ಸಾರಾಂಶ
ಹುಬ್ಬಳ್ಳಿ:
ಕಳಂಕರಹಿತ ರಾಜಕಾರಣ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿಯವರು ಮಸಿ ಬಳಿಯುವ ಉದ್ದೇಶದಿಂದ ಏನೂ ನಡೆಯದಿದ್ದರೂ ಮುಡಾ ಹಗರಣ ಹುಟ್ಟುಹಾಕಿದ್ದಾರೆ ಎಂದು ಅಹಿಂದ ಶೋಷಿತ ಸಮುದಾಯ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಆರೋಪಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ರಾಜಕೀಯ ಜೀವನಕ್ಕೆ ಹಾಗೂ ಅವರ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದಲೇ ಬಿಜೆಪಿ ನಾಯಕರು ಈ ರೀತಿಯ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಹೋರಾಟದ ಬಗ್ಗೆ ಚರ್ಚೆ:ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಸಂಸ್ಥೆ ನೀಡಿರುವ ನೋಟಿಸ್ ಹಿನ್ನೆಲೆಯಲ್ಲಿ ಶೋಷಿತ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಹೋರಾಟದ ಬಗ್ಗೆ ಸಭೆಯಲ್ಲಿ ಚರ್ಚಿಸಿರುವುದಾಗಿ ತಿಳಿಸಿದರು.
ಮಸಿ ಬಳಿಯುವ ಕಾರ್ಯ:ಮುಡಾ ಹಗರಣವನ್ನು ಅನಗತ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆಗೆ ಕಟ್ಟುವ ಪಿತೂರಿ ನಡೆಯುತ್ತಿದೆ. ಹಗರಣ ನಡೆದಿದೆ ಎನ್ನಲಾಗುವ ಸಮಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಆ ಅವಧಿಯಲ್ಲೇ ಭೂಮಿ ಹಂಚಿಕೆ ಮಾಡಲಾಗಿದೆ. ಆದರೆ, ಈಗ ಸುಖಾಸುಮ್ಮನೆ ಮುಖ್ಯಮಂತ್ರಿಗಳ ಹೆಸರಿಗೆ ಮಸಿ ಬಳಿಯುವ ಕಾರ್ಯ ಮಾಡಲಾಗುತ್ತಿದೆ. ಮುಡಾ ಹಗರಣದಂತೆಯೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧವೂ ಆರೋಪವಿದೆ. ಅದರ ಬಗ್ಗೆಯೂ ತನಿಖೆಯಾಗಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಗೆಲುವು:ಸಿದ್ದರಾಮಯ್ಯ ಪರವಾಗಿ ಕುರುಬ ಸಮುದಾಯ ಅಷ್ಟೇ ಅಲ್ಲ ಶೋಷಿತರ ಸಮುದಾಯವೇ ಇದೆ. ಯಾವುದೇ ಕಾರಣಕ್ಕೂ ಅವರ ಹೆಸರು ಕೆಡಲು ನಾವು ಬಿಡುವುದಿಲ್ಲ. ಶಿಗ್ಗಾಂವಿ ಉಪ ಚುನಾವಣೆ ನಿಮಿತ್ತವಾಗಿ ಓಡಾಡುತ್ತಿದ್ದೇವೆ. ಇದೊಂದು ವಿಭಿನ್ನವಾದ ಚುನಾವಣೆ. ಹಿಂದೆ ಒನ್ ಸೈಡ್ ಚುನಾವಣೆ ಆಗುತ್ತಿತ್ತು. ಇದೀಗ ಜನರು ಬದಲಾವಣೆ ಬಯಸುತ್ತಿದ್ದಾರೆ. ಹಾಗಾಗಿ ಈ ಬಾರಿ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.