ಎಂಆರ್ ಪಿಎಲ್ ಘಟಕ ಭೀಕರ ಸ್ಫೋಟದ ಹಿನ್ನೆಲೆಯಲ್ಲಿ ಜೋಕಟ್ಟೆ, ಕಳವಾರು ಭಾಗದಲ್ಲಿ ಹಲವಾರು ಮನೆಗಳಿಗೆ ಹಾನಿಯಾಗಿದ್ದು ಪರಿಸರದ ನಿವಾಸಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೋ ಕಂಪನಿಯನ್ನು ಇಲ್ಲಿಂದ ಸ್ಥಳಾಂತರ ಮಾಡಬೇಕು, ಇಲ್ಲದಿದ್ದರೆ ನಮ್ಮನ್ನು ಸ್ಥಳಾಂತರ ಮಾಡಿಸಿ ಎಂದು ಆಗ್ರಹ ಮಾಡಿದ್ದಾರೆ.
ಮಂಗಳೂರು: ಎಂಆರ್ ಪಿಎಲ್ ಘಟಕ ಭೀಕರ ಸ್ಫೋಟದ ಹಿನ್ನೆಲೆಯಲ್ಲಿ ಜೋಕಟ್ಟೆ, ಕಳವಾರು ಭಾಗದಲ್ಲಿ ಹಲವಾರು ಮನೆಗಳಿಗೆ ಹಾನಿಯಾಗಿದ್ದು ಪರಿಸರದ ನಿವಾಸಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೋ ಕಂಪನಿಯನ್ನು ಇಲ್ಲಿಂದ ಸ್ಥಳಾಂತರ ಮಾಡಬೇಕು, ಇಲ್ಲದಿದ್ದರೆ ನಮ್ಮನ್ನು ಸ್ಥಳಾಂತರ ಮಾಡಿಸಿ ಎಂದು ಆಗ್ರಹ ಮಾಡಿದ್ದಾರೆ.ಘಟನೆ ಹಿನ್ನೆಲೆಯಲ್ಲಿ ಜೋಕಟ್ಟೆ, ಕಳವಾರು ಪ್ರದೇಶದ ನೂರಾರು ಮನೆಗಳು, ಮಸೀದಿ, ಚರ್ಚ್ ಗಳ ಹಂಚು ಪುಡಿಯಾಗಿವೆ. ಕಿಟಕಿ ಬಾಗಿಲುಗಳು ಒಡೆದು ಹೋಗಿದ್ದು, ಸ್ಥಳೀಯರು ಭೂಕಂಪವಾಯೆಂದು ಹೆದರಿ ಮನೆಯಿಂದ ಹೊರಗಡೆ ಓಡಿ ಬಂದಿದ್ದರು. ಜೋಕಟ್ಟೆ ಪರಿಸರದಲ್ಲಿ ಸೇರಿದ್ದ ಸಾರ್ವಜನಿಕರು ಕಂಪನಿಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳವಾರಿನ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಹಂಚಿನ ಮಾಡು ಪೂರ್ತಿಯಾಗಿ ಒಡೆದು ಹೋಗಿದ್ದು, ಸ್ಫೋಟದ ತೀವ್ರತೆಗೆ ಭೂಕಂಪದ ರೀತಿ ಭೂಮಿ ಕಂಪಿಸಿದ್ದರಿಂದ ಹಳೆಯ ಕಟ್ಟಡಗಳು ಅದುರಿವೆ. ಇದರಿಂದಾಗಿ ಹಂಚಿನ ಮನೆಗಳು ಬಿರುಕು ಬಿಟ್ಟಿವೆ. ಚರ್ಚ್ ಹಂಚಿನ ಮಾಡು ಒಡೆದು ಒಳಭಾಗದಲ್ಲಿ ಬಿದ್ದಿದ್ದು, ಈ ಸಂದರ್ಭದಲ್ಲಿ ಒಳಗಡೆ ಯಾರೂ ಇಲ್ಲದ ಕಾರಣ ಸಾವು- ನೋವು ಆಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೇ ರೀತಿ, ಕಳವಾರಿನಲ್ಲಿ ದೇವಸ್ಥಾನ, ಮಸೀದಿಗಳಿಗೂ ಇದೇ ಸ್ಥಿತಿಯಾಗಿದೆ.ಸ್ಥಳದಲ್ಲಿ ಸೇರಿದ್ದ ಜನರೊಂದಿಗೆ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದು, ಎಂಆರ್ ಪಿಎಲ್ 3ನೇ ಫೇಸ್ 2014ರಲ್ಲಿ ಶುರುವಾಗಿದ್ದು, ಅಲ್ಲಿಂದಲೇ ಇಲ್ಲಿ ಅನಾಹುತ ಶುರುವಾಗಿದೆ. ಆದರೆ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಸ್ಪಂದಿಸುತ್ತಿಲ್ಲ. ಇಲ್ಲಿ ಸ್ಫೋಟ, ಹೊಗೆ ಬರುವುದು ಮಾಮೂಲಿಯಾಗಿದೆ. ಇಷ್ಟು ದೊಡ್ಡ ತೈಲ ಸ್ಥಾವರ ಮಾಡುವಾಗ ಸ್ಥಳೀಯರನ್ನು ಎಬ್ಬಿಸಿ ಪುನರ್ವಸತಿ ಕಲ್ಪಿಸಬೇಕಿತ್ತು. ಆದರೆ ಜನರ ಅಹವಾಲನ್ನು ಕೇಳುವವರೇ ಇಲ್ಲವಾಗಿದೆ ಎಂಬ ಅಸಮಾಧಾನ ವ್ಯಾಪಕವಾಗಿ ವ್ಯಕ್ತವಾಗಿದೆ.