ಮುಡಾ ಹಗರಣ ಸಿಬಿಐ ತನಿಖೆಗೆ ವಹಿಸಲಿ

| Published : Oct 20 2024, 01:51 AM IST / Updated: Oct 20 2024, 01:52 AM IST

ಸಾರಾಂಶ

ರಾಮನಗರ: ಮುಡಾ ಹಗರಣದಲ್ಲಿ ಭಾಗಿಯಾಗಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು. ಜೊತೆಗೆ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಒತ್ತಾಯಿಸಿದರು.

ರಾಮನಗರ: ಮುಡಾ ಹಗರಣದಲ್ಲಿ ಭಾಗಿಯಾಗಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು. ಜೊತೆಗೆ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ನಿವೇಶನ ಹಂಚಿಕೆಯಲ್ಲಿ 5 ಸಾವಿರ ಕೋಟಿ ಹಗರಣ ನಡೆದಿದ್ದು, ಇದರಲ್ಲಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದವರು ನೇರ ಫಲಾನುಭವಿಗಳಾಗಿದ್ದಾರೆ. ಸಿಬಿಐ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ ಎಂದು ಹೇಳಿದರು.

ಕೂಗುಮಾರಿ ಸಚಿವರು:

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರು ಭಾಗಿಯಾಗಿರುವುದು ಸಾಬೀತಾಗಿದ್ದರು ಸಹ ಕೆಲ ಸಚಿವರು ಅವರ ರಕ್ಷಣೆಗೆ ನಿಂತಿದ್ದಾರೆ. ಸಚಿವರಾದ ಕೃಷ್ಣಭೈರೇಗೌಡ, ಪ್ರಿಯಾಂಕ ಖರ್ಗೆ, ಭೈರತಿ ಸುರೇಶ್ ಹಾಗೂ ಮಾಜಿ ಸಚಿವ ನಾಗೇಂದ್ರ ಅವರಿಗೆ ಹಗರಣದ ಸಂಪೂರ್ಣ ಮಾಹಿತಿ ಇದ್ದರೂ ಸಿದ್ದರಾಮಯ್ಯ ಪರ ಕೂಗುಮಾರಿಗಳಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.

2004ರಿಂದ ಇಂದಿನವರೆಗೆ ಮುಡಾ ಹಗರಣದ ಎಲ್ಲಾ ಪ್ರಮುಖ ಹಂತಗಳು ನಡೆದಾಗ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿ, ವಿಪಕ್ಷ ನಾಯಕ, ಮುಖ್ಯಮಂತ್ರಿ ಹೀಗೆ ಪ್ರಭಾವಿ ಹುದ್ದೆಗಳಲ್ಲಿಯೇ ಇದ್ದವರು. ನನಗೂ ಸೈಟ್ ಗಳಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದಿದ್ದ ಸಿದ್ದರಾಮಯ್ಯ 65 ಕೋಟಿ ಕೊಟ್ಟರೆ 14 ಸೈಟ್ ಗಳನ್ನು ವಾಪಸ್ ನೀಡುವುದಾಗಿ ಹೇಳಿದರು.

ರಾಜ್ಯಪಾಲರು ಎಲ್ಲ ದಾಖಲೆಗಳನ್ನು ಕೂಲಂಕಶವಾಗಿ ಪರಿಶೀಲಿಸಿ ಮುಖ್ಯಮಂತ್ರಿಗಳ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರು. ಹೈಕೋರ್ಟ್ ಕೂಡ ಎಫ್‌ಐಆರ್ ದಾಖಲಿಸಿ ಲೋಕಾಯುಕ್ತ ತನಿಖೆಗೆ ಆದೇಶ ಮಾಡಿತು.ಇನ್ನೊಂದೆಡೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿಯೂ ಹಿನ್ನಡೆ ಆಗಿದೆ. ಆನಂತರ ಪಾರ್ವತಿ ಸಿದ್ದರಾಮಯ್ಯನವರು ತಮಗೆ ನೀಡಿದ 14 ಸೈಟ್ ಮುಡಾಗೆ ಹಿಂದಿರುಗಿಸಿ ಪತ್ರವನ್ನು ಮುಡಾ ಆಯುಕ್ತರಿಗೆ ನೀಡಿದರು. ಈಗ ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರೀಗೌಡ ಅವರಿಂದ ರಾಜೀನಾಮೆ ಪಡೆದು ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಒಪ್ಪಿಕೊಂಡಿದೆ ಎಂದು ದೂರಿದರು.

ಈ ಮುಡಾ ಹಗರಣದಲ್ಲಿ ಕಾಂಗ್ರೆಸ್ ಸರ್ಕಾರದ ಮುಷ್ಠಿಯಲ್ಲಿರುವ ಯಾವ ತನಿಖಾ ಸಂಸ್ಥೆಯಿಂದಲೂ ನ್ಯಾಯ ಸಿಗುವುದಿಲ್ಲ. ಸಿಬಿಐ ಹಾಗೂ ಇಡಿ ತನಿಖೆಗೆ ವಹಿಸಬೇಕು. ಸಿದ್ದರಾಮಯ್ಯ ಇನ್ನೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆದರೆ ಆ ಸ್ಥಾನದ ಗೌರವಕ್ಕೆ ಕಪ್ಪು ಮಸಿ ಬಳಿದ ಇತಿಹಾಸ ಶಾಶ್ವತವಾಗಿ ಕರ್ನಾಟಕದ ಚರಿತ್ರೆಯಲ್ಲಿ ಉಳಿಯುತ್ತದೆ ಎಂದು ಅಶ್ವತ್ಥ ನಾರಾಯಣ ಟೀಕಿಸಿದರು.

ಮೈಸೂರಿನ ಮುಡಾ ಹಾಗೂ ತಹಸೀಲ್ದಾರ್ ಕಚೇರಿಗಳಿಗೆ ಮೂರು ಬಾರಿ ದಾಖಲೆಗಳನ್ನು ಕೇಳಿದರು ನೀಡದ ಕಾರಣ ಇಡಿ ದಾಳಿ ಮಾಡಿದೆ. ಸಿಎಂ ಕುಟುಂಬವೇ ಪಾಲ್ಗೊಂಡ ಮುಡಾ ಹಗರಣವನ್ನು ಮುಚ್ಚಿ ಹಾಕುವ ಉದ್ದೇಶ ಸರ್ಕಾರದ್ದು, ಮೊದಲು ಎಸ್ ಐಟಿ ತನಿಖೆಗೆ ಕೊಡಲಾಗಿತ್ತು. ಕೋರ್ಟ್ ಆದೇಶವಾಗಿದ್ದರೂ ಎಸ್ ಐಟಿ ಈ ಕೇಸನ್ನು ಹಿಂಪಡೆದಿಲ್ಲ ಎಂದು ಆರೋಪಿಸಿದರು.

ಮುಡಾ ಹಗರಣ, ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣ, ಸಿದ್ದಾರ್ಥ್ ವಿಹಾರ ಟ್ರಸ್ಟ್ ಭೂ ಹಗರಣ ಇಂತಹ ಅನೇಕ ಹಗರಣಗಳನ್ನು ಕರ್ನಾಟಕದಲ್ಲಿ ನಿರಂತರವಾಗಿ ಕಾಂಗ್ರೆಸ್ ಸರ್ಕಾರ ಮಾಡಿಕೊಂಡು ಬರುತ್ತಿದೆ. ಕಾಂಗ್ರೆಸ್ ಸರ್ಕಾರದ ಇಷ್ಟೆಲ್ಲ ಭ್ರಷ್ಟಾಚಾರಗಳನ್ನು ನೋಡಿದರೆ ಐಎನ್ ಸಿ ಅಂದರೆ ಇಂಡಿಯನ್ ನ್ಯಾಷನಲ್ ಕರೆಪ್ಷನ್ ಪಾರ್ಟಿ - ಭ್ರಷ್ಟಾಚಾರ ಮತ್ತು ಹಗರಣಗಳ ಪಕ್ಷ ಎನ್ನುವಂತಾಗಿದೆ.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರುದ್ರದೇವರು, ಶಿವಾನಂದ, ಚೇತನ್ , ಸಂದೀಪ್ ರೆಡ್ಡಿ, ನಾಗೇಶ್ ಇತರರಿದ್ದರು.

ಬಾಕ್ಸ್‌................

ಮಹಾರಾಷ್ಟ್ರ-ಜಾರ್ಖಂಡ್‌ಗೂ ಕರ್ನಾಟಕದ ತೆರಿಗೆ ಹಣ:

ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಿಕೊಂಡು ಹೋಗುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡುತ್ತಿರುವುದನ್ನು ನೋಡಿದರೆ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆ, ಕರ್ನಾಟಕದ ಮೂರು ಕ್ಷೇತ್ರಗಳ ಉಪಚುನಾವಣೆಗೆ ಹಣ ಹೊಂದಿಸುವ ಜವಾಬ್ದಾರಿ ನೀಡಿರುವ ಗುಮಾನಿ ಕಾಡುತ್ತಿದೆ.

ವಾಲ್ಮೀಕಿ ನಿಗಮದ ಹಣವನ್ನು ತೆಲಂಗಾಣ ವಿಧಾನಸಭಾ ಚುನಾವಣೆಗೆ ಬಳಸಿಕೊಂಡಿರುವುದು ಸಾಬೀತಾಗಿದೆ. ಆ ಹಣ ವಾಪಸ್ ಬಂದು ಬಳ್ಳಾರಿಯಲ್ಲಿ ಹಂಚಿಕೆಯಾಗಿರುವುದನ್ನು ಇಡಿ ಬಹಿರಂಗ ಪಡಿಸಿದೆ. ಇದೇ ರೀತಿ ಚುನಾವಣೆಗಳಿಗೆ ನಾಡಿನ ಜನರ ತೆರಿಗೆ ಹಣ ದುರ್ಬಳಕೆ ಆಗುವ ಸಾಧ್ಯತೆ ಇದೆ ಎಂದು ಅಶ್ವತ್ಥ ನಾರಾಯಣಗೌಡ ಶಂಕೆ ವ್ಯಕ್ತಪಡಿಸಿದರು.

ಬಾಕ್ಸ್‌............

ಚನ್ನಪಟ್ಟಣದಲ್ಲಿ ಸಿಪಿವೈ ಗೆಲುವು ಗೋಡೆ ಬರಹದಷ್ಟೇ ಸತ್ಯ

ರಾಮನಗರ:

ಕೋಲಾರ ಸಂಸತ್ ಕ್ಷೇತ್ರದಲ್ಲಿ ಬಿಜೆಪಿ ಸಂಸದರಿದ್ದರು. ಆ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಯನ್ನು ಕೊಟ್ಟ ಕಾರಣ ಜೆಡಿಎಸ್ ಗೆ ಬಿಟ್ಟುಕೊಟ್ಟೆವು. ಈಗ ಚನ್ನಪಟ್ಟಣ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡುವಂತೆ ಮನವಿ ಮಾಡುತ್ತಿದ್ದೇವೆ. ಇಲ್ಲಿ ಸಿ.ಪಿ.ಯೋಗೇಶ್ವರ್ ಮೈತ್ರಿ ಅಭ್ಯರ್ಥಿಯಾದಲ್ಲಿ ನೂರಕ್ಕೆ ನೂರರಷ್ಟು ಗೆಲ್ಲುವುದು ಗೋಡೆ ಬರಹದಷ್ಟೇ ಸತ್ಯ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರ ಸಂಸತ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಮರಿಸ್ವಾಮಿ ಗೆದ್ದಿದ್ದರು.ಆ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟು ಮೈತ್ರಿ ಧರ್ಮ ಪಾಲನೆ ಮಾಡಿದೆವು. ಜೆಡಿಎಸ್ ನವರು ಗೆಲುವಿನ ಅಭ್ಯರ್ಥಿಯನ್ನು ಕೊಟ್ಟ ಮೇಲೆ ಮರಿಸ್ವಾಮಿಯವರು ಅವರ ಪರವಾಗಿ ಚುನಾವಣೆ ಮಾಡಿದರು. ಈಗ ಚನ್ನಪಟ್ಟಣ ಕ್ಷೇತ್ರದಲ್ಲಿ ಯೋಗೇಶ್ವರ್ ಮೈತ್ರಿ ಅಭ್ಯರ್ಥಿಯಾದಲ್ಲಿ ಗೆಲ್ಲುವುದು ಶತಸಿದ್ಧ ಎಂದರು.

ಯೋಗೇಶ್ವರ್ ಅಥವಾ ಕುಮಾರಸ್ವಾಮಿ ಪೈಕಿ ಯಾರಾದರು ಒಬ್ಬರು ನಿಂತರೆ ಮಾತ್ರ ಚನ್ನಪಟ್ಟಣ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯ. ಯೋಗೇಶ್ವರ್ ಅವರಿಗೆ ಕ್ಷೇತ್ರ ಬಿಟ್ಟುಕೊಡುವಂತೆ ನಾವು ಮನವಿ ಮಾಡುತ್ತೇವೆ. ಜನಾಭಿಪ್ರಾಯವೂ ಅವರ ಪರವಾಗಿಯೇ ಇದೆ. ಸಂಸತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗಾಗಿ ಯೋಗೇಶ್ವರ್ ಶ್ರಮಿಸಿದವರು ಎಂದು ಹೇಳಿದರು.

ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾದರೆ ಗೆಲುವು ಕಷ್ಟವೇ ಎಂಬ ಪ್ರಶ್ನೆಗೆ ಕ್ಷೇತ್ರದಲ್ಲಿನ ವಾತಾವರಣ, ಸತ್ಯಾಸತ್ಯತೆ ಏನೆಂಬುದು ನಿಮಗೂ ಗೊತ್ತಿದೆ. ಹೀಗಿದ್ದರೂ ಕೇಳಬಾರದ ಪ್ರಶ್ನೆಯನ್ನು ಕೇಳುತ್ತೀರಿ. ನಿಖಿಲ್ ಸೋಲುತ್ತಾರೆ ಅಂತ ಹೇಳುತ್ತಿಲ್ಲ. ಯೋಗೇಶ್ವರ್ ಸ್ಪರ್ಧಿಸಿದರೆ ಏಕೆ ಗೆಲ್ಲುತ್ತಾರೆ ಎಂಬುದನ್ನು ಹೇಳುತ್ತಿದ್ದೇನೆ. ಸಂಸದ ಡಾ.ಸಿ.ಎನ್. ಮಂಜುನಾಥ್ ಎನ್ ಡಿಎ ಅಭ್ಯರ್ಥಿಯೆಂದು ಘೋಷಣೆಯಾದ ಮೇಲೆ ಜೆಡಿಎಸ್ - ಬಿಜೆಪಿಯವರು ಒಟ್ಟಿಗೆ ಕೆಲಸ ಮಾಡಿದರು. ಅದೇ ನಿಖಿಲ್ ಕುಮಾರಸ್ವಾಮಿ ಮಾತ್ರವಲ್ಲ ಯಾರೇ ಮೈತ್ರಿ ಅಭ್ಯರ್ಥಿಯಾದರು ಉಭಯ ಪಕ್ಷದವರು ಕೆಲಸ ಮಾಡಬೇಕಾಗುತ್ತದೆ ಎಂದು ಉತ್ತರಿಸಿದರು.

ಯೋಗೇಶ್ವರ್ ಜೆಡಿಎಸ್ ಚಿಹ್ನೆಯಲ್ಲಿ ಸ್ಪರ್ಧಿಸಬೇಕೆಂದು ಕೇಂದ್ರ ಸಚಿವ ಕುಮಾರಸ್ವಾಮಿ ಷರತ್ತು ಹಾಕಿದರೆ ಒಪ್ಪುತ್ತೀರಾ ಎಂಬ ಪ್ರಶ್ನೆಗೆ, ನಾನು ಬಿಜೆಪಿ ಪಕ್ಷದ ವಕ್ತಾರನಾಗಿ ಆ ಷರತ್ತನ್ನು ಒಪ್ಪುವುದಿಲ್ಲ. ಈ ವಿಚಾರದಲ್ಲಿ ಯೋಗೇಶ್ವರ್ ಅಭಿಪ್ರಾಯ ಏನೆಂದು ಅವರೇ ಹೇಳಬೇಕು. ಜೆಡಿಎಸ್ ಚಿಹ್ನೆ ಅಲ್ಲ ಎನ್‌ಡಿಎ ಅಡಿಯಲ್ಲಿ ಯಾರು ಸ್ಪರ್ಧಿಸುತ್ತಾರೊ ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಯೋಗೇಶ್ವರ್ ನುರಿತ ರಾಜಕಾರಣಿ. ಒಮ್ಮೆ ಕೆಂಪು ಟೋಪಿ ಹಾಕಿಕೊಂಡು ಸೈಕಲ್‌ನಲ್ಲಿ ಗೆದ್ದರು. ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರರಾಗಿಯೂ ಗೆದ್ದವರು. ಈಗ ಯೋಗೇಶ್ವರ್ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಗಳು ಇಲ್ಲ. ಸುಖಾಂತ್ಯದಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ ಎಂದು ಅಶ್ವತ್ಥ ನಾರಾಯಣಗೌಡ ತಿಳಿಸಿದರು.

19ಕೆಆರ್ ಎಂಎನ್ 1.ಜೆಪಿಜಿ

ರಾಮನಗರದಲ್ಲಿ ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.