ಮುದ್ದಂಡ ಕಪ್ ಹಾಕಿ ಹಬ್ಬ: ದಾಖಲೆಯ 370 ತಂಡಗಳ ನೋಂದಣಿ

| Published : Mar 16 2025, 01:46 AM IST

ಸಾರಾಂಶ

ಈ ಬಾರಿಯ ಮುದ್ದಂಡ ಕಪ್‌ ಹಾಕಿ ಉತ್ಸವದಲ್ಲಿ 10 ತಂಡಗಳು ಹೆಚ್ಚುವರಿಯಾಗಿದ್ದು, 370 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ 25ನೇ ವರ್ಷದ ಮುದ್ದಂಡ ಕಪ್ ಹಾಕಿ ಉತ್ಸವ’ ಮಾ.28 ರಿಂದ ಏ.27ರ ವರೆಗೆ ನಡೆಯಲಿದ್ದು, ಈಗಾಗಲೇ ದಾಖಲೆಯ 370 ತಂಡಗಳು ನೋಂದಣಿ ಮಾಡಿಕೊಂಡಿವೆ ಎಂದು ಮುದ್ದಂಡ ಕುಟುಂಬದ ಪ್ರಮುಖರು ತಿಳಿಸಿದರು.

ನಗರದ ಸುದ್ದಿಗೋಷ್ಠಿಯಲ್ಲಿ ಮುದ್ದಂಡ ಹಾಕಿ ಹಬ್ಬದ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ಮಾತನಾಡಿ, ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಎರಡು ಮೈದಾನ ಹಾಗೂ ಪೊಲೀಸ್ ಕವಾಯತು ಮೈದಾನದಲ್ಲಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದ್ದು, ಗ್ಯಾಲರಿ ನಿರ್ಮಾಣದ ಕಾರ್ಯ ಆರಂಭಗೊಂಡಿದೆ. ಹಾಕಿ ಉತ್ಸವದ ಬೆಳ್ಳಿಹಬ್ಬದ ಸಂಭ್ರಮದ ಹಿನ್ನೆಲೆ ಹಾಕಿ ಪಂದ್ಯಾವಳಿಯೊಂದಿಗೆ ವಿಭಿನ್ನ ಕಾರ್ಯಕ್ರಮಗಳು ಕೂಡ ನಡೆಯಲಿದೆ ಎಂದರು.

ಸೆಮಿಫೈನಲ್ ಸಂದರ್ಭ ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ಲಾಲ್ ರಿಮ್ ಸಿಯಾಮಿ ಅವರು ಆಗಮಿಸಿದ ಹಾಕಿ ಕ್ರೀಡೆಯ ಕುರಿತು ಮಾಹಿತಿ ನೀಡಲಿದ್ದಾರೆ. ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹಾಗೂ ಒಲಂಪಿಯನ್ ಮನ್ ಪ್ರೀತ್ ಸಿಂಗ್ ಕೂಡ ಪಂದ್ಯಾವಳಿಯ ಸಂದರ್ಭ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ವಿಶೇಷವಾಗಿ ರಸಪ್ರಶ್ನೆ ಸ್ಪರ್ಧೆ ಮತ್ತು ತಂದ್- ಬೆಂದ್ (ವಧು ವರರ ಅನ್ವೇಷಣೆ) ಕಾರ್ಯಕ್ರಮವನ್ನು ಪಂದ್ಯಾವಳಿ ನಡೆಯುವ ಮೈದಾನದ ಆವರಣದಲ್ಲಿ ಆಯೋಜಿಸಲಾಗುತ್ತಿದೆ. ಏ.26 ರಂದು ಸೈಕ್ಲೋಥಾನ್ ನಗರದಲ್ಲಿ ನಡೆಯಲಿದೆ. ಪ್ರೀ ಕ್ವಾರ್ಟರ್ ನಡೆಯುವ ದಿನದಿಂದ ಅಂತಿಮ ಪಂದ್ಯಾವಳಿ ದಿನದವರೆಗೂ ಡಿಜೆ ಕಾರ್ಯಕ್ರಮ ಮನರಂಜಿಸಲಿದೆ. ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಮುಕ್ತ “ಮಜಾ ರನ್’ ನಡೆಯಲಿದೆ. ಅಂತಿಮ ದಿನದ ಸಮಾರಂಭದ ಸಂದರ್ಭ ಆಕರ್ಷಕ ಸಿಡಿಮದ್ದುಗಳ ಪ್ರದರ್ಶನವಿರುತ್ತದೆ. ಸುಮಾರು 2 ಸಾವಿರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ವಂದನಾ ಟ್ರಸ್ಟ್ ಸಂಸ್ಥೆ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯಗಳ ನಿರ್ವಹಣೆಯನ್ನು ಮಾಡಲಿದೆ ಎಂದರು.

ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಮಾತನಾಡಿ ಕಳೆದ ಬಾರಿಯ ಕುಂಡ್ಯೋಳಂಡ ಹಾಕಿ ಹಬ್ಬದಲ್ಲಿ 360 ತಂಡಗಳು ಪಾಲ್ಗೊಂಡಿದ್ದವು, ಈ ಬಾರಿಯ ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ 10 ತಂಡಗಳು ಹೆಚ್ಚುವರಿಯಾಗಿದ್ದು, 370 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ನೋಂದಣಿಯ ಕೊನೆಯ ದಿನಾಂಕ ಮಾ.18 ಆಗಿದ್ದು, ಮತ್ತಷ್ಟು ತಂಡಗಳು ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಮಾ.28ರಂದು ಉದ್ಘಾಟನೆಯ ಪ್ರದರ್ಶನ ಪಂದ್ಯವಾಗಿ ಕೊಡವ ಹಾಕಿ ಅಕಾಡೆಮಿ- ಘಿI ಹಾಗೂ ಇತ್ತೀಚೆಗೆ ರಾಷ್ಟ್ರೀಯ ಮಟ್ಟದಲ್ಲಿ ವಿಜೇತರಾದ ಕರ್ನಾಟಕ-ಘಿI ತಂಡಗಳ ನಡುವೆ ಸೆಣಸಾಟ ನಡೆಯಲಿದೆ ಎಂದರು.

ಪಂದ್ಯಾವಳಿಯ ನಿರ್ದೇಶಕರಾಗಿ ಬಡ್ಕಡ ದೀನ ಪೂವಯ್ಯ ಹಾಗೂ ಸಂಯೋಜಕರಾಗಿ ಮುದ್ದಂಡ ರಾಯ್ ತಮ್ಮಯ್ಯ ಕಾರ್ಯನಿರ್ವಹಿಸಲಿದ್ದಾರೆ. ಪಂದ್ಯಾವಳಿಯಲ್ಲಿ ಮುಖ್ಯ ವೀಕ್ಷಕ ವಿವರಣೆಗಾರರಾಗಿ ಚೆಪ್ಪುಡಿರ ಕಾರ್ಯಪ್ಪ, ಇವರಿಗೆ ಸಹಾಯಕರಾಗಿ ಮಾಳೇಟಿರ ಶ್ರೀನಿವಾಸ್ ಇರಲಿದ್ದಾರೆ. ಟೈಸ್ ಪ್ರಕ್ರಿಯೆಯನ್ನು ಕೆಚ್ಚೆಟ್ಟಿರ ಪ್ರಸನ್ನ ನಿರ್ವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಕಳೆದ ಹಾಕಿ ಉತ್ಸವದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಿದ ಕುಂಡ್ಯೋಳಂಡ ಒಕ್ಕದವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

ಹಾಕಿ ಅಕಾಡೆಮಿಯ ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಮಾತನಾಡಿ ಕೊಡವ ಹಾಕಿ ಅಕಾಡೆಮಿ ವತಿಯಿಂದ ಮಾರ್ಚ್ 19 ಮತ್ತು 20 ರಂದು ವಿರಾಜಪೇಟೆಯ ಕಾವೇರಿ ಕಾಲೇಜ್ ನಲ್ಲಿ ಹಾಕಿ ತೀರ್ಪುಗಾರರ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಜಿಲ್ಲೆಯ ಆಸಕ್ತ ಯುವ ಸಮೂಹ ಇದರಲ್ಲಿ ಪಾಲ್ಗೊಂಡು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಮಿನಿ ಒಲಂಪಿಕ್ಸ್ ಮಾದರಿಯಲ್ಲಿ ಈ ಬಾರಿಯ ಮುದ್ದಂಡ ಕಪ್ ಹಾಕಿ ಉತ್ಸವ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಕಿ ಅಕಾಡೆಮಿಯ ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಮಾತನಾಡಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ರಾಜ್ಯಸಭಾ ಸದಸ್ಯ ಅಜೆಯ್ ಮಾಕನ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.

ಮುದ್ದಂಡ ಒಕ್ಕದ ಕಾರ್ಯದರ್ಶಿ ಮುದ್ದಂಡ ರಾಯ್ ತಮ್ಮಯ್ಯ ಮಾತನಾಡಿ, ಮುಕ್ತ ಶೂಟಿಂಗ್ ಸ್ಪರ್ಧೆಯ ವಿವರ ನೀಡಿದರು. ಏ.20 ರಂದು ಮೈದಾನ ಎರಡರಲ್ಲಿ ಶೂಟಿಂಗ್ ಸ್ಪರ್ಧೆ ಮೂರು ವಿಭಾಗಗಳಲ್ಲಿ ನಡೆಯಲಿದೆ. 50 ಮೀಟರ್ ನಿಗದಿತ ಗುರಿಯ .2 ಶೂಟಿಂಗ್ ಸ್ಪರ್ಧೆ, 30 ಮೀಟರ್ ಅಂತರದ ಟುವೆಲ್ತ್ ಬೋರ್ ಬಂದೂಕಿನಿಂದ ಗುರಿ ಹಿಡಿಯುವ ಹಾಗೂ 15 ಮೀಟರ್ ದೂರದ ಮೊಟ್ಟೆಗೆ ಗುಂಡಿಕ್ಕುವ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಕೂಡ ನಡೆಯಲಿದೆ ಎಂದು ತಿಳಿಸಿದರು.

ಮುದ್ದಂಡ ಒಕ್ಕದ ಅಧ್ಯಕ್ಷ ಮುದ್ದಂಡ ಬಿ.ದೇವಯ್ಯ ಮಾತನಾಡಿ, ಮಾ.28ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಫೀ.ಮಾ.ಕೆ.ಎಂ.ಕಾರ್ಯಪ್ಪ ಮೈದಾನದವರೆಗೆ ನಡೆಯುವ ಬೃಹತ್ ಮೆರವಣಿಗೆಯಲ್ಲಿ ಸರ್ವರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು.