ಮುಡಾ ಹಗರಣ ಮಾಡಿದ್ದೇ ಬಿಜೆಪಿ: ಸಚಿವ ದರ್ಶನಾಪುರ

| Published : Jul 31 2024, 01:05 AM IST

ಸಾರಾಂಶ

ಭ್ರಷ್ಟಾಚಾರದಲ್ಲಿ ಬಿಜೆಪಿ ಎತ್ತಿದ ಕೈ, ಮುಡಾದಲ್ಲಿ ಹಗರಣ‌ ಮಾಡಿದ್ದೇ ಬಿಜೆಪಿಗರು, ತಾವು ತಿಂದು‌ ಬೇರೆಯವರ ಮೂತಿಗೆ ಒರೆಸುತ್ತಿದ್ದಾರೆ ಎಂದು ಸಣ್ಣ ಕೈಗಾರಿಕೆ ಇಲಾಖೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಶರಣಬಸಪ್ಪಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಭ್ರಷ್ಟಾಚಾರದಲ್ಲಿ ಬಿಜೆಪಿ ಎತ್ತಿದ ಕೈ, ಮುಡಾದಲ್ಲಿ ಹಗರಣ‌ ಮಾಡಿದ್ದೇ ಬಿಜೆಪಿಗರು, ತಾವು ತಿಂದು‌ ಬೇರೆಯವರ ಮೂತಿಗೆ ಒರೆಸುತ್ತಿದ್ದಾರೆ ಎಂದು ಸಣ್ಣ ಕೈಗಾರಿಕೆ ಇಲಾಖೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಶರಣಬಸಪ್ಪಗೌಡ ಹೇಳಿದರು.

ಯಾದಗಿರಿ ನಗರದ ಜಿಲ್ಲಾ ಉಸ್ತುವಾರಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಡಾ ನಿವೇಶನ ಹಂಚಿಕೆ ಮಾಡಲಾಗಿದೆ. ಎಲ್ಲ ಪಕ್ಷದವರು ಪ್ಲಾಟ್ ಖರೀದಿ ಮಾಡಿದ್ದಾರೆ ಎನ್ನುವ ಸಚಿವ ಭೈರತಿ ಸುರೇಶ ಅವರ ಮಾತನ್ನು ಯಾರೊಬ್ಬ ಬಿಜೆಪಿ ನಾಯಕ‌ ಅಲ್ಲಗೆಳೆಯುತ್ತಿಲ್ಲವಲ್ಲ ಎಂದರು. ಬಿಜೆಪಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪ್ರಿಯತೆ ಸಹಿಸದೇ ಅವರ ಹೆಸರಿಗೆ ಮಸಿ ಬಳಿವ ಹುನ್ನಾರ ನಡೆಸುತ್ತಿದ್ದಾರೆಂದು ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ವಿಧಾನಸಭೆಯಲ್ಲಿ ಗೆದ್ದಿದೆ. ಲೋಕಸಭೆ ಫಲಿತಾಂಶದಲ್ಲಿ ಸಹ ಬಿಜೆಪಿ ಅಂದುಕೊಂಡಷ್ಟು ಸ್ಥಾನಗಳು ಸಿಗದೇ ಇರುವ ಕಾರಣ, ಬಿಜೆಪಿ ಹೈಕಮಾಂಡ್‌ ರಾಜ್ಯ ನಾಯಕರಿಗೆ ಒತ್ತಡ ಹೇರಿದೆ. ಆದ್ದರಿಂದ ಬಿಜೆಪಿ‌ ನಾಯಕರು ಇಂತಹ ಕೆಳಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಪಾದಯಾತ್ರೆ ಕುರಿತು ಸ್ವತಃ ಬಿಜೆಪಿ ಶಾಸಕ ಯತ್ನಾಳ ಅವರೇ ಟೀಕಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು.