ಸಾರಾಂಶ
ಸುರತ್ಕಲ್ ಎಂಆರ್‌ಪಿಎಲ್ ಒಎನ್‌ಜಿಸಿ ಕರ್ಮಚಾರಿ ಸಂಘದ ವತಿಯಿಂದ ಮಂಗಳಪೇಟೆ ಶಾರದಾ ಭಜನಾ ಮಂಡಳಿಯಲ್ಲಿ ಕಾರ್ಮಿಕರ ದಿನಾಚರಣೆ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಸ್ಯೆನಿಕರು, ಕೃಷಿಕರ ಜೊತೆಗೆ ಕೂಲಿ ಕಾರ್ಮಿಕರು ದೇಶದ ಬೆನ್ನುಲುಬಾಗಿದ್ದು ತಮ್ಮ ಜೀವನವನ್ನು ಸಮಾಜಕ್ಕೆ, ಸಂಸ್ಥೆಯ ಏಳಿಗೆಗಾಗಿ ಮುಡಿಪಾಗಿಡುವ ಅವರ ಸೇವೆ ಮಹತ್ತರವಾದುದು ಎಂದು ಎಂಆರ್‌ಪಿಎಲ್ ಎಂಪ್ಲಾಯಿಸ್ ಸ್ಟಾಫ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ದಯಾನಂದ ಪ್ರಭು ಹೇಳಿದ್ದಾರೆ.ಎಂಆರ್‌ಪಿಎಲ್ ಒಎನ್‌ಜಿಸಿ ಕರ್ಮಚಾರಿ ಸಂಘದ ವತಿಯಿಂದ ಮಂಗಳಪೇಟೆ ಶಾರದಾ ಭಜನಾ ಮಂಡಳಿಯಲ್ಲಿ ನಡೆದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಎಂಆರ್‌ಪಿಎಲ್ ಸಂಸ್ಥೆ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾದ ಕಾರಣ ಗುತ್ತಿಗೆ ಕಾರ್ಮಿಕರ ಆರೋಗ್ಯ ಭದ್ರತೆ, ವೇತನ ಹೆಚ್ಚಳ ಮುಂತಾದ ಹಲವಾರು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಸ್ಥೆಗೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತವೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಟ್ಟಾಗಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದರು.
ಕಾರ್ಮಿಕರು ಸಂಸ್ಥೆಯಿಂದ ನಿವೃತ್ತಿಯಾಗುವ ಸಂದರ್ಭದಲ್ಲಿ ನಿವೃತ್ತಿ ವೇತನ ಸಂಸ್ಥೆಯಿಂದಲೇ ನೀಡುವಲ್ಲಿ ಸಂಬಂಧಿಸಿದ ಉನ್ನತ ಮಟ್ಟದ ಅಧಿಕಾರಿಗಳಿಗೆ ಮನವಿ ಮಾಡಬೇಕೆಂದು ಹೇಳಿದರು.ಕರ್ಮಚಾರಿ ಸಂಘದ ಉಪಾಧ್ಯಕ್ಷ ಸುರೇಶ್ ಪೊಸ್ರಾಲ್ ಅಧ್ಯಕ್ಷತೆ ವಹಿಸಿದ್ದು, ಸಂಸ್ಥೆಯಿಂದ ನಿವೃತ್ತಿ ಹೊಂದಿದ 6 ಜನ ಕೂಲಿ ಕಾರ್ಮಿಕರನ್ನು ಕರ್ಮಚಾರಿ ಸಂಘದ ವತಿಯಿಂದ ಅಭಿನಂದಿಸಲಾಯಿತು. ವೃದ್ಧಾಪ್ಯ ನಿಧಿ ನೀಡಲಾಯಿತು.
ಎಂಆರ್‌ಪಿಎಲ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಶರತ್ ಜೋಗಿ, ಉಪಾಧ್ಯಕ್ಷ ಸತೀಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸಾಯಿಪೃಥ್ವಿ, ಕರ್ಮಚಾರಿ ಸಂಘದ ಮಾಜಿ ಅಧ್ಯಕ್ಷ ಪ್ರವೀಣ್ ಕೃಷ್ಣಾಪುರ, ಎಸ್‌ಸಿ ಎಸ್‌ಟಿ ವಿಭಾಗದ ಅಧ್ಯಕ್ಷ ಸಂತೋಷ್, ಕೋಶಾಧಿಕಾರಿ ಪುರುಷೋತ್ತಮ, ಜತೆ ಕಾರ್ಯದರ್ಶಿ ಸುರೇಶ್ ಪೂಜಾರಿ, ವೃದ್ಧಾಪ್ಯ ನಿಧಿ ಸಂಚಾಲಕ ವಿನಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.ಸಂಸ್ಥೆಯ ಉಪಾಧ್ಯಕ್ಷ ಪ್ರಸಾದ್ ಅಂಚನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುರೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.