ಸಾರಾಂಶ
ದಾಬಸ್‍ಪೇಟೆ: ನೆಲಮಂಗಲ ಕ್ಷೇತ್ರದ ಇತಿಹಾಸದಲ್ಲೇ 1000 ಕೋಟಿ ರು.ಅನುದಾನ ತಂದು ಅಭಿವೃದ್ಧಿ ಪಡಿಸುತ್ತಿರುವ ಶಾಸಕ ಎನ್.ಶ್ರೀನಿವಾಸ್ ಕಾರ್ಯವೈಖರಿಗೆ ಎಲ್ಲರೂ ಹೆಮ್ಮೆ ಪಡುವಂತದ್ದು, ರಾಜ್ಯದ 224 ಕ್ಷೇತ್ರಗಳ ಪೈಕಿ ನೆಲಮಂಗಲದಲ್ಲೇ ಅತಿ ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕ್ಷೇತ್ರದ ಜನತೆ ಇವರಿಗೆ ಶಕ್ತಿ ತುಂಬಬೇಕು ಎಂದು ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು
ಹೊನ್ನಾದೇವಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದೇವಾಲಯಗಳು, ಮಠಗಳ ಬಗ್ಗೆ ವಿಶೇಷ ಅಭಿಮಾನ ಭಕ್ತಿ ಹೊಂದಿರುವ ಶಾಸಕರು, ಮೊದಲನೇ ಸಲ ಶಾಸಕರಾಗಿ ಕ್ಷೇತ್ರಕ್ಕೆ ಶಾಶ್ವತ ಯೋಜನೆಗಳಾದ 300 ಕೋಟಿ ವೆಚ್ಚದಲ್ಲಿ 200 ಕೆವಿ ವಿದ್ಯುತ್ ಸ್ಥಾವರ ಸ್ಥಾಪನೆಗೆ ಮುಂದಾಗಿದ್ದಾರೆ. ಅಲ್ಲದೆ ಶಿವಗಂಗೆಯಿಂದ ಲಕ್ಕೂರುವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಪ್ರಯತ್ತಿಸುತ್ತಿದ್ದು, ಇವರ ಕಾರ್ಯವೈಖರಿಯನ್ನು ಪಕ್ಷಾತೀತವಾಗಿ ಮೆಚ್ಚಲೇಬೇಕಿದೆ. ಇಂತಹ ಕ್ರಿಯಾಶೀಲ ಶಾಸಕರು ಸಿಕ್ಕಿರುವುದು ಕ್ಷೇತ್ರದ ಜನತೆಯ ಪುಣ್ಯ ಎಂದು ಪ್ರಶಂಸಿಸಿದರು.ಕ್ಷೇತ್ರದ ಅಭಿವೃದ್ದಿಗೆ ಮುನ್ನುಡಿ: ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ 1000 ಕೋಟಿಗೂ ಅಧಿಕ ಪ್ರಮಾಣದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಅವುಗಳನ್ನು ಎಲ್ಲಿಂದ ಯಾರು ತಂದರು ಎಂಬ ವರದಿ ಕ್ಷೇತ್ರದ ಪ್ರತಿ ಮನೆಗೂ ತಲುಪಿಸುತ್ತೇನೆ. ನಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರ ಕಾಲು ಹಿಡಿದು ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದು ಕೆಲವರು ರಾಜಕೀಯ ಟೀಕೆ ಮಾಡಿದರೂ ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ದಾಬಸ್‍ಪೇಟೆ ಬಸ್ ನಿಲ್ದಾಣವನ್ನು ಬಜೆಟ್‍ನಲ್ಲಿ ಸೇರಿಸಿ ಕನಿಷ್ಟ 3 ಕೋಟಿ, ಗರಿಷ್ಠ 5 ಕೋಟಿ ರು.ಗಳಲ್ಲಿ ಮೇಲ್ದರ್ಜೆಗೆ ಏರಿಸುತ್ತೇವೆ. ಶಿವಗಂಗೆ ರಸ್ತೆ ಅಭಿವೃದ್ಧಿ ಜೊತೆಗೆ ಸಿವಿಜಿ ಶಾಲೆ ವಿಚಾರದಲ್ಲಿ ಒತ್ತಡ ಬಂದಿದ್ದರೂ ನಾನು ಮಾತು ತಪ್ಪಿಲ್ಲ, ಇನ್ನೂ ಎಂತಹದ್ದೇ ಒತ್ತಡ ಬಂದರೂ ಸ್ಥಳೀಯರ ಜೊತೆ ನಿಲ್ಲುತ್ತೇನೆ. ಸೋಂಪುರ ಗ್ರಾಪಂ ಅನ್ನು ಪುರಸಭೆ ಮಾಡುವುದರ ಜೊತೆಗೆ ಪೂಜ್ಯರ ಆಶಯದಂತೆ ಶಿವಗಂಗೆ ಗಂಗಾಧರೇಶ್ವರ ದೇವಾಲಯದವರೆಗೆ ರಸ್ತೆ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಪೋಟೋ 1 :ಹೊನ್ನಮ್ಮಗವಿ ಮಠದಲ್ಲಿ ಹೊನ್ನಾದೇವಿ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿದರು. ಶಾಸಕ ಶ್ರೀನಿವಾಸ್ ಇತರರು ಹಾಜರಿದ್ದರು.