ಬಹಳ ವರ್ಷಗಳಿಂದ ಎಂಎಸ್ಪಿ ದರ ಪರಿಷ್ಕರಣೆ ಆಗಿಲ್ಲ. ಇದು ದೇಶಾದ್ಯಂತ ಆಗಬೇಕಿದೆ. ಇದೀಗ ಕೇಂದ್ರ ಸರ್ಕಾರ ತಜ್ಞರ ಸಮಿತಿ ರಚಿಸಿದ್ದು, ಶೀಘ್ರ ಈ ಸಮಿತಿ ವರದಿ ಕೊಡುವ ಮೂಲಕ ಸಮಸ್ಯೆಗೆ ಪರಿಹಾರ ಸಿಗಲಿದೆ.
ಧಾರವಾಡ:
ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಲ್ಲಿದ್ದು ದೇಶಾದ್ಯಂತ ಕಾಲಕಾಲಕ್ಕೆ ಪರಿಷ್ಕರಣೆ ಆಗಿದ್ದರೆ ಇಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ವರ್ಷಗಳಿಂದ ಎಂಎಸ್ಪಿ ದರ ಪರಿಷ್ಕರಣೆ ಆಗಿಲ್ಲ. ಇದು ದೇಶಾದ್ಯಂತ ಆಗಬೇಕಿದೆ. ಇದೀಗ ಕೇಂದ್ರ ಸರ್ಕಾರ ತಜ್ಞರ ಸಮಿತಿ ರಚಿಸಿದ್ದು, ಶೀಘ್ರ ಈ ಸಮಿತಿ ವರದಿ ಕೊಡುವ ಮೂಲಕ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ಭರವಸೆ ಇದೆ. ಇನ್ನೊಂದೆಡೆ ಈ ವಿಷಯದಲ್ಲಿ ರಾಜ್ಯ ಸರ್ಕಾರದ ಕರ್ತವ್ಯವೂ ಇದೆ. ಕಬ್ಬಿನ ಉಪ ಉತ್ಪನ್ನಗಳಿಂದ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಜಿಎಸ್ಟಿ ರೂಪದಲ್ಲಿ ಸಾವಿರಾರು ಕೋಟಿ ಆದಾಯ ಬರುತ್ತದೆ. ಈ ವಿಷಯವನ್ನು ಬರೀ ಕೇಂದ್ರದ ಮೇಲೆ ಹಾಕುವುದು ಸರಿಯಲ್ಲ ಎಂದ ಅವರು, ಕಬ್ಬಿನ ತೂಕದ ವಿಚಾರವಾಗಿ ದೂರುಗಳಿವೆ. ಅದನ್ನು ಸರಿಪಡಿಸುವ ಕಾರ್ಯ ರಾಜ್ಯ ಸರ್ಕಾರ ಮಾಡಬೇಕೆಂದರು.
ರಾಜ್ಯದಲ್ಲಿ ನಡೆದಿರುವ ಸ್ಟಿಂಗ್ ಆಪರೇಷನ್ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈ ವಿಚಾರವನ್ನು ಸಿಬಿಐಗೆ ವಹಿಸಬೇಕು. ರಾಜ್ಯ ಸರ್ಕಾರದಿಂದ ನ್ಯಾಯ ಸಿಗಲಿದೆ ಎಂಬ ನಂಬಿಕೆ ಇಲ್ಲ. ಇದರ ಹಿಂದಿನ ಷಡ್ಯಂತ್ರ ಯಾರದ್ದು ಎಂಬುದು ಸಿಬಿಐನಿಂದಲೇ ಬಯಲಿಗೆ ಬರಲಿದೆ. ಸ್ಟಿಂಗ್ ಆಪರೇಷನ್ ಮೂಲಕ ನೈತಿಕವಾಗಿ ಮುಜುಗರ ತರುವ ಪ್ರಯತ್ನಗಳು ನಡೆಯುತ್ತಿವೆ. ರಾಜಕೀಯ ವಿರೋಧಿಗಳನ್ನು ರಾಜಕೀಯವಾಗಿ ವಿರೋಧಿಸಬೇಕೆ ಹೊರತು ವಾಮಮಾರ್ಗ ಬಳಸಬಾರದು ಎಂದು ಬೊಮ್ಮಾಯಿ ಹೇಳಿದರು.