ಒಂದು ಪಕ್ಷಕ್ಕೆ ಶ್ರೀಗಳ ಸೀಮಿತ ಹೋರಾಟ: ಶಾಸಕ ಕಾಶಪ್ಪನವರ

| Published : Nov 28 2024, 12:30 AM IST

ಸಾರಾಂಶ

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ನಡೆದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹುನಗುಂದ

ಬೆಳಗಾವಿ ಅಧಿವೇಶನಕ್ಕೂ ಪೂರ್ವದಲ್ಲಿಯೇ ಪಕ್ಷಾತೀತವಾಗಿ ಬೆಂಗಳೂರಿನಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಕಾರ್ಯಕಾರಿಣಿ ಸಭೆ ಕರೆದು 2ಎ ಮೀಸಲಾತಿ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಮಂಗಳವಾರ ನಡೆದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಕಾರ್ಯಕಾರಿಣಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಂಗಳೂರಿನ ಸಭೆಗೆ ಬಸವಜಯಮೃತ್ಯುಂಜಯ ಸ್ವಾಮೀಜಿ, ಬಸವನಗೌಡ ಪಾಟೀಲ ಯತ್ನಾಳ ಅವರನ್ನು ಕರೆಯುವುದಿಲ್ಲ. ಮುರುಗೇಶ ನಿರಾಣಿಯವರನ್ನು ಕರೆಯುತ್ತೇವೆ ಎಂದರು.

ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾವು ಮಾಡಿದ 2ಎ ಮೀಸಲಾತಿ ಹೋರಾಟ ಪ್ರಜ್ಞಾರಹಿತವಾಗಿದೆ. ಮುಂದಿನ ಹೋರಾಟ ಪ್ರಜ್ಞಾಸಹಿತವಾಗಿ ಮಾಡುತ್ತೇವೆ. ಯತ್ನಾಳರ ಕುತಂತ್ರದಿಂದ ಹೋರಾಟ ಹಾದಿ, ದಿಕ್ಕು ತಪ್ಪುತ್ತಿದೆ. ಬಸವಜಯಮೃತ್ಯುಂಜಯ ಸ್ವಾಮೀಜಿ ಒಂದು ಪಕ್ಷಕ್ಕೆ ಸೀಮಿತವಾಗಿ ಹೋರಾಟ ಮಾಡುತ್ತಿರುವುದುನ್ನು ನಾವು ಖಂಡಿಸುತ್ತೇವೆ ಎಂದು ಕಿಡಿಕಾರಿದರು.

ಬಿಜೆಪಿ ಅವಧಿಯಲ್ಲಿ ನಡೆದ ಹೋರಾಟದಲ್ಲಿ ಯತ್ನಾಳ ಮೋಸಕ್ಕೆ ನಾವೆಲ್ಲರೂ, ಶ್ರೀಗಳು ಬಲಿಯಾಗಿದ್ದೇವೆ. ಶ್ರೀಗಳು ಎಲ್ಲ ಪಕ್ಷದವರನ್ನು ಕೂಡಿಸಿಕೊಂಡು ಹೋರಾಟ ಮಾಡಬೇಕು. ಒಂದು ಪಕ್ಷಕ್ಕೆ ಸೀಮಿತವಾದರೆ ಅವರ ಹೋರಾಟ ಅವರಿಗೆ, ನಾವು ಪ್ರತ್ಯೇಕವಾಗಿ ಹೋರಾಟ ಆರಂಭಿಸುತ್ತೇವೆ. ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದರು.

ಮುಖ್ಯಮಂತ್ರಿಗಳ ಬಳಿ ನಾಲ್ಕು ಬಾರಿ ನಿಯೋಗ ತೆಗೆದುಕೊಂಡು ಹೋಗಿದ್ದೇವೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂವಿಧಾನಾತ್ಮಕವಾಗಿ ಮೀಸಲಾತಿ ಕೊಡುವ ಭರವಸೆ ಕೊಟ್ಟಿದ್ದಾರೆ. ಹಿಂದಿನ ಸರ್ಕಾರ ಮಾಡಿದ ತಪ್ಪು ನಾನು ಮಾಡಲ್ಲ. ಹಿಂದುಳಿದ ವರ್ಗದ ಸಂಪೂರ್ಣ ಮಾಹಿತಿ ಪಡೆದು, ಸರ್ವೇ ಕಾರ್ಯ ಸಂಪೂರ್ಣ ಮುಗಿಸಿ ಕೊಡುತ್ತೇವೆ. ಕಾಲಾವಕಾಶ ಕೊಡಿ ಎಂದು ಮುಖ್ಯಮಂತ್ರಿ ಹೇಳಿದರು. ಅವರ ಮಾತಿಗೆ ಬೆಲೆ ಕೊಡದೆ ಟ್ರ್ಯಾಕ್ಟರ್ ರ್‍ಯಾಲಿ ಮಾಡುವುದು ಸರಿಯೇ ಎಂದರು. ನಮ್ಮ ಸರ್ಕಾರದ ಅವಧಿಯಲ್ಲಿಯೇ ಮೀಸಲಾತಿ ಪಡೆಯುತ್ತೇವೆ ಬಿಡುವುದಿಲ್ಲ ಎಂದರು.

ಬೆಳಗಾವಿಯಲ್ಲಿ ಶ್ರೀಗಳು ಡಿ.10 ರಂದು ಹಮ್ಮಿಕೊಂಡ ಹೋರಾಟ ನಿಲ್ಲಸಲು ಮುಖ್ಯಮಂತ್ರಿಗಳು ನಿಮ್ಮ ಮೆಲೆ ಒತ್ತಡ ಹಾಕಿದ್ದಾರೆಯೇ ಎಂಬ ಪ್ರಶ್ನೆಗೆ ಸಮಾಜದ ವಿಷಯದಲ್ಲಿ ರಾಜಕೀಯ ನಾನು ತರುವುದಿಲ್ಲ ಎಂದರು. ಆರಂಭದಿಂದಲೂ ನಾನು ಸಚಿವ ಆಂಕಾಕ್ಷೆಯಾಗಿದ್ದೇನೆ ಎಂದರು.

ಸಭೆಯಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಟ್ರಸ್ಟನ ಟ್ರಸ್ಟಿಗಳಾದ ಶೇಖರಪ್ಪ ಬಾದವಾಡಗಿ, ಗಂಗಣ್ಣ ಬಾಗೇವಾಡಿ, ಶಿವಾನಂದ ಕಂಠಿ, ವಿವಿಧ ಜಿಲ್ಲೆಯ ಪದಾಧಿಕಾರಿಗಳು, ಮುಖಂಡರು ಇದ್ದರು.