ದೈವಋಣ ತೀರಿಸಿದ ಮುದ್ದೇನಹಳ್ಳಿ ನಂಜಯ್ಯ: ಸಿದ್ಧಲಿಂಗ ಸ್ವಾಮೀಜಿ

| Published : Apr 29 2024, 01:34 AM IST / Updated: Apr 29 2024, 01:35 AM IST

ದೈವಋಣ ತೀರಿಸಿದ ಮುದ್ದೇನಹಳ್ಳಿ ನಂಜಯ್ಯ: ಸಿದ್ಧಲಿಂಗ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮುದ್ದೇನಹಳ್ಳಿ ನಂಜಯ್ಯನವರು ಕಾವ್ಯಮಾರ್ಗವನ್ನು ಆರಿಸಿಕೊಂಡು ``ಶ್ರೀ ಶಿವಕುಮಾರ ಚರಿತ’’ ಬರೆದು ಗುರು ಋಣವನ್ನೂ``ಯೋಗಿಗಳಯೋಗಿ ಶಿವಯೋಗಿ ಸಿದ್ಧರಾಮ’’ ಕೃತಿಯನ್ನು ಬರೆದು ದೈವಋಣ ತೀರಿಸಿದ್ದಾರೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಮುದ್ದೇನಹಳ್ಳಿ ನಂಜಯ್ಯನವರು ಕಾವ್ಯಮಾರ್ಗವನ್ನು ಆರಿಸಿಕೊಂಡು ``ಶ್ರೀ ಶಿವಕುಮಾರ ಚರಿತ’’ ಬರೆದು ಗುರು ಋಣವನ್ನೂ``ಯೋಗಿಗಳಯೋಗಿ ಶಿವಯೋಗಿ ಸಿದ್ಧರಾಮ’’ ಕೃತಿಯನ್ನು ಬರೆದು ದೈವಋಣ ತೀರಿಸಿದ್ದಾರೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.ನಗರದ ಕನ್ನಡ ಭವನದಲ್ಲಿ ಮುದ್ದೇನಹಳ್ಳಿ ನಂಜಯ್ಯ ವಿರಚಿತ `ನಿಜಪದವನೆಯ್ದಿದ ಮಹಾದೇವಿಯಕ್ಕ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ವೀರವೈರಾಗ್ಯ ನಿಧಿ ಮಹಾದೇವಿಯಕ್ಕನ ಕುರಿತು ``ನಿಜಪದವನೆಯ್ದಿದ ಮಹಾದೇವಿಯಕ್ಕ’’ ಕೃತಿ ರಚಿಸಿ ಪಾವನರಾಗಿದ್ದಾರೆ. ಇವರ ವಾರ್ಧಕ ಷಟ್ಪದಿ ಒಲಿದು ಬಂದಿರುವುದೊಂದು ವಿಶೇಷ. ನಂಜಯ್ಯನವರಿಂದ ಕೃತಿ ರಚನೆ ನಿರಂತರವಾಗಿ ಸಾಗಲೆಂದು ಹಾರೈಸಿದರು.ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಎಸ್.ಎಂ. ಹಿರೇಮಠ ಮಾತನಾಡಿ, ವಚನ ಸಾಹಿತ್ಯದ ಆಳವಾದ ಅಧ್ಯಯನ ಸಾಮರ್ಥ್ಯವುಳ್ಳ `ಮುಬನಂ’ರವರು ಕಾವ್ಯರಚನೆಯಲ್ಲಿ ಛಂದಸ್ಸಿಗೆ ಕುಂದುತಾರದೆ ಅಕ್ಕನ ಸಾಧನಾ ಪಥವನ್ನು ಕಟ್ಟಿಕೊಟ್ಟಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಮುದ್ದೇನಹಳ್ಳಿ ನಂಜಯ್ಯನವರು ವಾರ್ಧಕ ಷಟ್ಪದಿಯಲ್ಲಿ ಸರಳ-ಸುಲಭ-ಸುಂದರವಾಗಿ ರಚಿಸದಿದ್ದಕ್ಕಾಗಿ ಮಹಾಕವಿಗಳಿಗೆ ಅಭಿನಂದನೆಗಳು. ಕಾವ್ಯರಚನೆಯಲ್ಲಿ ಅಕ್ಕನ ವಚನಗಳನ್ನು ಜಾಣ್ಮೆಯಿಂದ ಬಳಕೆ ಮಾಡಿಕೊಂಡಿರುವುದು ಇವರ ಕಲಾನೈಪುಣ್ಯಕ್ಕೆ ಸಾಕ್ಷಿಯಾಗಿದೆ ಎಂದರು.

ಪ್ರೊ. ಕೋ.ರಂ. ಬಸವರಾಜು ಮಾತನಾಡಿ ``ನಿಜಪದವನೆಯ್ದಿದ ಮಹಾದೇವಿಯಕ್ಕ’’ ಮೂರನೆಯ ಷಟ್ಪದಿ ಕಾವ್ಯ ಕೃತಿಯಾಗಿದೆ. ಇಂತಪ್ಪ ಮಹಾದೇವಿಯಕ್ಕಗಳ ವೈರಾಗ್ಯ ಕವಿಪ್ರತಿಭೆಯಿಂದ ಹೊಳೆದ ಚೆಲುವಾಂತ ಶಬ್ದಾರ್ಥಗಳಲ್ಲಿ ಸುಂದರವಾಗಿ ಮೂರ್ತಗೊಂಡಿದೆ. ಕೃತಿಯಲ್ಲಿನ ಶಬ್ದ ಸೌಂದರ್ಯ ಪ್ರತಿಮೆ ರೂಪಕಗಳನ್ನು ಕೂಡಿಕೊಂಡು ಸಹೃದಯರಿಗೆ ಕಾವ್ಯಾನಂದವನ್ನುಂಟು ಮಾಡಿದೆ ಎಂದು ಹೇಳಿದರು.

ಮುದ್ದೇನಹಳ್ಳಿ ನಂಜಯ್ಯನವರು ವಿವಿಧ ಪುಷ್ಪಗಳಿಂದ ಮಕರಂದವನ್ನು ಸಂಗ್ರಹಿಸಿ ಜೇನುತುಪ್ಪಕೊಡುವ ಜೇನ್‌ನೊಣದಂತೆ ಅಂತಃಕರಣದಿಂದ ಸೂಳ್ನುಡಿಯ ಕೇಳುತ್ತಲೋದುತ್ತಲಧ್ಯಾಪನಾಬಲದಿಂದ ಕೃತಿ ರಚಿಸಲಾಗಿದೆ. ಮಹಾದೇವಿಯಕ್ಕನ ಕಥನ ಕಾವ್ಯ ರಚನೆ ಎನಗೊಂದು ವಿಸ್ಮಯವೇಸರಿ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ, ಸರಳ ಗದ್ಯದಲ್ಲಿಯೇ ಕೃತಿ ರಚಿಸುವುದು ದುಸ್ತರವಾದ ಇಂದಿನ ಸಂದರ್ಭದಲ್ಲಿ ಗುರುಗಳಾದ ಎಂ.ಎನ್.ರವರು ವಾರ್ಧಕ ಷಟ್ಪದಿಯಲ್ಲಿ ಗ್ರಂಥ ರಚಿಸಿರುವುದು ಸ್ತುತ್ಯಾರ್ಹ ಹಾಗೂ ಶ್ಲಾಘನೀಯ. ಹೀಗೆಯೇ ಇನ್ನೂ ಹೆಚ್ಚು ಕೃತಿಗಳು ಮೂಡಿಬರಲೆಂದು ಆಶಿಸುತ್ತೇನೆ ಎಂದು ಹೇಳಿದರು.ನಿಜಪದವನೆಯ್ದಿದ ಮಹಾದೇವಿಯಕ್ಕ ಕೃತಿಯ ಗಮಕಸೌರಭದಲ್ಲಿ ಗಮಕಿ ಸಾವಿತ್ರಿ ಸತ್ಯೇಂದ್ರ ಸುಶ್ರಾವ್ಯವಾಗಿ ವಾಚನ ಮಾಡಿದರು. ಗಮಕಿ ಕಲಾಶ್ರೀ ವಿದ್ವಾನ್ ಎಂ.ಜಿ. ಸಿದ್ಧರಾಮಯ್ಯ ಕೇಳುಗರ ಮನದುಂಬುವಂತೆ ವ್ಯಾಖ್ಯಾನಿಸಿದರು. ಒಟ್ಟಾರೆ ವಾಚಕರು ಮತ್ತು ವ್ಯಾಖ್ಯಾನಕಾರರು ಶ್ರೋತೃಗಳ ಮನಗೆದ್ದುದು ವಿಶೇವಾಗಿದ್ದಿತು. ಪ್ರಾಂಶುಪಾಲೆ ಸೌಮ್ಯಶ್ರೀ ನಿರೂಪಿಸಿದರು. ತುಮಕೂರು ತಾಲೂಕು ಕ.ಸಾ.ಪ ಅಧ್ಯಕ್ಷರು ಚಿಕ್ಕಬೆಳ್ಳಾವಿ ಶಿವಕುಮಾರ್ ಸ್ವಾಗತಿಸಿದರು. ಹಾಸ್ಯಚಕ್ರವರ್ತಿ ಮಿಮಿಕ್ರಿ ಈಶ್ವರಯ್ಯ ವಂದಿಸಿದರು.