ಬಹು ನಿರೀಕ್ಷಿತ ಕಲ್ಟ್‌ ಚಿತ್ರವನ್ನು ಗೆಲ್ಲಿಸಲು ಕಾಲಿಗೆ ಚಕ್ರ ಕಟ್ಟಿಕೊಂಡು ಇಡೀ ಕರ್ನಾಟಕ ತಿರುಗಾಡುವೆ.

ಹೊಸಪೇಟೆ: ಬಹು ನಿರೀಕ್ಷಿತ ಕಲ್ಟ್‌ ಚಿತ್ರವನ್ನು ಗೆಲ್ಲಿಸಲು ಕಾಲಿಗೆ ಚಕ್ರ ಕಟ್ಟಿಕೊಂಡು ಇಡೀ ಕರ್ನಾಟಕ ತಿರುಗಾಡುವೆ. ಈಗ ವಿಜಯನಗರ ಜಿಲ್ಲೆಯಿಂದ ಪ್ರಚಾರ ಕಾರ್ಯ ಆರಂಭಿಸಲಾಗಿದೆ. ಚಿತ್ರ 2026ರ ಜನವರಿ 23ರಂದು ಬಿಡುಗಡೆಯಾಗಲಿದ್ದು, ಖಂಡಿತ ಹಿಟ್‌ ಆಗಲಿದೆ ಎಂದು ಚಿತ್ರ ನಟ ಹಾಗೂ ಸಚಿವ ಜಮೀರ್‌ ಅಹಮದ್‌ ಖಾನ್‌ ಪುತ್ರ ಜೈದ್‌ ಖಾನ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದ ಶೂಟಿಂಗ್‌ ಶೇ.40ರಷ್ಟು ಭಾಗ ಹಂಪಿ, ವಿಜಯನಗರದ ನೆಲದಲ್ಲೇ ಶೂಟಿಂಗ್‌ ಆಗಿದೆ. ಚಿತ್ರದ ನಾಯಕಿ ರಚಿತಾರಾಮ್‌ ಅವರ ಸ್ವಂತ ಊರು ಹಂಪಿ ಎಂದು ಚಿತ್ರದಲ್ಲಿ ಹೇಳಲಾಗಿದೆ. ಇನ್ನು ಕ್ಲೈಮಾಕ್ಸ್‌, ಹಾಡುಗಳು ಕೂಡ ಹಂಪಿಯಲ್ಲೇ ಶೂಟಿಂಗ್‌ ಆಗಿದೆ ಎಂದರು.

ಈ ಚಿತ್ರದಲ್ಲಿ ಮಲೈಕಾ ಕೂಡ ನಟಿಸಿದ್ದಾರೆ. ಅಮೆರಿಕ ಸೇರಿದಂತೆ ವಿದೇಶದಲ್ಲೂ ಕನ್ನಡದಲ್ಲೇ ಚಿತ್ರ ಬಿಡುಗಡೆ ಮಾಡಲಾಗುವುದು. ಅಪ್ಪ ರಾಜಕೀಯದಲ್ಲಿ ಇರಬಹುದು. ನನಗೆ ರಾಜಕೀಯ ಇಷ್ಟವಿಲ್ಲ. ಸಮಾಜ ಸೇವೆಯನ್ನು ಉದ್ಯಮ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಇದ್ದುಕೊಂಡೇ ಮಾಡುವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ನಾನು ಹಳೇ ಸ್ನೇಹಿತರು. ಆ ಸ್ನೇಹದ ಮೇಲೆ ನನಗೆ ಬೆಂಗಳೂರಿನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ. ಅಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ತನ್ನ ಸ್ನೇಹಿತನಿಗೆ ತೋರಿದ ಸಂಜ್ಞೆಯನ್ನೇ ದೊಡ್ಡದಾಗಿ ತೋರಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

ನಗರದ ರೋಟರಿ ಹಾಲ್‌, ಕನ್ನಡ ವಿವಿಯಲ್ಲಿ ಪ್ರಚಾರ ನಡೆಸಿದರು. ನಗರದ ವಿಜಯನಗರ ಕಾಲೇಜ್‌ನಲ್ಲಿ ಚಿತ್ರದ ಆಡಿಯೋ ಲಾಂಚ್‌ ಮಾಡಲಾಯಿತು. ಇದಕ್ಕೂ ಮುನ್ನ ಅಭಿಮಾನಿಗಳಿಂದ ಕಾರು ಮತ್ತು ಬೈಕ್‌ಗಳ ರ್‍ಯಾಲಿ ನಡೆಸಲಾಯಿತು.

ಹುಡಾ ಅಧ್ಯಕ್ಷ ಎಚ್‌ಎನ್‌ಎಫ್‌ ಇಮಾಮ್‌ ನಿಯಾಜಿ, ಮುಖಂಡರಾದ ದಾದಾಪೀರ್‌, ಅಶೋಕ್ ನಾಯ್ಕ, ವಿಜಯಕುಮಾರ, ಪತ್ರಕರ್ತ ಲಕ್ಷ್ಮೀ ನಾರಾಯಣ ಮತ್ತಿತರರಿದ್ದರು.