ಮುಡಾ ದಾಖಲೆ ನೀಡಿದ್ದೇ ಡಿಕೆಶಿ, ಸಿಎಂ ಆಪ್ತ ಬಳಗ

| Published : Sep 26 2024, 10:17 AM IST

ಸಾರಾಂಶ

ಮುಡಾ ಹಗರಣ ದಾಖಲೆ ನೀಡಿರುವುದೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಬಳಗ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಾಂಬ್ ಸಿಡಿಸಿದ್ದಾರೆ.

- ಬಿಜೆಪಿ ಮುಖಂಡ ರೇಣುಕಾಚಾರ್ಯ ಬಾಂಬ್‌ । ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಲು ತಾಕೀತು

- - -

- ಕಾಂಗ್ರೆಸ್ ಸರ್ಕಾರ ಕೆಡವೋದು ಬೇಡ, ಒಳಜಗಳದಿಂದಾಗಿಯೇ ಪತನವಾಗುತ್ತೆ

- ಈ ಹಿಂದೆ ಬಿಎಸ್‌ವೈ ರಾಜೀನಾಮೆ ಕೇಳಿದವ್ರು ಈಗ ರಾಜಿನಾಮೆ ಕೊಡದಿದ್ರೆ ಹೇಗೆ ಎಂದು ಪ್ರಶ್ನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮುಡಾ ಹಗರಣ ದಾಖಲೆ ನೀಡಿರುವುದೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಬಳಗ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭೆ ಕಲಾಪ ವೇಳೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಬಗ್ಗೆ ಬಿಜೆಪಿಯವರು ಪ್ರಸ್ತಾಪಿಸಿದರೆ, ಕಾಂಗ್ರಸ್ಸಿನ ಕೆಲವರು ಮುಡಾ ಬಗ್ಗೆ ಪ್ರಸ್ತಾಪಿಸುತ್ತಿದ್ದರು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೆಟ್ಟ ಹೆಸರು ತರಲು ಸಿದ್ದರಾಮಯ್ಯ ಆಪ್ತ ಬಳಗದವರೇ ಒಳಸಂಚು ಮಾಡುತ್ತಿದ್ದಾರೆ. ಸ್ವತಃ ಸಿದ್ದರಾಮಯ್ಯ ತಮಗೆ ಸಂಗೊಳ್ಳಿ ರಾಯಣ್ಣನವರಂತಹ ಸ್ಥಿತಿ ತಂದಿದ್ದಾರೆಂದು ಹೇಳಿರುವುದು ಸಿಎಂ ಆಪ್ತ ಬಳಗದವರೇ ಮುಡಾ ಹಗರಣಕ್ಕೆ ಸಂಬಂಧಿಸಿದ ದಾಖಲೆ ನೀಡಿರಬಹುದೆಂಬ ಮಾತಿಗೆ ಪುಷ್ಠಿ ನೀಡುತ್ತದೆ ಎಂದು ಹೇಳಿದರು.

ಮುಡಾ ಹಗರಣ ದಾಖಲೆ ಶೇ.100ರಷ್ಟು ನೀಡಿರುವುದು ಸಿದ್ದರಾಮಯ್ಯ ಆಪ್ತ ಬಳಗ. ರಾಜ್ಯದ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸುವ ಯಾವುದೇ ಪ್ರಯತ್ನ ಬಿಜೆಪಿ ಮಾಡುವುದಿಲ್ಲ. ಕಾಂಗ್ರೆಸ್‌ ಪಕ್ಷದಲ್ಲೇ ಮುಖ್ಯಮಂತ್ರಿ ಕುರ್ಚಿಗಾಗಿ ಒಳಜಗಳವಿದೆ. ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರುವುದಿಲ್ಲ. ಜನಾದೇಶ ಪಡೆದೇ ಅಧಿಕಾರಕ್ಕೆ ಬರುತ್ತೇವೆ. ಶೀಘ್ರವೇ ಕಾಂಗ್ರೆಸ್ ಸರ್ಕಾರ ಪತನ ಖಚಿತ ಎಂದು ರೇಣುಕಾಚಾರ್ಯ ತಿಳಿಸಿದರು.

ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆರೋಪ ಕೇಳಿ ಬಂದಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆಗ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ಸಿನ ನಾಯಕರು ರಾಜಿನಾಮೆಗೆ ಒತ್ತಾಯಿಸಿದ್ದರು. ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಪ್ರಕರಣ ಬೇರೆ, ಸಿದ್ದರಾಮಯ್ಯ ಪ್ರಕರಣ ಬೇರೆ ಎಂದು ಅವರು ವಿವರಿಸಿದರು.

ಹಂಸರಾಜ ಭಾರದ್ವಾಜ್ ರಾಜ್ಯಪಾಲರಾಗಿದ್ದಾಗ ರಾಜಭವನ ಬಳಸಿಕೊಂಡು ಯಡಿಯೂರಪ್ಪ ವಿರುದ್ದ ಏನೆಲ್ಲಾ ಮಾಡಿದ್ದೀರಿ. ಬಿಎಸ್‌ವೈ ವಿರುದ್ಧ ಹಾಕಬಾರದ ಕೇಸ್ ದಾಖಲಿಸಿ, ದ್ವೇಷ ರಾಜಕಾರಣ, ವೈಯಕ್ತಿಕ ದ್ವೇಷ ಸಾಧಿಸಿದ್ದಿರಿ. ಬಿಜೆಪಿ ಎಂದಿಗೂ ದ್ವೇಷ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ ನಾಗಪ್ಪ, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ, ಬಿ.ಎಂ. ಸತೀಶ ಕೊಳೇನಹಳ್ಳಿ, ಪ್ರವೀಣ ಜಾಧವ್, ರಾಜು ವೀರಣ್ಣ ಇತರ ರು ಇದ್ದರು.

- - -

ಬಾಕ್ಸ್‌

* ಕಾದು ನೋಡಿ, ಪಾಲಿಕೆ ಅಧಿಕಾರ ಹಿಡಿತೀವಿ: ಬಿಜೆಪಿ- ನಾಳೆ ಮೇಯರ್-ಉಪ ಮೇಯರ್ ಚುನಾವಣೆ ಹಿನ್ನೆಲೆ ಜಿಲ್ಲಾಧ್ಯಕ್ಷ ಭವಿಷ್ಯ ದಾವಣಗೆರೆ: ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನಗಳಿಗೆ ಸೆ.27ರಂದು ನಡೆಯುವ ಚುನಾವಣೆಯಲ್ಲಿ ನಾವು ಸ್ಪರ್ಧೆ ಮಾಡುತ್ತೇವೆ. ಅಷ್ಟೇ ಅಲ್ಲ, ಪಾಲಿಕೆಯಲ್ಲಿ ಅಧಿಕಾರಕ್ಕೂ ಬರುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಹೇಳಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಯರ್, ಉಪ ಮೇಯರ್ ಸ್ಥಾನಗಳ ಚುನಾವಣೆಗೆ ಬಿಜೆಪಿ ಸದಸ್ಯರು ಸ್ಪರ್ಧೆ ಮಾಡುತ್ತಾರೆ. ಬಿಜೆಪಿಯ ಎಲ್ಲ ಸದಸ್ಯರಿಗೂ ವಿಪ್ ಜಾರಿ ಮಾಡಲಾಗುವುದು ಎಂದರು. ಪಾಲಿಕೆಯಲ್ಲಿ ಬಿಜೆಪಿ 22 ಹಾಗೂ ಕಾಂಗ್ರೆಸ್ಸಿನ 24 ಸದಸ್ಯರಿದ್ದಾರೆ. ಆದರೂ, ಪಾಲಿಕೆಯಲ್ಲಿ ನಾವೇ ಅಧಿಕಾರವನ್ನು ಹಿಡಿಯುತ್ತೇವೆ. ಹೇಗೆ ಎಂಬುದನ್ನು ಕಾದು ನೋಡಿ ಅಷ್ಟೇ. ಮೇಯರ್, ಉಪ ಮೇಯರ್ ಅಭ್ಯರ್ಥಿಗಳ ಬಗ್ಗೆ ನಮ್ಮ ಪಕ್ಷದ ಮುಖಂಡರು ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆ ಎದುರಿಸಬೇಕು ಅಂತಾ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ನೀಡಿದೆ. ಹಾಗಾಗಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದರೆ ರಾಜ್ಯವ್ಯಾಪಿ ಬಿಜೆಪಿ ತೀವ್ರ ಸ್ವರೂಪದ ಹೋರಾಟ ನಡೆಸಲಿದೆ. ಏನಾದರೂ ಸಂಭವಿಸಿದರೆ ಅದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದು ಎನ್.ರಾಜಶೇಖರ ನಾಗಪ್ಪ ಎಚ್ಚರಿಸಿದರು.

- - -

ಕೋಟ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅಪಾರ ಗೌರವ, ಅಭಿಮಾನವಿದೆ. ನಾವು ಸಿದ್ದರಾಮಯ್ಯ ವಿರುದ್ಧ ವೈಯಕ್ತಿಕವಾಗಿ ಹೋರಾಟ ಮಾಡುತ್ತಿಲ್ಲ. ಭ್ರಷ್ಟಾಚಾರ, ಹಗರಣದ ವಿರುದ್ಧ ನಾವು ಹೋರಾಟ ನಡೆಸುತ್ತಿದ್ದೇವೆ. ರಾಜ್ಯದ ಜನತೆ ಇಟ್ಟಿರುವ ಅಭಿಮಾನ, ಗೌರವ ಉಳಿಸಿಕೊಳ್ಳಲು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು. ತನಿಖೆಗೆ ಸಹಕರಿಸಬೇಕು

- ರೇಣುಕಾಚಾರ್ಯ, ಮಾಜಿ ಸಚಿವ

- - -

-25ಕೆಡಿವಿಜಿ3, 4:

ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.