ಸಾರಾಂಶ
ಹುಬ್ಬಳ್ಳಿ:
ಮುಡಾ ಹಗರಣದಲ್ಲಿ ಸಿದ್ದರಾಮಯ್ಯರ ನೇರ ಕೈವಾಡವಿದೆ. ಮುಖ್ಯಮಂತ್ರಿಗಳು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ವಿರೋಧ ಪಕ್ಷಗಳಿಗೆ ತನಿಖೆಯ ಗುಮ್ಮ ಬಿಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಗರಣದಲ್ಲಿ ಸತ್ತವರ ಹೆಸರಲ್ಲೂ ಡಿನೋಟಿಫಿಕೇಶನ್ ಮಾಡಲಾಗಿದೆ. ಜಮೀನು ಸಿದ್ದರಾಮಯ್ಯ ಅವರದ್ದಾ? ಯಾರು ಡಿ ನೋಟಿಫಿಕೇಷನ್ ಮಾಡಿಸಿದವರು?. 1993ರಲ್ಲಿ ಸತ್ತವರ ಹೆಸರಿನಲ್ಲಿ ಖಾತೆ ಸೃಷ್ಟಿಸಲಾಗಿದೆ. ಅಲ್ಲದೇ 1998ರಲ್ಲಿ ಸತ್ತಿರುವವರ ಹೆಸರಲ್ಲಿ ಡಿ ನೋಟಿಫೈ ಮಾಡಲಾಗಿದೆ ಎಂದರು. ಇದೆಲ್ಲ ಪ್ರಕರಣಗಳು ಹೊರಬರುತ್ತಿದ್ದಂತೆ ಈಗ ಸಿದ್ದರಾಮಯ್ಯ ವಿಪಕ್ಷಗಳಿಗೆ ತನಿಖೆಯ ಗುಮ್ಮ ಬಿಡುತ್ತಿದ್ದಾರೆ. ಇಡಿ ಸಿಎಂ ಹೆಸರು ಹೇಳುವಂತೆ ಬಂಧಿತರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ತಮ್ಮ ಸಚಿವರಿಂದ ಹೇಳಿಕೆ ನೀಡಿಸುತ್ತಿದ್ದಾರೆ. ಈ ಮಾಹಿತಿ ಅವರಿಗೆ ಎಲ್ಲಿಂದ ಬಂತು?. ಇಡಿ ತನಿಖೆ ವಿಚಾರಗಳು ಸಿಎಂ ಹೇಗೆ ಗೊತ್ತಾಯಿತು? ಅವರು ಏನೂ ತಪ್ಪು ಮಾಡದಿದ್ದರೆ, ಪ್ರಕರಣದಲ್ಲಿ ಭಾಗಿಯಾಗಿರದಿದ್ದರೆ ಅವರು ಏಕೆ ಊಹೆ ಮಾಡಿಕೊಳ್ಳಬೇಕು. ನಾಲ್ಕು ಸಚಿವರ ಕೈಯಿಂದ ಉತ್ತರ ಕೊಡಿಸಿದ್ದು ಏಕೆ? ಎಂದು ಪ್ರಶ್ನಿಸಿದರು.ಸರ್ಕಾರ ವಿವಿಧ ಹಗರಣಗಳಲ್ಲಿ ಭಾಗಿಯಾಗಿರುವುದರಿಂದ ಮುಖ್ಯಮಂತ್ರಿ ನೈತಿಕತೆ ಉಳಿಸಿಕೊಂಡಿಲ್ಲ. ಸಾರ್ವಜನಿಕವಾಗಿ ಮುಖ ತೋರಿಸಲು ಆಗದ ಸ್ಥಿತಿಯಲ್ಲಿದ್ದಾರೆ ಎಂದು ಆರೋಪಿಸಿದರು.
ಭೇಟಿ ನೀಡದ ಸಿಎಂ:ರಾಜ್ಯದ ಕರಾವಳಿ ಭಾಗ ಸೇರಿದಂತೆ ಚಿಕ್ಕಮಗಳೂರು, ಕೊಡಗಿನಲ್ಲಿ ಅಪಾರ ಪ್ರಮಾಣದ ಮಳೆಯಾಗಿ 7 ಜನರು ಸಾವನ್ನಪ್ಪಿದ್ದಾರೆ. ಹಲವೆಡೆ ಗುಡ್ಡಕುಸಿದು ಸಾಕಷ್ಟು ಹಾನಿಯಾಗಿದ್ದರೂ ಮುಖ್ಯಮಂತ್ರಿ, ಸಚಿವರು ಸ್ಥಳಕ್ಕೆ ಭೇಟಿ ನೀಡದಿರುವುದು ಆಶ್ಚರ್ಯ ತಂದಿದೆ. ಆದರೆ, ಕಂದಾಯ ಸಚಿವರು ಜಿಲ್ಲಾಧಿಕಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸೂಚನೆ ಕೊಡುತ್ತಿದ್ದಾರೆ. ಏನಾದರೂ ಕೇಳಿದರೆ ಪಿಡಿ ಖಾತೆಯಲ್ಲಿ ಹಣವಿದೆ ಎನ್ನುತ್ತಿದ್ದಾರೆ. ಹಣ ಇಟ್ಟರೆ ಸಾಲದು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಜನರಿಗೆ ಧೈರ್ಯ ತುಂಬುವ, ಸಾಂತ್ವನ ಹೇಳುವ ಕಾರ್ಯ ಮಾಡಬೇಕಿತ್ತು. ಇವರ ಈ ನಡೆಯಿಂದ ಸರ್ಕಾರಕ್ಕೆ ಜನರ ಮೇಲಿರುವ ಕಾಳಜಿ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಕುಟುಕಿದರು.
ಪರಿಸ್ಥಿತಿ ಅವಲೋಕಿಸುವೆ:ಅತಿವೃಷ್ಟಿಯಾಗಿರುವ ಪ್ರದೇಶಗಳಿಗೆ ನಾನು ಮೂರು ದಿನಗಳ ಹಿಂದೆಯೇ ಭೇಟಿ ಕೊಡಲು ಯೋಜಿಸಿದ್ದೆ. ಆದರೆ, ದೆಹಲಿಯಲ್ಲಿ ಇಲಾಖೆಯ ನಿಗದಿತ ಕಾರ್ಯಕ್ರಮಗಳು ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಭೇಟಿ ನೀಡಲು ಆಗಿರಲಿಲ್ಲ. ಈಗ ಉತ್ತರ ಕನ್ನಡಕ್ಕೆ ಭೇಟಿ ನೀಡುತ್ತಿದ್ದು, ಭಾನುವಾರ ಸಕಲೇಶಪುರದಲ್ಲಿ ಮಳೆಯಿಂದಾಗಿ ಹಾನಿಗೊಳಲಾಗದ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸುವೆ ಎಂದರು.
ರಾಜ್ಯದಲ್ಲಿ ರಾಜಕೀಯ ಬೆಳವಣಿಗೆ ಏನೇ ಇರಲಿ. ಜನತೆ ಸಂಕಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲೂ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಅಲ್ಲಿನ ವಸ್ತುಸ್ಥಿತಿ ಪರಿಶೀಲಿಸದಿರುವುದು ದುರ್ದೈವದ ಸಂಗತಿ. ಈ ಸರ್ಕಾರ ಆಡಳಿತ ಹೇಗೆ ನಡೆಸಬೇಕೆಂಬುದನ್ನು ಮರೆತು ಹೋಗಿದೆ ಎಂದರು.ಭ್ರಷ್ಟಾಚಾರ ತಾಂಡವ:
ಕೆಐಎಡಿಬಿಯಲ್ಲಿಯೂ ಹಗರಣ ನಡೆದಿದೆ ಎನ್ನುವ ಮಾಹಿತಿ ಬರುತ್ತಿದ್ದು, ಕಾಂಗ್ರೆಸ್ ಸರ್ಕಾರ ಏನು ಮಾಡುತ್ತಿದೆ. ನಾನು ಕೇಂದ್ರ ಸಚಿವರಾಗಿರುವುದರಿಂದ ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಅವರೇ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಧಾರವಾಡದಲ್ಲಿ ಒಂದು ವರ್ಷದಿಂದ ಹಾಲಿನ ಸಬ್ಸಿಡಿ ಹಣ ನೀಡುತ್ತಿಲ್ಲ ಎಂದು ರೈತರು ಕೆಎಂಎಫ್ ಎದುರು ಹೋರಾಟ ಮಾಡುತ್ತಿದ್ದಾರೆ. ಅದಕ್ಕೂ ಸರ್ಕಾರ ಸ್ಪಂದಿಸುವ ಕಾರ್ಯ ಮಾಡದಿರುವುದು ದುರ್ದೈವದ ಸಂಗತಿ ಎಂದರು.