ಸಾರಾಂಶ
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹೊನ್ನಿಹಾಳ, ಪಂತಬಾಳೆಕುಂದ್ರಿ, ಮೋದಗಾ, ಮುತಗಾ, ಮಾರಿಹಾಳ ಪ್ರದೇಶಗಳಲ್ಲಿ ಸೋಮವಾರ ಸಂಜೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಪರ ಭರ್ಜರಿ ಪ್ರಚಾರ ನಡೆಯಿತು.
ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹೊನ್ನಿಹಾಳ, ಪಂತಬಾಳೆಕುಂದ್ರಿ, ಮೋದಗಾ, ಮುತಗಾ, ಮಾರಿಹಾಳ ಪ್ರದೇಶಗಳಲ್ಲಿ ಸೋಮವಾರ ಸಂಜೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಪರ ಭರ್ಜರಿ ಪ್ರಚಾರ ನಡೆಯಿತು.
ಪ್ರತಿ ಊರಲ್ಲಿ ರ್‍ಯಾಲಿ ನಡೆಸಿ ಮತಯಾಚನೆ ಮಾಡಲಾಯಿತು. ಮೃಣಾಲ ಹೆಬ್ಬಾಳಕರ್ ಜೊತೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಸ್ಥಳೀಯ ಮುಖಂಡರು ಪ್ರಚಾರ ನಡೆಸಿದರು. ಹೋದಲ್ಲೆಲ್ಲ ಕಿಕ್ಕಿರಿದು ಸೇರಿದ್ದ ಜನಸ್ತೋಮ ಜಯಘೋಷಗಳೊಂದಿಗೆ ಸ್ವಾಗತಿಸಿದರು. ವಿಜಯಯಾತ್ರೆ ನಡೆಯುತ್ತಿದೆ ಏನೋ ಎನ್ನುವ ರೀತಿಯಲ್ಲಿ ರ್‍ಯಾಲಿ ನಡೆಯಿತು. ಮಹಿಳೆಯರು, ಯುವಕರ ಅಪಾರ ಸಂಖ್ಯೆಯಲ್ಲಿ ಸೇರಿ ಮೃಣಾಲ್ ಹೆಬ್ಬಾಳಕರ್‌ಗೆ ಬೆಂಬಲ ಸೂಚಿಸಿದರು.ಈ ವೇಳೆ ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಹೊರಗಿನಿಂದ ಬಂದ ಬಿಜೆಪಿ ಅಭ್ಯರ್ಥಿ ಮತ್ತು ಅವರ ಪರವಾಗಿ ಮತ ಕೇಳಲು ಬರುವವರು ಮೇ 7ರ ನಂತರ ಯಾರ ಕೈಗೂ ಸಿಗುವುದಿಲ್ಲ. ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಅವರವರ ಊರು ಸೇರುತ್ತಾರೆ. ಅವರನ್ನು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ಬರಲಿದೆ. ಹಾಗಾಗಿ ಸದಾ ನಿಮ್ಮ ಜೊತೆ ಇರುವ ಮನೆ ಮಗ ಮೃಣಾಲ ಹೆಬ್ಬಾಳಕರ್ ಅವರಿಗೆ ಮತ ನೀಡಿ ಆಯ್ಕೆ ಮಾಡಿ ಎಂದು ವಿನಂತಿಸಿದರು.
ಮೃಣಾಲ್ ಹೆಬ್ಬಾಳಕರ್ ಮಾತನಾಡಿ, ಕಳೆದ 10 ವರ್ಷದಿಂದ ನೀವು ನನ್ನನ್ನು ನೋಡುತ್ತ ಬಂದಿದ್ದೀರಿ. ನಿಮ್ಮ ಕಷ್ಟ ಸುಖದಲ್ಲಿ ನಮ್ಮ ಇಡೀ ಕುಟುಂಬ ನಿಂತಿದೆ. ಮುಂದೆಯೂ ನಾವೆಲ್ಲ ಒಟ್ಟಿಗೇ ಇರೋಣ. ಈ ಬಾರಿ ನನಗೆ ಆಶೀರ್ವಾದ ಮಾಡುವ ಮೂಲಕ ಹೆಚ್ಚಿನ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ವಿನಂತಿಸಿದರು. ಸ್ಥಳೀಯ ಮುಖಂಡರು, ಆಯಾ ಊರಿನ ಹಿರಿಯರು, ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.