ಸಾರಾಂಶ
ಮುದಗಲ್‌ನ ಮುಖ್ಯ ರಸ್ತೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ವಾಲ್ ದುರಸ್ತಿಗೆ ತೆಗೆದ ಗುಂಡಿ ಹಾಗೆಯೇ ಬಿಟ್ಟಿರುವುದು.
ಕನ್ನಡಪ್ರಭ ವಾರ್ತೆ ಮುದಗಲ್
ಪಟ್ಟಣದ ಕೋಶ ಭಾಗದಲ್ಲಿರುವ ಕುಡಿಯುವ ನೀರಿನ ವಾಲ್‌ಗಳು ದುರಸ್ತಿಗೊಳಿಸದೇ ಇದ್ದುದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ ಎಂದು ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ.ಮುದಗಲ್‌ನ ಗಣೇಶ ಕೆಫೆ ಮುಂಭಾಗದ ಮುಖ್ಯ ರಸ್ತೆಗಳಲ್ಲಿರುವ ವಾಲ್‌ಗಳ ದುರಸ್ತಿಗಾಗಿ ಕಳೆದ ಒಂದೂವರೆ ತಿಂಗಳಿಂದ ಗುಂಡಿ ತೋಡಿ ಹಾಗೆಯೇ ಬಿಟ್ಟಿದ್ದಾರೆ. ಇತ್ತೀಚಿಗೆ ಪುರಸಭೆ ಸಾಮಾನ್ಯ ಸಭೆಯಲ್ಲಿಯೂ ಈ ಬಗ್ಗೆ ಸರ್ವ ಸದಸ್ಯರು ಪುರಸಭೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರೂ ಕೂಡ ಎಚ್ಚೆತ್ತುಕೊಳ್ಳದ ಪುರಸಭೆ ಆಡಳಿತ ಜಾಣ ಕುರುಡುತನ ಪ್ರದರ್ಶಿಸುತ್ತಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಖದೀರ್ ಪಾನವಾಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
10 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿರುವುದು ಒಂದೆಡೆಯಾದರೆ ವಾಲ್ ದುರಸ್ತಿಗಾಗಿ ಪೈಪ್‌ಲೈನ್ ಸೋರಿಕೆಯಾಗಿ ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತಿರುವುದು ಮತ್ತೊಂದೆಡೆಯಾಗಿದೆ. ಈಗಾಗಲೇ ಹಲವಾರು ಬಾರಿ ಮನವಿ ಮಾಡಿದರೂ ಕೂಡ ಪುರಸಭೆಯವರು ಕ್ಯಾರೇ ಎನ್ನದೇ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಶಾಲೆಗೆ, ಹಾಗೂ ಆಸ್ಪತ್ರೆಗೆ ತೆರಳುವ ಮುಖ್ಯ ರಸ್ತೆ ಇದಾಗಿದ್ದು, ಕೂಡಲೇ ಪುರಸಭೆ ಆಡಳಿತ ಮಂಡಳಿಯವರು ಸೂಕ್ತ ಕ್ರಮ ಕೈಗೊಂಡು ಸಮಸ್ಯೆಗೆ ಸ್ಪಂದಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.;Resize=(128,128))
;Resize=(128,128))