ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ನಾಮಪತ್ರ ಸಲ್ಲಿಕೆಗೂ ಮೊದಲು ಕುವೆಂಪು ನಗರದ ನಿವಾಸದಲ್ಲಿ ಗೋಪೂಜೆ ನೆರವೇರಿಸಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮೃಣಾಲ್ ಪತ್ನಿ ಹಿತಾ ಗೋಪೂಜೆಯಲ್ಲಿ ಭಾಗವಹಿಸಿದ್ದರು. ಗೋಪೂಜೆ ಬಳಿಕ ವಿವಿಧ ಮಠಾಧೀಶರು ಸಚಿವರ ನಿವಾಸಕ್ಕೆ ತೆರಳಿ ಮೃಣಾಲ್ ಗೆ ಆಶೀರ್ವಸಿದರು. ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸೇರಿದಂತೆ 20ಕ್ಕೂ ಹೆಚ್ಚು ಮಠಾಧೀಶರು ಆಶೀರ್ವದಿಸಿದರು. ಇದಕ್ಕೂ ಮುನ್ನ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕುಟುಂಬ ಸಮೇತ ಸುಳೇಭಾವಿಯ ಮಹಾಲಕ್ಷ್ಮಿ, ಬೆಳಗಾವಿಯ ಹಿಂಡಲಗಾ ಗಣಪತಿ ದೇವಸ್ಥಜ್ದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಹಟ್ಟಿಹೊಳಿಯಲ್ಲಿ ವೀರಭದ್ರೇಶ್ವರ ಹಾಗೂ ಸುಳೇಭಾವಿಯಲ್ಲಿ ಲಕ್ಷ್ಮೀ ಪೂಜೆ ಮಾಡಿದ್ದೇವೆ. ಗುರುಗಳನ್ನು ಮನೆಗೆ ಕರೆದು ಪಾದ ಪೂಜೆ ಮಾಡಿದ್ದು, ವಿಜಯಯಾತ್ರೆಯ ಸಂಕಲ್ಪ ಇಟ್ಟುಕೊಂಡು ಪೂಜೆ ಮಾಡಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದರು.ನಮ್ಮ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು, ಕಾರ್ಯಕರ್ತರ ಶ್ರಮ ಈ ಬಾರಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಹೇಳಿದರು. ಪ್ರತಿ ವರ್ಗದ ಜನರ ಹತ್ತಿರ ಹೋಗಿದ್ದೇನೆ. ಬೆಳಗಾವಿ ಅಭಿವೃದ್ಧಿಯೇ ನನ್ನ ಕನಸು ಎಂದು ಹೇಳಿದರು.
ಈ ಬಾರಿ ಜನರು ಬೆಳಗಾವಿ ಯುವಕನ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದ್ದು, ಮನೆ ಮಗನಾಗಿ ನನ್ನನ್ನು ಸ್ವೀಕಾರ ಮಾಡಿದ್ದಾರೆ. ಯುವಕರ ಪ್ರತಿಯೊಂದು ಹಬ್ಬದಲ್ಲೂ ಸಹ ನಾವು ಭಾಗವಾಗಿದ್ದೇವೆ. ಈ ಬಾರಿ ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದು ಮೃಣಾಲ್ ತಿಳಿಸಿದರು.