ಸಾರಾಂಶ
ಕಾರವಾರ: ಜಿಲ್ಲೆಯ 12 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿತ್ಯ ಸಂಗ್ರಹವಾಗುವ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ₹136.8 ಕೋಟಿ ವೆಚ್ಚದಲ್ಲಿ 12 ಎಂಆರ್‌ಎಫ್(Materials Recovery Facility ) ಕೇಂದ್ರಗಳ ಆರಂಭಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ.
ಪ್ರಸಕ್ತ ವರ್ಷದ ಕ್ರಿಯಾಯೋಜನೆಯಲ್ಲಿ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎಆರ್‌ಎಫ್ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ ದೊರೆತಿದೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 298 ವಾರ್ಡ್‌ಗಳಿಂದ ಪ್ರತಿದಿನ 125.6 ಟನ್ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದ್ದು, ಇದರಲ್ಲಿ 43.96 ಟನ್ ಘನತ್ಯಾಜ್ಯವಾಗುತ್ತಿದೆ. ಈ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ನೈರ್ಮಲ್ಯ ಕಾಪಾಡುವುದು ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಅತ್ಯಂತ ಸವಾಲಿನ ಕೆಲಸವಾಗಿದೆ.ಈ ಸಮಸ್ಯೆಗೆ ಎಂಆರ್‌ಎಫ್ ಕೇಂದ್ರಗಳ ಸ್ಥಾಪನೆಯಿಂದ ಸೂಕ್ತ ಪರಿಹಾರ ದೊರೆಯಲಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಸಂಗ್ರಹಿಸಲಾದ ಒಣತ್ಯಾಜ್ಯವನ್ನು ಈ ಎಂಆರ್‌ಎಫ್ ಕೇಂದ್ರದಲ್ಲಿ ತೂಕ ಮಾಡಿ ಶೇಖರಣಾ ವಿಭಾಗದಲ್ಲಿ ಇರಿಸಲಾಗುತ್ತದೆ. ನಂತರ ಈ ತ್ಯಾಜ್ಯವನ್ನು ಕನ್ವೆಯರ್ ಬೆಲ್ಟ್ ಸಹಾಯದಿಂದ ಹಲವು ವಿಭಾಗವಾಗಿ ವಿಂಗಡಿಸಲಾಗುತ್ತದೆ. ಹೀಗೆ ವಿಂಗಡಿಸಿದ ತ್ಯಾಜ್ಯವನ್ನು ಬೈಲಿಂಗ್ ಯಂತ್ರದ ಸಹಾಯದಿಂದ ಬೈಲ್ ಮಾಡಲಾಗುತ್ತದೆ. ಬೈಲ್ ಮಾಡಿದ ತ್ಯಾಜ್ಯದಲ್ಲಿ ಪುನರ್ ಬಳಕೆ ಮಾಡಬಹುದಾದ ತ್ಯಾಜ್ಯವನ್ನು ಅಧಿಕೃತ ರಿಸೈಕಲಿಂಗ್ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ. ಪುನರ್ ಬಳಕೆ ಮಾಡಲು ಸಾಧ್ಯವಿಲ್ಲದ ತ್ಯಾಜ್ಯವನ್ನು ಕೋ ಪ್ರೋಸೆಸಿಂಗ್ ಉದ್ದೇಶಕ್ಕೆ ಸಿಮೆಂಟ್ ಫ್ಯಾಕ್ಟರಿಗಳಿಗೆ ಸಾಗಿಸಲಾಗುತ್ತದೆ.
ಪ್ರಸ್ತುತ ಘನತ್ಯಾಜ್ಯ ವಿಲೇವಾರಿಗೆ ಅಳವಡಿಸಿಕೊಂಡಿರುವ ವಿಧಾನದಿಂದ ಶೇ. 5ರಿಂದ 10ರಷ್ಟು ಘನತ್ಯಾಜ್ಯವನ್ನು ಮಾತ್ರ ಸ್ಥಳೀಯ ಸ್ಕ್ರ್ಯಾಪ್ ವ್ಯಾಪಾರಿಗಳಿಗೆ ನೀಡಲಾಗುತ್ತಿದ್ದು, ಉಳಿದ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಪ್ರಮುಖ ಸಮಸ್ಯೆಯಾಗಿದೆ. ಆದರೆ ಎಂಆರ್‌ಎಫ್ ಕೇಂದ್ರಗಳಲ್ಲಿ ಅಳವಡಿಸಿಕೊಳ್ಳಲಾಗುವ ವೈಜ್ಞಾನಿಕ ವಿಧಾನಗಳಿಂದ ಶೇ. 70ರಿಂದ 80ರಷ್ಟು ಘನತ್ಯಾಜ್ಯವನ್ನು ಈಗಾಗಲೇ ನೋಂದಣಿಯಾಗಿರುವ ಮಾರಾಟಗಾರರಿಗೆ ಸ್ಪರ್ಧಾತ್ಮಕ ದರದಲ್ಲಿ ನೇರವಾಗಿ ಮಾರಾಟ ಮಾಡಬಹುದು. ಅಲ್ಲದೇ ಪರಿಸರಕ್ಕೆ ಅತ್ಯಂತ ಮಾರಕವಾಗಿರುವ ಪ್ಲಾಸ್ಟಿಕ್ ಸಮಸ್ಯೆಯನ್ನು ನಿರ್ಮೂಲನೆ ಮಾಡಲಾಗುವುದು. ಇದರಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಲಾಭದಾಯಕ ಆದಾಯದ ಪ್ರಮುಖ ಮೂಲ ಚಟುವಟಿಕೆಯಾಗಲಿದೆ.ಎಂಆರ್‌ಎಫ್ ಕೇಂದ್ರಗಳ ಆರಂಭದಿಂದಾಗಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಡಿಮೆ ಮಾನವ ಸಂಪನ್ಮೂಲದ ಬಳಕೆಯಿಂದ ಉತ್ತಮ ರೀತಿಯಲ್ಲಿ ತ್ಯಾಜ್ಯ ನಿರ್ವಹಣಾ ಸೇವೆ ಒದಗಿಸಲಾಗುತ್ತದೆ. ಜತೆಗೆ ತ್ಯಾಜ್ಯ ನಿರ್ವಹಣಾ ಯೋಜನೆಯನ್ನು ದಕ್ಷತೆಯಿಂದ ಜಾರಿಗೊಳಿಸಲು ಅನುಕೂಲವಾಗಲಿದೆ. ಅಲ್ಲದೇ ತ್ಯಾಜ್ಯದಿಂದ ಅತಿ ಹೆಚ್ಚಿನ ಸಂಪನ್ಮೂಲವನ್ನು ಪಡೆಯಲು ಮತ್ತು ಅವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯನ್ನು ತಡೆಗಟ್ಟಿ ಪರಿಸರ ಸಂರಕ್ಷಣೆ ಸಾಧ್ಯವಾಗಲಿದೆ.