ಮುದ್ದೇನಹಳ್ಳಿ- ದೊಡ್ಡಬಳ್ಳಾಪುರ ರಸ್ತೆ ದುಸ್ಥಿತಿ

| Published : Jun 25 2025, 01:17 AM IST

ಮುದ್ದೇನಹಳ್ಳಿ- ದೊಡ್ಡಬಳ್ಳಾಪುರ ರಸ್ತೆ ದುಸ್ಥಿತಿ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಐದಾರು ವರ್ಷಗಳಿಂದ ಎಚ್‌ಎನ್ ವ್ಯಾಲಿ ನೀರು ಕಂದವಾರ ಕೆರೆಗೆ ಹರಿದಿದ್ದು ಕೆರೆ ಕೋಡಿ ಹೋಗಿ, ಕೋಡಿಯ ನೀರು ರಾಜ ಕಾಲವೆ ಮೂಲಕ ಅಮಾನಿ ಗೋಪಾಲ ಕೃಷ್ಣ ಕೆರೆಗೆ ಹರಿದು ಹೋಗುತ್ತದೆ. ಆದರೆ ಕೆರೆ ತುಂಬಾ ನೀರು ಸದಾ ಇರುವುದರಿಂದ ಕೆರೆಯ ಕಟ್ಟೆಯಿಂದ ಜಿನುಗುವ ನೀರು ರಸ್ತೆಯ ಮೇಲೆ ಹರಿದು ರಸ್ತೆ ಸಂಪೂರ್ಣ ಹಾಳಾಗಿ ಹಳ್ಳ ಕೊಳ್ಳಗಳಾಗಿವೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರದ ಕಂದವಾರ ಕೆರೆಯ ಏರಿಯ ಪಕ್ಕದಲ್ಲಿನ ಕಂದವಾರ ಬಾಗಿಲಿನಿಂದ ಕಂದವಾರ ವಾರ್ಡ್‌, ವಿಶ್ವ ವಿಖ್ಯಾತ ಎಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ ಜನ್ಮಸ್ಥಳ ಮುದ್ದೇನಹಳ್ಳಿ ಮತ್ತು ದೊಡ್ಡಬಳ್ಳಾಪುರಕ್ಕೆ ಸಂಪರ್ಕ ಬೆಸೆಯುವ ರಸ್ತೆ ಸದಾ ಜಲಾವೃತವಾಗಿ ಹಳ್ಳಕೊಳ್ಳಗಳಿಂದ ಕೂಡಿದೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರಿಗೆ ನಿತ್ಯ ನರಕವಾಗಿ ಪರಿಣಮಿಸಿದೆ.

ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಗುಂಡಿಗಳು. ಅವುಗಳಲ್ಲಿ ಸಂಗ್ರಹವಾಗಿರುವ ಕೆಮ್ಮಣ್ಣಿನ ನೀರು. ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿರುವ ಜಲ್ಲಿಕಲ್ಲು. ರಸ್ತೆ ಮಧ್ಯೆಯೇ ಕೆಸರಿನ ರಾಡಿ ಹರಡಿಕೊಂಡಿದೆ.

ಎಚ್‌ಎನ್‌ ವ್ಯಾಲಿ ನೀರು:

ಕಳೆದ ಐದಾರು ವರ್ಷಗಳಿಂದ ಎಚ್‌ಎನ್ ವ್ಯಾಲಿ ನೀರು ಕಂದವಾರ ಕೆರೆಗೆ ಹರಿದಿದ್ದು ಕೆರೆ ಕೋಡಿ ಹೋಗಿ, ಕೋಡಿಯ ನೀರು ರಾಜ ಕಾಲವೆ ಮೂಲಕ ಅಮಾನಿ ಗೋಪಾಲ ಕೃಷ್ಣ ಕೆರೆಗೆ ಹರಿದು ಹೋಗುತ್ತದೆ. ಆದರೆ ಕೆರೆ ತುಂಬಾ ನೀರು ಸದಾ ಇರುವುದರಿಂದ ಕೆರೆಯ ಕಟ್ಟೆಯಿಂದ ಜಿನುಗುವ ನೀರು ರಸ್ತೆಯ ಮೇಲೆ ಹರಿದು ರಸ್ತೆ ಸಂಪೂರ್ಣ ಹಾಳಾಗಿ ಹಳ್ಳ ಕೊಳ್ಳಗಳಾಗಿವೆ.

ಕಂದವಾರ ಬಾಗಿಲಿನಿಂದ ಕಂದವಾರದ ಕಡೆಗೆ ಸಾಗುವ ಮಾರ್ಗದಲ್ಲಿ ಕೋಡಿಯ ಬಳಿಯೇ ಎತೇಚ್ಚವಾಗಿ ನೀರು ನಿಂತು ರಸ್ತೆ ಕುಂಟೆಯಂತಾಗಿ ನೀರು ತುಂಬಿಕೊಂಡಿದೆ. ಈ ಮಾರ್ಗದಲ್ಲಿ ಚಿಕ್ಕಬಳ್ಳಾಪುರದಿಂದ ನಂದಿ, ದೊಡ್ಡಬಳ್ಳಾಪುರ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ದ್ವಿಚಕ್ರವಾಹನ ಸವಾರರ ಪಾಡಂತೂ ಹೇಳ ತೀರದಾಗಿದ್ದು ಪ್ರತಿ ನಿತ್ಯ ಕನಿಷ್ಟ ಇಬ್ಬರು ಮೂವರಾದರು ವಾಹನದಿಂದ ಬಿದ್ದು ಗಾಯಗಳನ್ನು ಮಾಡಿಕೊಳ್ಳುವುದು ಸಾಮಾನ್ಯವಾಗಿದೆ,

ನಿರಂತರ ವಾಹನ ಸಂಚಾರ

ಚಿಕ್ಕಬಳ್ಳಾಪುರದಿಂದ ಕಂದವಾರ, ಸರ್ ಎಂ ವಿಶ್ವೇಶ್ವರಯ್ಯ ಜನ್ಮಸ್ಥಳ ಮುದ್ದೇನಹಳ್ಳಿ, ಸುಲ್ತಾನ ಪೇಟೆ, ನಂದಿ ಬೆಟ್ಟದ ಕ್ರಾಸ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರಹಳ್ಳಿ ದೊಡ್ಡಬಳ್ಳಾಪುರ ಸೇರಿದಂತೆ ಇತರೆಡೆ ಹೋಗುವವರು ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಈ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಬಿಡುವಿಲ್ಲದೆ ಓಡಾಡುತ್ತವೆ. ಸುಮಾರು 4 ಕಿ.ಮೀ.ವರೆಗೂ ಅಧಿಕ ರಸ್ತೆ ಹಾಳಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳು ಬೆಳೆದುಕೊಂಡಿವೆ. ಹೀಗಿದ್ದರೂ ರಸ್ತೆ ದುರಸ್ತಿಗೊಳಿಸುವ ಕೆಲಸ ಆಗಿಲ್ಲ.

ಈಡೇರದ ಶಾಸಕರ ಭರವಸೆ

ಶಾಸಕರು ರಸ್ತೆಗೆ ಕಾಯಕಲ್ಪ ನೀಡಲು ಎಂಟು ಕೋಟಿ ಹಣ ಮಂಜೂರು ಮಾಡಿಸಿರುವುದಾಗಿ ಜನವರಿಯಲ್ಲಿ ಭೂಮಿ ಪೂಜೆ ಮಾಡುವುದಾಗಿ ತಿಳಿಸಿ ಆರು ತಿಂಗಳಾದರೂ ರಸ್ತೆಗೆ ಅಲ್ಲಲ್ಲಿ ಜಲ್ಲಿ ಸುರಿದಿರುವುದು ಬಿಟ್ಟರೆ ಎನೂ ಆಗಿಲ್ಲ. ಜಲ್ಲಿ ಕಲ್ಲುಗಳಿರುವುದರಿಂದ ಆಗಾಗ ದ್ವಿಚಕ್ರ ಸವಾರರು ಬಿದ್ದು ಆಸ್ಪತ್ರೆ ಸೇರಿದ್ದು ಬಿಟ್ಟರೆ ರಸ್ತೆ ಮಾತ್ರ ಹಾಗೇ ಇದೆ, ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.