ಸಾರಾಂಶ
ಆಟೋ, ಕಾರು ವಾಹನಗಳು ಹರಸಾಹಸ ಪಟ್ಟು ಸಾಗಿದರೂ ವಾಹನ ಪೂರ್ತಿ ಕೆಸರು ಆವರಿಸುತ್ತಿದೆ. ಶಾಲಾ ಮಕ್ಕಳು ವಯೋವೃದ್ಧರು ಕೆಸರಿನ ರಾಡಿ ಮೈಗೆ ಎರಚುವ ಭಯದಲ್ಲೇ ಹರಸಾಹಸ ಪಟ್ಟು ಈ ರಸ್ತೆಯಲ್ಲಿ ಸಾಗಬೇಕಿದೆ.
ಹೊನ್ನಾವರ: ಪಟ್ಟಣದ ಫಾರೆಸ್ಟ್ ಕಾಲನಿಯ ಸಮೀಪದ ರಸ್ತೆ ಅವ್ಯವಸ್ಥೆಯಿಂದ ಸಂಚಾರ ದುಸ್ತರವಾಗಿದ್ದು, ಇದರಿಂದ ಸಾರ್ವಜನಿಕರು ಪರದಾಡುವಂತಾಗಿದ್ದು, ಪಟ್ಟಣ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರಭಾತನಗರದ ವಿವಿಧಡೆ ರಸ್ತೆ ಅವ್ಯವಸ್ಥೆ ಕಳೆದ ನಾಲ್ಕೈದು ವರ್ಷದಿಂದ ಅನುಭವಿಸುತ್ತಿದ್ದು, ಈ ಬಾರಿಯ ಮಳೆಗಾಲದ ಆರಂಭದಲ್ಲಿ ಈ ಸಂಕಷ್ಟ ಮತ್ತೊಮ್ಮೆ ಕಾಡುತ್ತಿದೆ. ಹೆದ್ದಾರಿಗೆ ಹೊಂದಿಕೊಂಡು ಕಾಂಕ್ರಿಟ್ ರಸ್ತೆ ಇದ್ದು, ನಂತರ ರಸ್ತೆಯ ಮುಕ್ತಾಯಕ್ಕೆ ಬೃಹತ್ ಹೊಂಡದ ರಸ್ತೆಯಾಗಿದೆ. ಹಲವು ಬಾರಿ ರಸ್ತೆ ಸರಿಪಡಿಸುವಂತೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಮಳೆಗಾಲ ಆರಂಭವಾಗಿದ್ದು, ಹೊಂಡದಲ್ಲಿ ನಿಂತ ಮಳೆ ನೀರನ್ನು ಹೋಗಲಾಡಿಸಲು ಪಟ್ಟಣ ಪಂಚಾಯಿತಿ ಕಡೆಯಿಂದ ಮಣ್ಣು ತಂದು ಸುರಿಯಲಾಗಿದೆ. ಇದೀಗ ಇದು ಕೆಸರುಗದ್ದೆಯಂತಾಗಿದ್ದು, ರಸ್ತೆ ದಾಟಲು ಸಾಧ್ಯವಾಗುತ್ತಿಲ್ಲ. ದ್ವಿಚಕ್ರ ವಾಹನ ಈ ಹೊಂಡಗುಂಡಿಯ ರಸ್ತೆಯ ಮೇಲೆ ಹೋಗಿ ಸವಾರ ವಾಹನ ನಿಯಂತ್ರಣ ಕಳೆದುಕೊಂಡು ಅಪಘಾತ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.ಆಟೋ, ಕಾರು ವಾಹನಗಳು ಹರಸಾಹಸ ಪಟ್ಟು ಸಾಗಿದರೂ ವಾಹನ ಪೂರ್ತಿ ಕೆಸರು ಆವರಿಸುತ್ತಿದೆ. ಶಾಲಾ ಮಕ್ಕಳು ವಯೋವೃದ್ಧರು ಕೆಸರಿನ ರಾಡಿ ಮೈಗೆ ಎರಚುವ ಭಯದಲ್ಲೇ ಹರಸಾಹಸ ಪಟ್ಟು ಈ ರಸ್ತೆಯಲ್ಲಿ ಸಾಗಬೇಕಿದೆ.
ಮಳೆಗಾಲದ ಪೂರ್ವದಲ್ಲಿ ಮಣ್ಣು ತಂದು ಹಾಕಿದ್ದರೆ, ಗಟ್ಟಿಯಾಗಿ ಈ ರೀತಿ ಸಮಸ್ಯೆ ಸಂಭವಿಸುತ್ತಿರಲಿಲ್ಲ. ಮಳೆಗಾಲವಾಗಿರುವುದರಿಂದ ಸಿಮೆಂಟ್ ಮಿಶ್ರಿತ ಕಾಂಕ್ರೀಟ್ ತಂದು ಈ ಸ್ಥಳದಲ್ಲಿ ಹಾಕಿದ್ದರೂ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಸಾರ್ವಜನಿಕರ ಬಗ್ಗೆ ಕಾಳಜಿ ಇಲ್ಲದೇ ಈ ಕೆಲಸ ಮಾಡಿದ್ದಾರೆ. ಇದನ್ನು ಪ್ರಶ್ನೆ ಮಾಡಲು ಪಪಂ ಸದಸ್ಯರಿಂದಲೂ ಆಗುತ್ತಿಲ್ಲ. ಸದಸ್ಯರು ಇದ್ದಾರೊ, ಇಲ್ಲವೋ ಎಂದು ತಿಳಿಯುತ್ತಿಲ್ಲ.ಪಟ್ಟಣದ ವಿವಿಧೆಡೆ ಹೊಂಡ ಮುಚ್ಚಲು ಮಣ್ಣನ್ನು ಬಳಸದೆ ಕಾಂಕ್ರೀಟ್ ವಸ್ತು ಬಳಸಬೇಕು. ಫಾರೆಸ್ಟ್ ಕಾಲನಿಯ ಸಮಸ್ಯೆ ಐದು ದಿನದಲ್ಲಿ ಬಗೆಹರಿಸದೇ ಹೋದಲ್ಲಿ ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕುತ್ತೇವೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗುವುದು. ಮುಂದಿನ ದಿನದಲ್ಲಿ ಸಮಸ್ಯೆ ಬಗೆಹರಿಯದೇ ಹೋದಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳ ಮನೆ ಹಾಗೂ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಈ ಭಾಗದ ನಿವಾಸಿಗಳು ಎಚ್ಚರಿಸಿದ್ದಾರೆ.