ಸಾರಾಂಶ
ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರಕ್ಕೆ ಸಂಸದ ಯದುವೀರ್ ಒಡೆಯರ್ ಶುಕ್ರವಾರ ಭೇಟಿ ನೀಡಿದರು. ಈ ಬಾರಿಯ ಪಟ್ಟದ ಆನೆಯಾಗಿದ್ದ ಕಂಜನ್, ಪ್ರಶಾಂತ, ಹರ್ಷ ಸೇರಿದಂತೆ ವಿವಿಧ ಆನೆಗಳಿಗೆ ಬೆಲ್ಲ ತಿನ್ನಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರಕ್ಕೆ ಸಂಸದ ಯದುವೀರ್ ಒಡೆಯರ್ ಶುಕ್ರವಾರ ಭೇಟಿ ನೀಡಿದರು.ಈ ಬಾರಿಯ ಪಟ್ಟದ ಆನೆಯಾಗಿದ್ದ ಕಂಜನ್, ಪ್ರಶಾಂತ, ಹರ್ಷ ಸೇರಿದಂತೆ ವಿವಿಧ ಆನೆಗಳಿಗೆ ಬೆಲ್ಲ ತಿನ್ನಿಸಿದರು.
ಬೋಟ್ ಏರಿ ಕಾವೇರಿ ನದಿ ದಾಟಿದ ಯದುವೀರ್ ಒಡೆಯರ್ ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳ ಯೋಗ ಕ್ಷೇಮ ವಿಚಾರಿಸಿದರು. ಬಳಿಕ ಮಾವುತರು, ಕಾವಾಡಿಗರ ಭೇಟಿಯಾಗಿ ಸಮಸ್ಯೆ ಆಲಿಸಿದರು.ಮನೆ, ರಸ್ತೆ, ವಿದ್ಯುತ್ ಸಮಸ್ಯೆಗಳ ಪರಿಹರಿಸಲು ಮಾವುತ, ಕಾವಾಡಿಗರು ಮನವಿ ಸಲ್ಲಿಸಿದರು. ಮುಖ್ಯವಾಗಿ ಮಾಲ್ದಾರೆಗೆ ರಸ್ತೆ ಸಂಪರ್ಕ ಮಾಡಿಕೊಡುವಂತೆ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಬಾರೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ರಾಜ್ಯ ಸರ್ಕಾರದಿಂದಲೂ ಆಗಬೇಕಾಗಿರುವ ಕೆಲಸಗಳಿವೆ. ರಾಜ್ಯ ಸರ್ಕಾರದೊಂದಿಗೆ ಮಾತನಾಡಿ ಬಗೆಹರಿಸಲು ಪ್ರಯತ್ನಿಸುವೆ. ನನ್ನ ಅನುದಾನದಿಂದಲೂ ಆಗಬಹುದಾದ ಕೆಲಸ ಮಾಡುವೆ ಎಂದು ಹೇಳಿದರು.ಆಧಾರ ರಹಿತ ಆರೋಪ-ಸಂಸದ:
ಮತ್ತೆ ಆಪರೇಷನ್ ಕಮಲ ಮಾಡಲಾಗುತ್ತಿದೆ. ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರು. ಆಮಿಷ ಒಡ್ಡಿ ಆಪರೇಷನ್ ಮಾಡಲಾಗುತ್ತಿದೆ ಎಂಬ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇವೆಲ್ಲಾ ಆಧಾರವಿಲ್ಲದ ಆರೋಪ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ವಾಲ್ಮೀಕಿ ಹಗರಣ ಬಯಲಿಗೆ ಬಂದಿದೆ. ರಾಜ್ಯ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಹೀಗಾಗಿ ಇಂತಹ ಸಲ್ಲದ ಆರೋಪ ಮಾಡಲಾಗುತ್ತಿದೆ. ಇಂತಹ ಆರೋಪಗಳನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದರು.