಿದ್ದರೂ, ಮಾರುಕಟ್ಟೆಯಲ್ಲಿ ಉಂಟಾಗಿರುವ ದಿಢೀರ್ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸುಧಾಕರ್ ಅವರು ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ.

ಕಳೆದ ವರ್ಷ ಕೆ.ಜಿ.ಗೆ ಸುಮಾರು ರು. 180 ರಷ್ಟಿದ್ದ ದಾಳಿಂಬೆ ಬೆಲೆ, ಪ್ರಸ್ತುತ ರು. 100-120ಕ್ಕೆ ಕುಸಿದಿದ್ದು, ಕೆಳದರ್ಜೆಯ ಹಣ್ಣುಗಳು ರು. 60ರ ಆಸುಪಾಸಿನಲ್ಲಿ ಮಾರಾಟವಾಗುತ್ತಿವೆ. ಮತ್ತೊಂದೆಡೆ, ಗೊಬ್ಬರ, ನೀರಾವರಿ, ಕಾರ್ಮಿಕರ ಕೂಲಿ ಹಾಗೂ ತೋಟದ ನಿರ್ವಹಣಾ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವುದರಿಂದ, ಪ್ರಸ್ತುತ ಮಾರುಕಟ್ಟೆ ದರವು ರೈತರಿಗೆ ಗಣನೀಯ ನಷ್ಟವನ್ನುಂಟುಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

“ಉತ್ತಮ ಇಳುವರಿ ಬಂದಿದ್ದರೂ, ಬೆಲೆ ಕುಸಿತದಿಂದ ರೈತರಿಗೆ ಅದರ ಪ್ರಯೋಜನ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಉತ್ಪಾದಿಸುವ ಬೆಳೆ ಅವರಿಗೆ ನಷ್ಟದ ಮೂಲವಾಗಬಾರದು. ದಾಳಿಂಬೆ ಶೀಘ್ರ ಹಾಳಾಗುವ ಬೆಳೆಯಾಗಿರುವುದರಿಂದ, ಬೆಲೆ ಸುಧಾರಿಸುವವರೆಗೆ ರೈತರು ತಮ್ಮ ಉತ್ಪನ್ನವನ್ನು ದೀರ್ಘಕಾಲ ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ರೈತರು ಅನಿವಾರ್ಯವಾಗಿ ಕಡಿಮೆ ಬೆಲೆಗೆ ಉತ್ಪನ್ನ ಮಾರಾಟ ಮಾಡುವ ‘ಡಿಸ್ಟ್ರೆಸ್ ಸೇಲ್ (Distress Sale)’ ಪರಿಸ್ಥಿತಿಗೆ ಸಿಲುಕುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಕ್ಷಣದ ಮಾರುಕಟ್ಟೆ ಮಧ್ಯಸ್ಥಿಕೆ ಅಗತ್ಯ ಎಂದು ಸಂಸದರು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರದ ಮುಂದೆ ಪ್ರಮುಖ ಬೇಡಿಕೆಗಳು

ದಾಳಿಂಬೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಡಾ. ಸುಧಾಕರ್ ಅವರು ಹಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಚಿಕ್ಕಬಳ್ಳಾಪುರದ ದಾಳಿಂಬೆ ಮಾರುಕಟ್ಟೆಯ ವಾಸ್ತವ ಪರಿಸ್ಥಿತಿಯ ಕುರಿತು ತಕ್ಷಣ ಅಧ್ಯಯನ ನಡೆಸಿ ವರದಿ ಪಡೆಯಬೇಕು. ಬೆಲೆ ಕುಸಿತದಿಂದ ರೈತರನ್ನು ರಕ್ಷಿಸಲು ಮಾರ್ಕೇಟ್ ಇನ್ ಟೆರ್ ವೆನ್ ಷನ್ ಸ್ಕೀಮ್ (ಎಂಐಎಸ್) ಅಥವಾ ಸೂಕ್ತ ಮಾರುಕಟ್ಟೆ ಬೆಂಬಲ ವ್ಯವಸ್ಥೆಯನ್ನು ಪರಿಗಣಿಸಬೇಕು. ರೈತರಿಗೆ ಉತ್ತಮ ಬೆಲೆ ದೊರೆಯುವಂತೆ ಸಂಸ್ಕರಣಾ ಘಟಕಗಳು ಹಾಗೂ ಪ್ರಮುಖ ದೇಶೀಯ ಮಾರುಕಟ್ಟೆಗಳೊಂದಿಗೆ ನೇರ ಮಾರುಕಟ್ಟೆ ಸಂಪರ್ಕ ಕಲ್ಪಿಸಬೇಕು.

ಕೊಯ್ಲೋತ್ತರ ನಿರ್ವಹಣೆ, ಶೀತಲ ಸರಪಳಿ, ಸಂಗ್ರಹಣಾ ಸೌಲಭ್ಯ ಹಾಗೂ ರಫ್ತು ಮೂಲಸೌಕರ್ಯವನ್ನು ಬಲಪಡಿಸಬೇಕು. ದಾಳಿಂಬೆ ಬೆಳೆಗಾರರಿಗೆ ಪರ್ಯಾಯ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸಿ, ಮಧ್ಯವರ್ತಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಕ್ರಮಗಳನ್ನು ಕೈಗೊಳ್ಳಬೇಕು.

ಚಿಕ್ಕಬಳ್ಳಾಪುರದ ರೈತರು ತಮ್ಮ ಪರಿಶ್ರಮ ಹಾಗೂ ಗುಣಮಟ್ಟದ ಉತ್ಪಾದನೆಯ ಮೂಲಕ ಕರ್ನಾಟಕದ ತೋಟಗಾರಿಕಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಅವರ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ದೊರೆಯುವುದು ಕೇವಲ ಮಾರುಕಟ್ಟೆಯ ವಿಚಾರವಲ್ಲ; ಅದು ಅವರ ಪರಿಶ್ರಮಕ್ಕೆ ಸಲ್ಲಬೇಕಾದ ನ್ಯಾಯ. ರೈತರ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರಗಳು ತ್ವರಿತವಾಗಿ ಸ್ಪಂದಿಸುವುದು ಅತ್ಯಗತ್ಯ.

ದಾಳಿಂಬೆ ಬೆಳೆಗಾರರ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು, ತಕ್ಷಣದ ಮಾರುಕಟ್ಟೆ ಮಧ್ಯಸ್ಥಿಕೆ ಹಾಗೂ ದೀರ್ಘಕಾಲೀನ ಪರಿಹಾರ ಕ್ರಮಗಳಿಗಾಗಿ ಕೇಂದ್ರ ಮಟ್ಟದಲ್ಲಿ ಕ್ರಮ ಕೈಗೊಳ್ಳುವಂತೆ ಸಂಸದ ಡಾ.ಕೆ.ಸುಧಾಕರ್ ಅವರು ಒತ್ತಾಯಿಸಿದ್ದಾರೆ.

ರೈತರ ಹಿತಾಸಕ್ತಿಗೆ ಧಕ್ಕೆಯಾಗದಂತೆ, ಅವರಿಗೆ ನ್ಯಾಯಯುತ ಮತ್ತು ಸ್ಥಿರ ಆದಾಯ ದೊರೆಯುವ ನಿಟ್ಟಿನಲ್ಲಿ ತಮ್ಮ ಪ್ರಯತ್ನ ಮುಂದುವರಿಯಲಿದೆ ಮತ್ತು ಕೇಂದ್ರ ಸರ್ಕಾರ ಶೀಘ್ರದಲ್ಲೇ ಅಗತ್ಯ ನೆರವು ಒದಗಿಸುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.

ಸಿಕೆಬಿ-7 ಸಂಸದ ಡಾ. ಕೆ. ಸುಧಾಕರ್