ಸಾರಾಂಶ
ಸಕಲೇಶಪುರ ಬಳಿಯ ಕಡಗರಹಳ್ಳಿ ಗ್ರಾಮದ ರೈಲ್ವೆಹಳಿ ಸಮೀಪ ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಪಾಳಿಯ ಆಧಾರದ ಮೇಲೆ ೨೫೦ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು ದಿನದ ೨೪ ಗಂಟೆಯಲ್ಲಿ ಮೂರು ಪಾಳಿಯಲ್ಲಿ ಕೆಲಸ ನಡೆಯುತ್ತಿದೆ. ರಾಜ್ಯದ ವಿವಿಧೆಡೆಯಿಂದ ೭೫೦ ಕಾರ್ಮಿಕರು ರೈಲ್ವೆ ಹಳಿ ದುರಸ್ಥಿ ನಡೆಸುತ್ತಿದ್ದು ಕನಿಷ್ಠ ಇನ್ನೂ ೧೦ ದಿನಗಳ ಕಾಮಗಾರಿ ನಡೆಯಲಿದೆ. ನಂತರದ ಒಂದು ವಾರ ಕೇವಲ ಸರಕು ರೈಲು ಪ್ರಯಾಣಕ್ಕೆ ಮಾತ್ರ ಅವಕಾಶ ಆ ನಂತರದ ದಿನಗಳಲ್ಲಿ ಪ್ರಯಾಣಿಕರ ರೈಲಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಸ್ಥಳೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಮಳೆ ಬಿಡುವು ನೀಡಿರುವ ಪರಿಣಾಮ ತಾಲೂಕಿನ ಕಡಗರಹಳ್ಳಿ ಗ್ರಾಮದ ರೈಲ್ವೆಹಳಿ ಸಮೀಪ ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಪಾಳಿಯ ಆಧಾರದ ಮೇಲೆ ೨೫೦ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು ದಿನದ ೨೪ ಗಂಟೆಯಲ್ಲಿ ಮೂರು ಪಾಳಿಯಲ್ಲಿ ಕೆಲಸ ನಡೆಯುತ್ತಿದೆ. ರಾಜ್ಯದ ವಿವಿಧೆಡೆಯಿಂದ ೭೫೦ ಕಾರ್ಮಿಕರು ರೈಲ್ವೆ ಹಳಿ ದುರಸ್ಥಿ ನಡೆಸುತ್ತಿದ್ದು ಕನಿಷ್ಠ ಇನ್ನೂ ೧೦ ದಿನಗಳ ಕಾಮಗಾರಿ ನಡೆಯಲಿದೆ. ನಂತರದ ಒಂದು ವಾರ ಕೇವಲ ಸರಕು ರೈಲು ಪ್ರಯಾಣಕ್ಕೆ ಮಾತ್ರ ಅವಕಾಶ ಆ ನಂತರದ ದಿನಗಳಲ್ಲಿ ಪ್ರಯಾಣಿಕರ ರೈಲಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಸ್ಥಳೀಯ ರೈಲ್ವೆ ಅಧಿಕಾರಿಗಳ ಹೇಳಿಕೆಯಾಗಿದೆ.ತಾಲೂಕಿನಲ್ಲಿ ವರುಣನಬ್ಬರ ತಹಬದಿಗೆ ಬಂದಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಭಾನುವಾರ ಮಧ್ಯರಾತ್ರಿಯಿಂದ ಸುರಿದ ಬಿರುಸಿನ ಮಳೆ ಮಂಗಳವಾರ ಮಧ್ಯರಾತ್ರಿವರೆಗೂ ಮುಂದುವರೆದಿದ್ದು ಈ ೨೪ ಗಂಟೆಯಲ್ಲಿ ತಾಲೂಕಿನಲ್ಲಿ ೨೦೦ ಮೀ.ಮೀಟರ್‌ನಿಂದ ೩೫೦ ಮೀಟರ್ ಮಳೆಯಾಗಿದೆ. ಆದರೆ, ಬುಧವಾರ ಮುಂಜಾನೆಯಿಂದ ಬಿಡುವು ನೀಡಿದ್ದ ಮಳೆ ಕೆಲಕಾಲ ಬಿಸಿಲ ದರ್ಶನಕ್ಕೂ ಅವಕಾಶ ನೀಡಿತ್ತು. ಪರಿಣಾಮ ನೆರೆ ಸೃಷ್ಟಿಯಾಗಿದ್ದ ಪಟ್ಟಣದ ಅಜಾದ್ ರಸ್ತೆಯಲ್ಲಿ ನೆರೆ ಇಳಿದಿದಿದ್ದರೆ, ಹೊಳೆಮಲ್ಲೇಶ್ವರಸ್ವಾಮಿ ಜಲದಿಗ್ಬಂಧನದಿಂದ ಬಿಡುಗಡೆಯಾಗಿದೆ. ಇದಲ್ಲದೆ ಹಳ್ಳಕೊಳ್ಳಗಳು ಉಕ್ಕಿಹರಿದು ಸಂಪರ್ಕ ಕಳೆದುಕೊಂಡಿದ್ದ ಬಹುತೇಕ ಗ್ರಾಮಗಳ ಸಂಚಾರಕ್ಕೆ ಮಳೆ ಅವಕಾಶನೀಡಿದೆ.
ತಾಲೂಕಿನಲ್ಲಿ ನಿರಂತರವಾಗಿ ಕಳೆದ ಮೂರು ತಿಂಗಳಿನಿಂದ ಮಳೆ ಸುರಿಯುತ್ತಿರುವ ಪರಿಣಾಮ ದಿಣ್ಣೆ ಪ್ರದೇಶದಲ್ಲೂ ಅಂತರ್ಜಲ ಉಕ್ಕುತ್ತಿದೆ. ಪರಿಣಾಮ ಎಲ್ಲೆಲ್ಲು ಕಾಲುವೆಯಂತೆ ನೀರು ಹರಿಯುತ್ತಿದ್ದು ಭೂಮಿ ಸಂಪೂರ್ಣ ಶೀತಮಯಗೊಂಡಿದೆ.