ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಗೆ ಸಂಸದ ಯದುವೀರ್ ದಿಢೀರ್ ಭೇಟಿ, ಪರಿಶೀಲನೆ

| Published : Feb 21 2025, 12:45 AM IST

ಸಾರಾಂಶ

ಎರಡು ತಿಂಗಳ ಹಿಂದೆ ತಂಬಾಕು ದರ ಕುಸಿತ ಕಂಡಿದ್ದಾಗ ತಾವು ಮತ್ತು ಮಿತ್ರ ಪಕ್ಷ ಜೆಡಿಎಸ್ ಮತ್ತು ರೈತ ಮುಖಂಡರೊಂದಿಗೆ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿಯಾಗಿ ಸಮಸ್ಯೆಯನ್ನು ತಿಳಿಸಿದ್ದೆವು. ಅದರ ಫಲವಾಗಿ ಇದೀಗ ಮೊದಲ ದರ್ಜೆಯ ತಂಬಾಕಿಗೆ ಕೆಜಿಗೆ 336 ರು. ಗಳವರೆಗೆ ದರ ಸಿಗುತ್ತಿದೆ.

ಕನ್ನಡಪ್ರಭ ವಾರ್ತೆ ಹುಣಸೂರು

ತಾಲೂಕಿನ ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಗೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, ಎರಡು ತಿಂಗಳ ಹಿಂದೆ ತಂಬಾಕು ದರ ಕುಸಿತ ಕಂಡಿದ್ದಾಗ ತಾವು ಮತ್ತು ಮಿತ್ರ ಪಕ್ಷ ಜೆಡಿಎಸ್ ಮತ್ತು ರೈತ ಮುಖಂಡರೊಂದಿಗೆ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿಯಾಗಿ ಸಮಸ್ಯೆಯನ್ನು ತಿಳಿಸಿದ್ದೆವು. ಅದರ ಫಲವಾಗಿ ಇದೀಗ ಮೊದಲ ದರ್ಜೆಯ ತಂಬಾಕಿಗೆ ಕೆಜಿಗೆ 336 ರು. ಗಳವರೆಗೆ ದರ ಸಿಗುತ್ತಿದೆ.

ಈ ಕುರಿತು ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಇದಲ್ಲದೇ ರಾಜ್ಯದ 18 ಸಾವಿರಕ್ಕೂ ಹೆಚ್ಚನ ಸಂಖ್ಯೆಯಲ್ಲಿರುವ ಅನಧಿಕೃತ (ಕಾರ್ಡ್‌ದಾರರು) ತಂಬಾಕು ಬೆಳೆಗಾರರಿಗೆ ಈಗಿಂದಲೇ ತಂಬಾಕು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ, ಯಾವುದೇ ದಂಡ ಶುಲ್ಕವಿಲ್ಲದೇ ಮಾರಾಟಕ್ಕೆ ಅವಕಾಶ ನೀಡಿದ್ದು, ತಮ್ಮ ಮನವಿಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿಜಿ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್‌ ಅವರಿಗೆ ರೈತರ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ತಂಬಾಕು ಬೆಳೆಯನ್ನೂ ವಿಮೆ ಯೋಜನೆಯಡಿ ಸೇರ್ಪಡೆಗೊಳಿಸಬೇಕೆನ್ನುವ ರೈತರ ಬಹುವರ್ಷಗಳ ಬೇಡಿಕೆಗೂ ಕೇಂದ್ರ ಸರ್ಕಾರ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಇದೀಗ ಈ ಕುರಿತಾದ ಸಾಧಕ ಬಾಧಕಗಳನ್ನು ತಿಳಿಯಲು ತಜ್ಞರನ್ನೊಳಗೊಂಡ ಸಮಿತಿಯನ್ನು ನೇಮಿಸಿದೆ. ಈ ಸಮಿತಿಗೆ ಕರ್ನಾಟಕದಿಂದ ತಾಲೂಕಿನ ವಕೀಲ ಎಸ್.ಬಿ. ಮೂರ್ತಿ ನೇಮಕಗೊಂಡಿದ್ದಾರೆ. ಸಮಿತಿ ವರದಿ ನೀಡಿದ ನಂತರ ಸೂಕ್ತ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದೆ ಎಂದರು.

ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಸದಸ್ಯ ಎಸ್.ಬಿ.ಮೂರ್ತಿ, ಹಿರಿಯ ಮುಖಂಡರಾದ ನಾಗರಾಜ ಮಲ್ಲಾಡಿ, ಬಿಜೆಪಿ ತಾಲೂಕು ಅಧ್ಯಕ್ಷ ಕಾಂತರಾಜು, ಶ್ರೀನಿವಾಸ್, ಸತೀಶ್, ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಸಿ. ಚಂದ್ರೇಗೌಡ, ನಂಜುಂಡೇಗೌಡ, ಹರಾಜು ಅಧೀಕ್ಷಕ ಬ್ರಿಜ್‌ ಭೂಷಣ್, ಸಿದ್ದರಾಜು, ಮೀನಾ ಇದ್ದರು.