ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
300 ಹೊಸ ಖಾಸಗಿ ಬಡಾವಣೆಗಳ ನಿರ್ಮಾಣಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ಅನುಮೋದನೆ ನೀಡಿದೆ. ಇದರಿಂದ ಕಳೆದ ಒಂದೂವರೆ ವರ್ಷಗಳಿಂದ ಹೊಸ ಬಡಾವಣೆ ನಿರ್ಮಾಣಕ್ಕೆ ಅವಕಾಶ ಸಿಗದೇ ಕಂಗಲಾಗಿದ್ದ ಬಿಲ್ಡರ್‌ಗಳಿಗೆ ಸಿಹಿ ಸುದ್ದಿ ಸಿಕ್ಕಾಂತಾಗಿದೆ. ಹಾಗೆಯೇ, 300 ಬಡಾವಣೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿರುವುದರಿಂದ ಸಾವಿರಾರು ಮಂದಿ ನಿವೇಶನಕಾಂಕ್ಷಿಗಳಿಗೆ ಸೂರು ಸಿಗಲಿದೆ.ಮುಡಾ ಅಧ್ಯಕ್ಷರಾದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.ಮುಡಾ ಹಗರಣದ ಬಳಿಕ 2ನೇ ಬಾರಿಗೆ ನಡೆದ ಸಭೆಯಲ್ಲಿ 344 ವಿಷಯಗಳಿಗೆ ಒಪ್ಪಿಗೆ ನೀಡಲಾಗಿದೆ.
ಪ್ರಮುಖವಾಗಿ ಹೊಸದಾಗಿ ಬಡಾವಣೆ ನಿರ್ಮಿಸುವ ವಿಚಾರವಾಗಿ ಖಾಸಗಿ ಬಿಲ್ಡರ್ ಗಳು ಮತ್ತು ಗೃಹ ನಿರ್ಮಾಣ ಸಹಕಾರ ಸಂಘಗಳಿಂದ ಸಲ್ಲಿಕೆಯಾಗಿದ್ದ 300 ಖಾಸಗಿ ಬಡಾವಣೆಗಳ ನಿರ್ಮಾಣ ಸಂಬಂಧ ಸಲ್ಲಿಕೆಯಾಗಿದ್ದ ನಕ್ಷೆಗೆ ಅನುಮೋದನೆ ನೀಡುವ ಮೂಲಕ ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ.50: 50 ಅನುಪಾತದಡಿ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಕಳೆದ ಬಾರಿ ಕೈಗೊಳ್ಳಲಾಗಿದ್ದ ನಿರ್ಣಯ ಸಂಬಂಧ ಸದಸ್ಯರು, ಸಭೆಯಲ್ಲಿ ಪ್ರಸ್ತಾಪ ಮಾಡಿದರು. ಅದಕ್ಕೆ ಜಿಲ್ಲಾಧಿಕಾರಿ, ಮುಡಾ ಹಗರಣ ಸಂಬಂಧ ನೇಮಕಗೊಂಡಿರುವ ದೇಸಾಯಿ ಆಯೋಗದ ವರದಿ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ಸಭೆಯ ಬಳಿಕ ಶಾಸಕ ಟಿ.ಎಸ್. ಶ್ರೀವತ್ಸ ಮಾಹಿತಿ ನೀಡಿದರು.
ಈ ಸಭೆಯಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ತನ್ವೀರ್ ಸೇಠ್, ಕೆ. ಹರೀಶ್ ಗೌಡ, ಟಿ.ಎಸ್. ಶ್ರೀವತ್ಸ, ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಧ್ರುವನಾರಾಯಣ್, ಡಾ.ಡಿ. ತಿಮ್ಮಯ್ಯ, ಎಚ್. ವಿಶ್ವನಾಥ್, ಸಿ.ಎನ್. ಮಂಜೇಗೌಡ, ಕೆ. ವಿವೇಕಾನಂದ, ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಮುಡಾ ಆಯುಕ್ತ ರಘುನಂದನ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮೊದಲಾದವರು ಪಾಲ್ಗೊಂಡಿದ್ದರು.----
ಕೋಟ್...ಇವತ್ತಿನ ಸಭೆಯಲ್ಲಿ 50-50 ಅನುಪಾತದ ಬಗ್ಗೆ ಯಾವ ಮಹತ್ವದ ಚರ್ಚೆಯಾಗಿಲ್ಲ. ಕೇವಲ ಹೊಸ ಲೇಔಟ್ ಗಳ ಅನುಮತಿ ಬಗ್ಗೆ ಚರ್ಚೆ ಮಾಡಿ ಅನುಮೋದನೆ ನೀಡಿದ್ದೇವೆ. ದೇಸಾಯಿ ಆಯೋಗದ ವರದಿ ಆಧಾರದ ಮೇಲೆ 50-50 ವಿಚಾರದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಮಾಹಿತಿ ಕೊಟ್ಟಿದ್ದಾರೆ.
- ಟಿ.ಎಸ್. ಶ್ರೀವತ್ಸ, ಶಾಸಕ 50:50 ಅನುಪಾದಲ್ಲಿ ಎಷ್ಟು ನಿವೇಶನ ಹಂಚಲಾಗಿದೆ ಎಂಬ ಲೆಕ್ಕವೇ ಇನ್ನೂ ಸಿಕ್ಕಿಲ್ಲ50:50 ಅನುಪಾತದಲ್ಲಿ ಎಷ್ಟು ನಿವೇಶನ ಹಂಚಲಾಗಿದೆ ಎಂಬ ಲೆಕ್ಕವೆ ಇನ್ನೂ ಸಿಕ್ಕಿಲ್ಲ ಎಂದು ಶಾಸಕ ಕೆ. ಹರೀಶ್ ಗೌಡ ತಿಳಿಸಿದರು.
50:50 ಯಲ್ಲಿ ಅಕ್ರಮ ಯಾವುದು ಸಕ್ರಮ ಯಾವುದು ಎಂದು ಬೇರ್ಪಡಿಸುವುದೆ ಕಷ್ಟವಾಗಿದೆ. ನಾನು ಕಳೆದ ಬಾರಿ ಸಭೆಯಲ್ಲಿ 4 ಸಾವಿರ ಸೈಟ್ ಬಗ್ಗೆ ಕಲೆ ಹಾಕಿದ್ದೆ. ಈಗ ಆ ಸಂಖ್ಯೆಯು ಇನ್ನೂ ಹೆಚ್ಚಳವಾಗುತ್ತಿದೆ. ಮುಂದಿನ ಪ್ರಾಧಿಕಾರದ ಸಭೆಯಲ್ಲಿ 50:50 ಅನುಪಾತದ ಬಗ್ಗೆಯೆ ಪ್ರತ್ಯೇಕವಾದ ಚರ್ಚೆ ಮಾಡಲು ತೀರ್ಮಾನಿಸಲಾಗಿದೆ. 50:50 ಅನುಪಾತದಲ್ಲಿ ಹಗರಣವಾಗಿರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇದರಲ್ಲಿ ಮುಚ್ಚಿಡುವುದು ಏನು ಇಲ್ಲ ಎಂದರು.