ಪಟ್ಟಣದ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಪಟ್ಟಣದ ಸಾರ್ವಜನಿಕ ಆಚರಿಸುವ ದಸರಾ ಹಬ್ಬದ ಪೂರ್ವಭಾವಿ ಸಭೆ ಗುರುವಾರ ಸಂಜೆ ಜರುಗಿತು. ಹಿರಿಯರಾದ ಅಶೋಕಗೌಡ ಪಾಟೀಲ್ ಮಾತನಾಡಿ, ದಸರಾ ಹಬ್ಬವನ್ನು ಈ ಬಾರಿ 4 ದಿನ ಆಚರಿಸಲು ತೀರ್ಮಾನಿಸಲಾಗಿದೆ. ಪಟ್ಟಣದ ಸಮಾಜ ಭಾಂದವರು ತನು- ಮನ- ಧನ ದಿಂದ ಸಹಕರಿಸಬೇಕು. ಹಬ್ಬದಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿ ಶೋಭೆ ತರಬೇಕೆಂದು ಹೇಳಿದರು.

ಕನ್ನಡಪ್ರಭ ವಾರ್ತೆ ಮುದಗಲ್

ಮಹಾಂತೇಶ ಪಾಟೀಲ್, ಮಲ್ಲಿಕಾರ್ಜುನ ಗೌಡೂರು ಮಾತನಾಡಿದರು. ಸಭೆಯಲ್ಲಿ ದಸರಾ ಹಬ್ಬವನ್ನು ಸಡಗರ, ಸಂಭ್ರಮ ಹಾಗೂ ಶಾಂತಿಯುತವಾಗಿ ಆಚರಿಸಬೇಕು. ಕೋಟೆಗೆ ದೀಪಾಲಂಕಾರ ಮಾಡಬೇಕು. ವಿವಿಧ ಕಲಾತಂಡಗಳ ಸಾಂಸ್ಕೃತಿಕ ಕಾರ್ಯಕ್ರಮ, ಸ್ಥಳೀಯ ಕಲಾವಿದರಿಗೆ ಆದ್ಯತೆ, ಕೊನೆಯ ದಿನ ಮೆರವಣಿಗೆ ಕಾರ್ಯಕ್ರಮ ಸಿದ್ಧತೆ ನಡೆಯಬೇಕು ಎಂದರು.

ಕಾರ್ಯಕ್ರಮಗಳಿಗೆ ಆರ್ಥಿಕ ಸಂಪನ್ಮೂಲ ಸಂಗ್ರಹ, ವಿವಿಧ ಸಮಿತಿಗಳ ರಚನೆ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಹಬ್ಬದ ಅಂಗವಾಗಿ ಹಮ್ಮಿಕೊಳ್ಳಬೇಕಾದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆ, ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳು ಹಾಗೂ ಸ್ವಚ್ಛತೆ ಮತ್ತು ಸುರಕ್ಷತಾ ವ್ಯವಸ್ಥೆಗಳ ಕುರಿತು ಮುಖಂಡರು ಹಾಗೂ ಸಾರ್ವಜನಿಕರು ಸಮಾಲೋಚನೆ ನಡೆಸಿದರು.

ದಸರಾ ಹಬ್ಬದ ಕಾರ್ಯಕ್ರಮಗಳ ಆಚರಣೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಬ್ಬವನ್ನು ಯಶಸ್ವಿಗೊಳಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ದೇವಸ್ಥಾನದ ಪ್ರಮುಖರು, ಸ್ಥಳೀಯ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.