ಭೀಮನಹಳ್ಳಿ ಗ್ರಾಮದಿಂದ ಮದ್ದೇನಹಟ್ಟಿ, ದೇವಲಾಪುರ ಅರೆತಿಮ್ಮಪ್ಪಸ್ವಾಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು 6 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಮದ್ದೇನಹಟ್ಟಿ ಸಮೀಪ 2.5 ಕೋಟಿ ರು.ವೆಚ್ಚದಲ್ಲಿ ಸೇತುವೆ ಅಭಿವೃದ್ಧಿ ಪಡಿಸಲಾಗುವುದು. ಈ ಭಾಗದ ಹೇಮಾವತಿ ಮುಖ್ಯ ಕಾಲುವೆಗಳ ಆಧುನೀಕರಣಕ್ಕೆ 50 ಕೋಟಿ ರು. ಮಂಜೂರು ಮಾಡಿಸಲಾಗಿದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಅಧಿಕಾರವಿರಲಿ, ಇಲ್ಲದಿರಲಿ ನಾನು ಶಾಸಕನಾಗಿದ್ದ ಅವಧಿಯಲ್ಲೆಲ್ಲಾ ಇದೇ ವೇಗದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕಳೆದ ಮೂರು ವರ್ಷದಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇವಲಾಪುರ ಹೋಬಳಿಯಲ್ಲಿ ಅತಿಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ತಾಲೂಕಿನ ಭೀಮನಹಳ್ಳಿಯಲ್ಲಿ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ 6 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವರು, ಕಳೆದ ಮೂರು ವರ್ಷದಲ್ಲಿ ದೇವಲಾಪುರ ಹೋಬಳಿಯ ಮೈಲಾರಪಟ್ಟಣ, ರಾಮೇನಹಳ್ಳಿ, ಹರದನಹಳ್ಳಿ, ಅರಕೆರೆ, ನಾಗನಹಳ್ಳಿ, ಅಂಚೀಪುರ, ತೊರೆಮಲ್ಲನಾಯ್ಕನಹಳ್ಳಿ, ದೊಡ್ಡಹುಪ್ಪಳ, ಕೋಟೆಬೆಟ್ಟ ಸೇರಿದಂತೆ ವಿವಿಧ ಗ್ರಾಮಗಳ ಸೇತುವೆ, ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ 150 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದರು.
ಭೀಮನಹಳ್ಳಿ ಗ್ರಾಮದಿಂದ ಮದ್ದೇನಹಟ್ಟಿ, ದೇವಲಾಪುರ ಅರೆತಿಮ್ಮಪ್ಪಸ್ವಾಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು 6 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಮದ್ದೇನಹಟ್ಟಿ ಸಮೀಪ 2.5 ಕೋಟಿ ರು.ವೆಚ್ಚದಲ್ಲಿ ಸೇತುವೆ ಅಭಿವೃದ್ಧಿ ಪಡಿಸಲಾಗುವುದು. ಈ ಭಾಗದ ಹೇಮಾವತಿ ಮುಖ್ಯ ಕಾಲುವೆಗಳ ಆಧುನೀಕರಣಕ್ಕೆ 50 ಕೋಟಿ ರು. ಮಂಜೂರು ಮಾಡಿಸಲಾಗಿದೆ, ದೇವಲಾಪುರ ರಾಮೇನಹಳ್ಳಿ ನಡುವಿನ ಸೇತುವೆ ಅಭಿವೃದ್ಧಿ ಕಾಮಗಾರಿಗೆ 5 ಕೋಟಿ ರು. ಮಂಜೂರು ಮಾಡಿಸಲಾಗಿದೆ ಎಂದರು.ಈ ಹಿಂದೆ ಕ್ಷೇತ್ರದಲ್ಲಿ ಶಾಸಕರಾಗಿದ್ದ ಯಾರಾದರೂ ಒಂದು ಅವಧಿಯಲ್ಲಿ ಇಷ್ಟೊಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ ನಾನು ಈಗಲೇ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಇದೇ ರೀತಿ ನನ್ನ ಕ್ಷೇತ್ರದ ಎಲ್ಲಾ ಹೋಬಳಿಗಳಲ್ಲಿಯೂ ನಡೆಯುತ್ತಿವೆ. ಇಷ್ಟೆಲ್ಲಾ ಅಭಿವೃದ್ಧಿ ಕೆಲಸ ಮಾಡಿದರೂ ಕೂಡ ಚುನಾವಣೆ ಸಂದರ್ಭದಲ್ಲಿ ಜನರು ನನ್ನನ್ನು ಪರೀಕ್ಷೆ ಮಾಡುವುದನ್ನು ನೋಡಿದರೆ ಏನು ಹೇಳಬೇಕೆಂದು ಗೊತ್ತಾಗುವುದಿಲ್ಲ ಎಂದರು.
ಇದಕ್ಕೂ ಮುನ್ನ ತಾಲೂಕಿನ ಎ.ಶ್ಯಾನುಭೋಗನಹಳ್ಳಿ, ಸಾಮಕಹಳ್ಳಿ, ಚಾಟಗಹಳ್ಳಿ, ಹೊನ್ನಬೆಟ್ಟದ ಹೊಸೂರು ಗ್ರಾಮಗಳಲ್ಲಿ 7 ಕೋಟಿ ರು.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವರು, ಚಿಕ್ಕಯಗಟಿ ಗ್ರಾಮದಲ್ಲಿ 40 ಲಕ್ಷ ರು. ವೆಚ್ಚದ ಗ್ರಾಮ ಪರಿಮಿತಿಯಲ್ಲಿ ರಸ್ತೆ ಅಭಿವೃದ್ಧಿ, ಸಮುದಾಯಭವನ, ಮಾದರಿ ಗ್ರಾಮ ಯೋಜನೆಗೆ ಭೂಮಿ ಪೂಜೆ ನೆರವೇರಿಸಿದರು. ದೊಡ್ಡಯಗಟಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.ಈ ವೇಳೆ ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಸಿಪಿಐ ಹೇಮಂತ್‌ಕುಮಾರ್, ಲೋಕೋಪಯೋಗಿ ಇಲಾಖೆಯ ಎಇಇ ಲಿಂಗರಾಜು, ಹೇಮಾವತಿ ಇಲಾಖೆಯ ಎಇಇಗಳಾದ ಯದುಕೃಷ್ಣ, ವಿನೋದ್, ಎಇ ಗಳಾದ ಬಿಂಧು, ಸುರೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಂ.ಪ್ರಕಾಶ್, ನಿರ್ದೇಶಕ ಎನ್.ಟಿ.ಕೃಷ್ಣಮೂರ್ತಿ, ಚಲನಚಿತ್ರ ನಿರ್ಮಾಪಕ ಮಾವಿನಕೆರೆ ಸುರೇಶ್, ಜಿಪಂ ಮಾಜಿ ಸದಸ್ಯ ಎಂ.ಹುಚ್ಚೇಗೌಡ, ಮುಖಂಡರಾದ ರಾಜೇಶ್, ಕೃಷ್ಣೇಗೌಡ, ಹನುಮಂತು, ಬೋನಗೆರೆ ಸುರೇಶ್, ಮರಿಸ್ವಾಮಿ, ನರಸಿಂಹಮೂರ್ತಿ, ರವೀಶ್, ಗಿರೀಶ್ ಸೇರಿದಂತೆ ಹಲವರು ಇದ್ದರು.