ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಕೋಕರ್ ಹೈಡ್ರೋಟ್ರೀಟರ್ ಯುನಿಟ್‌ನಲ್ಲಿ ಬುಧವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟ ಮನೀಷ್ ಕರ್ಕಡ ಅವರ ಕುಟುಂಬಕ್ಕೆ ಒಟ್ಟು ₹ 1.20 ಕೋಟಿ ಆರ್ಥಿಕ ನೆರವು ಹಾಗೂ ವಿಮಾ ಸೌಲಭ್ಯ ನೀಡುವುದಾಗಿ ಸಂಸ್ಥೆ ಘೋಷಿಸಿದೆ.
ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಕೋಕರ್ ಹೈಡ್ರೋಟ್ರೀಟರ್ ಯುನಿಟ್‌ನಲ್ಲಿ ಬುಧವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟ ಮನೀಷ್ ಕರ್ಕಡ ಅವರ ಕುಟುಂಬಕ್ಕೆ ಒಟ್ಟು ₹ 1.20 ಕೋಟಿ ಆರ್ಥಿಕ ನೆರವು ಹಾಗೂ ವಿಮಾ ಸೌಲಭ್ಯ ನೀಡುವುದಾಗಿ ಸಂಸ್ಥೆ ಘೋಷಿಸಿದೆ.
ಅವಘಡದಲ್ಲಿ ಮನೀಷ್ ಕರ್ಕಡ ಮೃತಪಟ್ಟಿರುವುದಕ್ಕೆ ಎಂಆರ್‌ಪಿಎಲ್ ಆಡಳಿತ ಮಂಡಳಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ದುಃಖತಪ್ತ ಕುಟುಂಬದೊಂದಿಗೆ ಸಂಸ್ಥೆ ನಿಲ್ಲಲಿದೆ ಎಂದು ತಿಳಿಸಿದೆ.ಮೃತರ ಕುಟುಂಬಕ್ಕೆ ಎಂಆರ್‌ಪಿಎಲ್‌ನಿಂದ ₹ 90 ಲಕ್ಷ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ. ಇದರ ಜತೆಗೆ ಗ್ರೂಪ್ ಟರ್ಮ್ ಲೈಫ್ ಇನ್ಶೂರೆನ್ಸ್ ಅಡಿ ಸುಮಾರು ₹ 10 ಲಕ್ಷ ಹಾಗೂ ವರ್ಕ್‌ಮೆನ್ ಕಾಂಪೆನ್ಸೇಷನ್ ಪಾಲಿಸಿ ಅಡಿ ಸುಮಾರು ₹ 20 ಲಕ್ಷ ವಿಮಾ ಸೌಲಭ್ಯ ದೊರೆಯಲಿದೆ. ಹೀಗಾಗಿ ಕುಟುಂಬಕ್ಕೆ ಒಟ್ಟಾರೆ ಸುಮಾರು ₹ 1.20 ಕೋಟಿ ನೆರವು ಮತ್ತು ವಿಮಾ ಪ್ರಯೋಜನ ಲಭಿಸಲಿದೆ ಎಂದು ಸಂಸ್ಥೆ ತಿಳಿಸಿದೆ.
ಇದೇ ವೇಳೆ ಎಂಆರ್‌ಪಿಎಲ್‌ನ ದ್ವಿತೀಯ ಹಂತದ ಕಾರ್ಮಿಕರಿಗೆ ಮೆಡಿಕ್ಲೇಮ್ ವಿಮೆ ಒದಗಿಸುವ ಪ್ರಸ್ತಾವನೆಯನ್ನೂ ಸಿದ್ಧಪಡಿಸಲಾಗುತ್ತಿದೆ. ಈ ಕುರಿತು ಚರ್ಚೆ ನಡೆಯುತ್ತಿದ್ದು, ದಕ್ಷಿಣ ಕನ್ನಡ ಸಂಸದರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.-------------
ಪ್ರಸ್ತಾವಿತ ಮೆಡಿಕ್ಲೇಮ್ ವ್ಯವಸ್ಥೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಸುಮಾರು ನಾಲ್ಕು ವಾರಗಳೊಳಗೆ ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ಎಂಆರ್‌ಪಿಎಲ್ ತಿಳಿಸಿದೆ.ಸಂಸ್ಥೆಯ ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲ ಸಿಬ್ಬಂದಿಯ ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣಕ್ಕೆ ಬದ್ಧವಾಗಿದ್ದು, ಅವಘಡದಿಂದ ಬಾಧಿತ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ನೆರವು ಮುಂದುವರಿಸಲಾಗುವುದು ಎಂದು ಎಂಆರ್‌ಪಿಎಲ್ ಪುನರುಚ್ಚರಿಸಿದೆ.