ಎಂಆರ್‌ಪಿಎಲ್ ಘಟಕದಲ್ಲಿ ಸೆ.30ರಂದು ಸಂಭವಿಸಿದ ಅಗ್ನಿ ಅವಘಡ ಹಾಗೂ ಸ್ಫೋಟದಿಂದ ಸುತ್ತಮುತ್ತಲಿನ ಮನೆಗಳ ಕಟ್ಟಡಗಳಿಗೆ ಉಂಟಾಗಿರುವ ಹಾನಿಯನ್ನು ಪರಿಶೀಲಿಸಲು ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿಕೆ) ನೆರವು ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ತಿಳಿಸಿದ್ದಾರೆ.
ಮಂಗಳೂರು: ಎಂಆರ್‌ಪಿಎಲ್ ಘಟಕದಲ್ಲಿ ಸೆ.30ರಂದು ಸಂಭವಿಸಿದ ಅಗ್ನಿ ಅವಘಡ ಹಾಗೂ ಸ್ಫೋಟದಿಂದ ಸುತ್ತಮುತ್ತಲಿನ ಮನೆಗಳ ಕಟ್ಟಡಗಳಿಗೆ ಉಂಟಾಗಿರುವ ಹಾನಿಯನ್ನು ಪರಿಶೀಲಿಸಲು ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿಕೆ) ನೆರವು ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ತಿಳಿಸಿದ್ದಾರೆ.
ಇತ್ತೀಚೆಗೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಎಂಆರ್‌ಪಿಎಲ್-ಎಂಎಸ್‌ಇಝಡ್ ಗುತ್ತಿಗೆ ಕಾರ್ಮಿಕರ ಮತ್ತು ಸಂತ್ರಸ್ತರ ಹೋರಾಟ ಸಮಿತಿಯ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.ಹೋರಾಟ ಸಮಿತಿಯ ಗೌರವಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರು ಕಳವಾರು ಹಾಗೂ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳು ಅಗ್ನಿ ಅವಘಡದ ಬಳಿಕ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ತಿಳಿಸಿದರು.
ಎಂಆರ್‌ಪಿಎಲ್ ಘಟಕದಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮ ಹಲವು ಮನೆಗಳ ಅಡಿಪಾಯ ದುರ್ಬಲಗೊಂಡಿದೆ. ಜಿಲ್ಲಾಧಿಕಾರಿ ದರ್ಶನ್, ಪ್ರಕೃತಿ ವಿಕೋಪದಿಂದ ಮನೆಗಳಿಗೆ ಹಾನಿಯಾದಾಗ ನಡೆಸುವ ಮಾದರಿಯಲ್ಲೇ ಜಿಲ್ಲಾಡಳಿತ ಮನೆಗಳ ಹಾನಿಯ ಕುರಿತು ಈಗಾಗಲೇ ಅಂದಾಜು ಮಾಡಿದೆ. ಆದರೆ, ನಾವು ಖುದ್ದಾಗಿ ಪ್ರದೇಶಕ್ಕೆ ಭೇಟಿ ನೀಡದ ಕಾರಣ ವರದಿಗೆ ಇನ್ನೂ ಅನುಮೋದನೆ ನೀಡಿಲ್ಲ. ಎಂಆರ್‌ಪಿಎಲ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.ಎನ್‌ಐಟಿಕೆ ತಂಡವನ್ನು ಸ್ಥಳಕ್ಕೆ ಕಳುಹಿಸಿ ಕಟ್ಟಡಗಳ ಸ್ಥಿತಿಗತಿ ಪರಿಶೀಲಿಸಿ ವರದಿ ನೀಡುವಂತೆ ಕೋರಲಾಗುವುದು. ಆ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.