ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ತಾಲೂಕಿನ ತಾಲೂಕಿನ ಚಂದಕವಾಡಿ ಕರ್ನಾಟಕ ಪಬ್ಲಿಕ್ ಶಾಲೆ, ಆಲೂರು ಹಾಗೂ ಮಂಗಲ ಸರ್ಕಾರಿ ಶಾಲೆಗಳಲ್ಲಿ ಗುರುವಾರ ನಡೆದ ಕಾರ್ಯಕ್ರಮಗಳಲ್ಲಿ 1ರಿಂದ 12ನೇ ತರಗತಿವರೆಗೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ವತಿಯಿಂದ 85 ಲಕ್ಷ ರು. ವೆಚ್ಚದ ನೋಟ್ ಪುಸ್ತಕಗಳನ್ನು ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಉಚಿತವಾಗಿ ವಿತರಿಸಿದರು.ಬಳಿಕ ಮಾತನಾಡಿದ ಅವರು, ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಸರ್ಕಾರದ ಒಂದು ಅಂಗ ಸಂಸ್ಥೆಯಾಗಿದ್ದು, ಶೈಕ್ಷಣಿಕ ಕ್ಷೇತ್ರಕ್ಕೆ ಸಾಕಷ್ಟು ಸೇವಾ ಸೌಲಭ್ಯಗಳನ್ನು ಕೊಡುಗೆಯಾಗಿ ನೀಡುತ್ತಿದೆ. ಕಳೆದ ಬಾರಿಯೂ ತಾಲೂಕಿನ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್‌ಪುಸ್ತಕ ವಿತರಿಸಿತ್ತು. ಈ ಬಾರಿಯೂ ವಿತರಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ನಾಗರಿಕರಾಗಬೇಕು ಎಂದರು.
ಇಂದಿರಾಗಾಂಧಿ ಹಾಗೂ ಡಿ. ದೇವರಾಜ ಅರಸು 20 ಅಂಶಗಳ ಕಾರ್ಯಕ್ರಮ ಜಾರಿಗೊಳಿಸಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಅಂದಿನಿಂದ ಈವರೆಗೂ ಸರ್ಕಾರ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ ಮಕ್ಕಳ ಪರಿಣಾಮಕಾರಿ ಕಲಿಕೆಗೆ ನೆರವಾಗಿದೆ. ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಎಲ್ಲಾ ಮೂಲಸೌಲಭ್ಯಗಳನ್ನು ಒದಗಿಸುತ್ತಿದೆ. ಸರ್ಕಾರದೊಂದಿಗೆ ಎಂ.ಎಸ್.ಐ.ಎಲ್. ಶಿಕ್ಷಣದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ತಾಲೂಕಿನ ಕೆಲವೆಡೆ ಬಸ್‌ನಿಲ್ದಾಣಗಳು ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ದುರಸ್ತಿಗೀಡಾಗಿರುವ ಶಾಲಾ ಕಟ್ಟಡಗಳ ನವೀಕರಣಕ್ಕೂ ಆದ್ಯತೆ ನೀಡಿದೆ ಎಂದು ತಿಳಿಸಿದರು.ಎಂ.ಎಸ್.ಐ.ಎಲ್. ವ್ಯವಸ್ಥಾಪಕ ನಿರ್ದೇಶಕ ಮನೋಜ್‌ಕುಮಾರ್ ಮಾತನಾಡಿ, ಎಂ.ಎಸ್.ಐ.ಎಲ್. ಸಂಸ್ಥೆಯು 60 ವರ್ಷಗಳಿಂದಲೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹಲವು ಕೊಡುಗೆ ನೀಡಿದೆ. ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಒಳಗಾಗದೇ ಓದಿನ ಕಡೆ ಗಮನ ಹರಿಸಬೇಕು. ಉತ್ತಮ ಪುಸ್ತಕಗಳನ್ನು ಅಭ್ಯಸಿಸಬೇಕು ಎಂದು ಹೇಳಿದರು.
ಚಂದಕವಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಟರಾಜು, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷರಾದ ಸೋಮೇಶ್ವರ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಚಂದಕವಾಡಿ ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲರಾದ ಚಂದ್ರಶೇಖರ್, ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್‌ನ ಮಾರ್ಕೆಟಿಂಗ್ ನಿರ್ದೇಶಕ ಎ.ಎಂ. ಚಂದ್ರಪ್ಪ, ಪ್ರಧಾನ ವ್ಯವಸ್ಥಾಪಕ ಎಂ.ಎಸ್. ಬಸವರಾಜು, ಮೈಸೂರು ಶಾಖಾ ಮುಖ್ಯಸ್ಥ ಶಂಕರಯ್ಯ, ಮಳಿಗೆ ಉಸ್ತುವಾರಿಗಳಾದ ಸಂದೀಪ್, ಕೆಂಪಯ್ಯ, ಗ್ರಾಮದ ಮುಖಂಡರಾದ ಪ್ರಸನ್ನ, ಮಂಜು, ಶಂಕರ್, ಅಬ್ದುಲ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಚಾಮರಾಜನಗರ ತಾಲೂಕು ಅಭಿವೃದ್ಧಿ ಕಾಣುತ್ತಿದೆ: ಚಾಮರಾಜನಗರ: ನಂಜುಂಡಪ್ಪ ವರದಿ ಅನ್ವಯ ರಾಜ್ಯದ 39 ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿದ್ದ ಚಾಮರಾಜನಗರ ತಾಲೂಕು ಅಭಿವೃದ್ಧಿ ಕಾಣುತ್ತಿದೆ ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಹೇಳಿದರು.
ಆಲೂರಿನ ಸರ್ಕಾರಿ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ನದಿಮೂಲದಿಂದ ನೀರಿನ ಅಲಭ್ಯತೆಯಿಂದಾಗಿ ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ೨೫೦ ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ. ಸುತ್ತೂರು ಹಾಗೂ ಆಲಂಬೂರು ಏತ ನೀರಾವರಿ ಯೋಜನೆಯಿಂದ ಕೆರೆಗಳನ್ನು ತುಂಬಿಸಿ ತಾಲೂಕಿನಲ್ಲಿ ಅಂತರ್ಜಲಮಟ್ಟ ಹೆಚ್ಚಿಸಲಾಗಿದೆ.ಶಿಕ್ಷಣಕ್ಕೂ ಹೆಚ್ಚಿನ ಮಹತ್ವ ನೀಡಲಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಶಾಲಾ ಕಟ್ಟಡಗಳ ನವೀಕರಣಕ್ಕೂ ಅನುದಾನ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ತಾಲೂಕಿನಾದ್ಯಂತ ದುರಸ್ಥಿಗೀಡಾಗಿರುವ ಹಳೆಯ ಶಾಲಾ ಕಟ್ಟಡಗಳ ಸಮೀಕ್ಷೆ ನಡೆಸಲಾಗುತ್ತದೆ ಎಂದರು.
ಆಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದುಂಡಮ್ಮ, ಸದಸ್ಯರಾದ ದೊಡ್ಡಸ್ವಾಮಿ, ಮಹದೇವಸ್ವಾಮಿ, ತಾಲೂಕು ಕೃಷಿ ಉತ್ಪನ್ನ ಮಆರುಕಟ್ಟೆ ಸದಸ್ಯರಾದ ಪ್ರದೀಪ್, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕುಮಾರ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರಾದ ನಂಜುಂಡಸ್ವಾಮಿ ಇದ್ದರು.ಉನ್ನತ ವ್ಯಾಸಂಗಕ್ಕಾಗಿ ವೈದ್ಯಕೀಯ, ಇಂಜಿನಿಯರಿಂಗ್, ಕಾನೂನು, ಕೃಷಿ, ಪಾಲಿಟೆಕ್ನಿಕ್ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ವಸತಿಶಾಲೆಗಳನ್ನು ಆರಂಭಿಸಲಾಗಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಹೇಳಿದರು.
ಮಂಗಲ ಗಾಮದ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿ ಮಾತನಾಡಿ, ಕಟ್ಟಡ ಕಾರ್ಮಿಕರ ಮಕ್ಕಳಿಗೆ ೪೩ ಕೋಟಿ ರು. ವೆಚ್ಚದಲ್ಲಿ ವಸತಿ ಶಾಲೆ ಆರಂಭಿಸಲು ಮಂಗಲದ ಶಂಕರದೇವರ ಬೆಟ್ಟದ ತಪ್ಪಲಿನಲ್ಲಿ ಜಾಗ ಗುರುತಿಸಲಾಗಿದೆ. ಮಂಗಲ, ಕೋಳಿಪಾಳ್ಯ ಹಾಗೂ ನಂಜದೇವನಪುರದ ಶಾಲೆಗಳನ್ನು ಪದವಿಪೂರ್ವ ಕಾಲೇಜುಗಳಾಗಿ ಉನ್ನತೀಕರಿಸಲಾಗುತ್ತಿದೆ.ಇದು ಸ್ಪರ್ಧಾತ್ಮಕ ಯುಗವಾಗಿದ್ದು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವತ್ತ ಸಾಗಬೇಕು ಎಂದ ಅವರು ಮಂಗಲ ಶಾಲೆಗೆ ಅಗತ್ಯವಾದ ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ಹಾಗೂ ಬಿಸಿಯೂಟಕ್ಕೆ ಅಡುಗೆಮನೆ ನಿರ್ಮಾಣವನ್ನು ಎಂ.ಎಸ್.ಐ.ಎಲ್ ನಿಂದ ನೀಡುವುದಾಗಿ ಕಾರ್ಯಕ್ರಮದಲ್ಲಿ ತಿಳಿಸಿದರು.
ಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ಅಣ್ಣಪ್ಪಸ್ವಾಮಿ, ಉಪಾಧ್ಯಕ್ಷೆ ಸುಮಾ, ಸದಸ್ಯ ಸುರೇಶ್, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷೆ ಗಿರಿಜಾ, ಎಂ.ಎಸ್.ಐ.ಎಲ್ ಅಧಿಕಾರಿಗಳು, ಇತರರು ಇದ್ದರು.