ಸಾರಾಂಶ
ಕೋಟ್ಯಂತರ ರು. ಮುಡಾ ಅವ್ಯವಹಾರ ನಡೆದಿದೆ. ಮುಖ್ಯಮಂತ್ರಿಯಾಗಿ ತನಿಖೆ ಎದುರಿಸಲು ಸಾಧ್ಯವಿಲ್ಲ, ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆ ಎದುರಿಸಬೇಕೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಆಗ್ರಹಿಸಿದರು.
ಚಾಮರಾಜನಗರ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವರದಿಯ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಈಗ ೩೦೦ ಕೋಟಿ ರು. ಅವ್ಯವಹಾರನ್ನು ಪತ್ತೆ ಹಚ್ಚಿದೆ, ಬಡವರಿಗೆ ಹಂಚಬೇಕಾಗಿದ್ದ 600 ನಿವೇಶನಗಳು ಅಕ್ರಮವಾಗಿರುವುದನ್ನು ಪತ್ತೆ ಹಚ್ಚಿದೆ. ಕೋಟ್ಯಂತರ ರು. ಅವ್ಯವಹಾರ ನಡೆದಿದೆ. ಮುಖ್ಯಮಂತ್ರಿಯಾಗಿ ತನಿಖೆ ಎದುರಿಸಲು ಸಾಧ್ಯವಿಲ್ಲ, ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆ ಎದುರಿಸಬೇಕೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಆಗ್ರಹಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮುಡಾ ಹಗರಣದ ಬಗ್ಗೆ ಈಗಾಗಲೇ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಿದೆ, ದೆಹಲಿಯಿಂದ ಘಟಾನುಘಟಿ ವಕೀಲರನ್ನೇ ಕರೆಸಿಕೊಂಡು ವಾದ ಮಂಡಿಸಿದರೂ, ಹೈಕೋರ್ಟ್ ವಾದ-ವಿವಾದಗಳನ್ನು ಪರಿಶೀಲಿಸಿ ಅಧಿಕಾರದ ದುರುಪಯೋಗ, ಸ್ವಜನ ಪಕ್ಷಪಾತ ನಡೆದಿದ್ದು ತನಿಖೆಗೆ ಅಸ್ತು ನೀಡಿದೆ ಇದನ್ನು ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಬಿಜೆಪಿ ಷಡ್ಯಂತ್ರ ಎನ್ನುತ್ತಾರೆ, ಹಾಗಾದರೆ ಐಡಿ ಅಕ್ರಮ ಪತ್ತೆ ಹಚ್ಚಿರುವುದು ಸುಳ್ಳೇ? ಎಂದರು.ಕಳೆದ ಒಂದು ಮುಕ್ಕಾಲು ವರ್ಷದಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಇದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತಿಲ್ಲ.
ಕಾನೂನು ಸುವ್ಯವಸ್ಥೆ ಹದಗೆಟ್ಟದ್ದು ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು ಇದರಿಂದ ರಾಜ್ಯದಲ್ಲಿ ದರೋಡೆ, ಭ್ರಷ್ಟಾಚಾರ, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮೊದಲು ಭೇಟಿಯಾಗುವವರು ಐಜಿ ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಗುಪ್ತಚಾರ ಮಾಹಿತಿ ನೀಡುತ್ತಾರೆ, ಆದರೆ ಏನಾಗುತ್ತಿದೆ, ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬುವಾಗ ದರೋಡೆ, ಮಾರನೇ ದಿನವೇ ಮಂಗಳೂರಿನಲ್ಲಿ ಸಹಕಾರ ಬ್ಯಾಂಕ್‌ನಲ್ಲಿ ಕೋಟ್ಯಂತರ ರು, ಮೌಲ್ಯದ ಚಿನ್ನ ಹಾಗೂ ನಗದನ್ನು ರಾಜಾರೋಷವಾಗಿ ಕಳ್ಳತನ ಮಾಡಿ ಬೇರೆ ರಾಜ್ಯಕ್ಕೆ ಓಡಿ ಹೋಗುತ್ತಾರೆ ಎಂದರೆ ರಾಜ್ಯದ ಆಡಳಿತ ಕುಸಿದಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಲೂಟಿ, ಎಸ್‌ಇಪಿ, ಟಿಎಸ್ಪಿ ಅನುದಾನದಲ್ಲಿ ಲೂಟಿ, ಮುಡಾ ಹಗರಣ, ನಿಗಮಗಳ ಅಭಿವೃದ್ಧಿಗೆ ಹಣ ಇಲ್ಲ, ಯಾವುದೇ ಯೋಜನೆಗಳ ಜಾರಿ ಇಲ್ಲ, ಕಾಂಗ್ರೆಸ್‌ನಲ್ಲೇ ಮೂರು ಬಣ, ಮಾತ್ತೆತ್ತಿದರೆ ಜಿಎಸ್‌ಟಿ ಹಣ ಕೇಂದ್ರ ಸರಿಯಾಗಿ ನೀಡಿಲ್ಲ, ಮಾಧ್ಯಮದ ಮುಂದೆ ಬಡಾಯಿ, ಎಲ್ಲಿ ಕೇಳಬೇಕು ಅಲ್ಲಿಗೆ ಹೋಗಿ ಕೇಳುವುದಕ್ಕೆ ಆಗಲ್ಲ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೃಷಭೇಂದ್ರಪ್ಪ ಮಾತನಾಡಿ, ಅಮಿತ್ ಶಾ ವಿರುದ್ಧ ಮಾತನಾಡುವ ಕಾಂಗ್ರೆಸ್ ನಾಯಕರು ತಮ್ಮದೇ ಪಕ್ಷದ ದಲಿತ ಸಮುದಾಯದ ನಾಯಕ, ಶಾಸಕ ನರೇಂದ್ರಸ್ವಾಮಿ ರಾಜ್ಯದಲ್ಲಿರುವುದು ಸಿದ್ದರಾಮಯ್ಯ ಸಂವಿಧಾನ ಇದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿರುವುದು ಎಷ್ಟು ಸರಿ, ಸಿದ್ದರಾಮಯ್ಯ ಅಂಬೇಡ್ಕರ್ ಅವರಿಗಿಂತಲೂ ದೊಡ್ಡವರೇ ಇದನ್ನು ಏಕೆ ಪ್ರಶ್ನೆ ಮಾಡುತ್ತಿಲ್ಲ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಮುಖಂಡ ಆರ್. ಸುಂದರ್, ಮಾಧ್ಯಮ ವಕ್ತಾರ ಕಾಡಹಳ್ಳಿ ಕುಮಾರ್ ಇದ್ದರು.
ಭ್ರಷ್ಟಾಚಾರಕ್ಕೆ ಬೇಸತ್ತು ಅಧಿಕಾರಿಗಳಿಂದ ಆತ್ಮಹತ್ಯೆ: ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದರಿಂದ ಜನ ಮತ್ತು ದನಗಳಿಗೆ ರಕ್ಷಣೆ ಸಿಗುತ್ತಿಲ್ಲ, ಗೋವುಗಳ ಕೆಚ್ಚಲು ಮತ್ತು ಬಾಲ ಕತ್ತರಿಸಿ ವಿಕೃತ ಮನಸ್ಸುಗಳು ಮೆರೆದಾಡುತ್ತಿವೆ, ಪ್ರಾಮಾಣಿಕ ಅಧಿಕಾರಿಗಳು ಭ್ರಷ್ಟಾಚಾರದಿಂದ ಬೇಸೆತ್ತು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಹೇಳಿದರು.