ಸಾರಾಂಶ
ನದಿ ಪಾತ್ರದ ತಾಲೂಕಿನ 12 ಗ್ರಾಮಗಳು ಮತ್ತು ಬ್ರಿಡ್ಜ್ ಕಂ ಬ್ಯಾರೇಜ್‌ಗಳು ಸಂಪೂರ್ಣ ಮುಳುಗಡೆಯಾಗಲಿವೆ.
ಕನ್ನಡಪ್ರಭ ವಾರ್ತೆ ಮುಧೋಳ
ಮಹಾರಾಷ್ಟ್ರ ಹಾಗೂ ಬೆಳಗಾವಿ ಸೇರಿದಂತೆ ವಿವಿಧೆಡೆ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಲ್ಲಿ ಹರಿದಿರುವ ಘಟಪ್ರಭಾ ನದಿಯು ಈಗ ಮೈದುಂಬಿ ಹರಿಯುತ್ತಿದೆ. ಅಲ್ಲದೇ ಜಲಾಶಯದಿಂದ ನದಿಗೆ ಬಿಟ್ಟಿರುವ ನೀರಿನಿಂದಾಗಿ ಪ್ರವಾಹದ ಭೀತಿ ಎದುರಾಗಿದೆ.ಹಿಡಕಲ್ ಜಲಾಶಯವು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ಘಟಪ್ರಭಾ ನದಿಯಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಇಲ್ಲಿನ ಢವಳೇಶ್ವರ, ಮಿರ್ಜಿ, ಚನ್ನಾಳ, ನಾಗರಾಳ, ಜಾಲಿಬೇರ, ಮುಧೋಳ, ಜೀರಗಾಳ, ಇಂಗಳಗಿ, ಕೆ.ಡಿ. ಜಂಬಗಿ, ಕಸಬಾಜಂಬಗಿ, ತಿಮ್ಮಾಪೂರ, ಮಾಚಕನೂರ, ಬಿ.ಕೆ.ಆಲಗುಂಡಿ ಬ್ಯಾರೇಜ್‌ಗಳು ಬಹುತೇಕ ಮುಳುಗಡೆಯಾಗಿವೆ.
ಮುಧೋಳ-ಯಾದವಾಡ ಸೇತುವೆ ಮೇಲೆ ನೀರು ಹರಿಯಲು ಇನ್ನೂ 6 ಅಡಿ ಬಾಕಿ ಇದೆ. ನದಿಗೆ ಇನ್ನೂ ಹೆಚ್ಚುವರಿ ನೀರು ಬಂದಿದ್ದಾದರೆ ಯಾವುದೇ ಸಮಯದಲ್ಲಿ ಮುಧೋಳ-ಯಾದವಾಡ ಸೇತುವೆ ಮುಳುಗಿ ಸಂಚಾರ ಕಡಿತಗೊಳ್ಳಲಿದೆ. ನದಿ ಪಾತ್ರದ ತಾಲೂಕಿನ 12 ಗ್ರಾಮಗಳು ಮತ್ತು ಬ್ರಿಡ್ಜ್ ಕಂ ಬ್ಯಾರೇಜ್‌ಗಳು ಸಂಪೂರ್ಣ ಮುಳುಗಡೆಯಾಗಲಿವೆ. ಇದರಿಂದಾಗಿ ಒಂದು ಗ್ರಾಮಗಳಿಂದ ಮತ್ತೊಂದು ಗ್ರಾಮಗಳಿಗೆ ಸಂಪರ್ಕ ಕಡಿತಗೊಳ್ಳಲಿದೆ. ತಾಲೂಕಿನ ಮಾಚಕನೂರ ಗ್ರಾಮದ ಐತಿಹಾಸಿಕ ಹೊಳೆ ಬಸವೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ. ಪ್ರವಾಹ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳಿಗೆ ಕಟ್ಟೆಚ್ಚರ ಘೋಷಿಸಲಾಗಿದೆ.ಜಿಲ್ಲಾಧಿಕಾರಿ ಸಂಗಪ್ಪ ಭೇಟಿ:
ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಬುಧವಾರ ಮಧ್ಯಾಹ್ನ ಮುಧೋಳ-ಯಾದವಾಡ ಸೇತುವೆಗೆ ಭೇಟಿ ನೀಡಿ, ನದಿ ಪ್ರವಾಹದ ಪರಿಸ್ಥಿತಿಯನ್ನು ಅವಲೋಕಿಸಿದರು. ನಂತರ ಮಿರ್ಜಿ ಗ್ರಾಮಕ್ಕೆ ತೆರಳಿ, ಯಾವುದೇ ಸಂದರ್ಭದಲ್ಲಿ ಜನರು ಪ್ರವಾಹ ಎದುರಿಸಬೇಕಾಗುತ್ತದೆ. ಕಾರಣ ನದಿ ಪಾತ್ರದ ಜನರು ತಮ್ಮ ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿದರು. ಈ ವೇಳೆ ತಾಲೂಕು ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.