ಮುಡಿಪು: ಬಲ್ಮಠ ಕಾಲೇಜು ಎನ್‌ಎಸ್ ಎಸ್‌ ವಾರ್ಷಿಕ ಶಿಬಿರ ಉದ್ಘಾಟನೆ

| Published : Oct 17 2024, 12:02 AM IST

ಮುಡಿಪು: ಬಲ್ಮಠ ಕಾಲೇಜು ಎನ್‌ಎಸ್ ಎಸ್‌ ವಾರ್ಷಿಕ ಶಿಬಿರ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ಬಲ್ಮಠ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ (ಎನ್‌ಎಸ್‌ಎಸ್‌ ಶಿಬಿರ) ಉಳ್ಳಾಲ ತಾಲೂಕು ಮುಡಿಪು ಶ್ರೀ ಭಾರತೀ ಅನುದಾನಿತ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಮಂಗಳೂರು ಬಲ್ಮಠ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ (ಎನ್‌ಎಸ್‌ಎಸ್‌ ಶಿಬಿರ) ಉಳ್ಳಾಲ ತಾಲೂಕು ಮುಡಿಪು ಶ್ರೀ ಭಾರತೀ ಅನುದಾನಿತ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.

ಶಿಬಿರದ ಧ್ವಜಾರೋಹಣ ನೆರವೇರಿಸಿದ ಶಾಲೆಯ ಸಂಚಾಲಕ ಕೆ.ಸುಬ್ರಹ್ಮಣ್ಯ ಭಟ್‌ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಶಿಬಿರ ಆಯೋಜಿಸುವುದರಿಂದ ನಗರ ಪ್ರದೇಶದ ವಿದ್ಯಾರ್ಥಿಗಳು ಗ್ರಾಮೀಣ ಬದುಕಿನ ಸೊಗಸು ಅರಿತುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಶಿಬಿರ ಉದ್ಘಾಟಿಸಿದ ಭಾರತೀ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶ್ಚಲ್ ಜಿ.ಶೆಟ್ಟಿ ಮಾತನಾಡಿ, ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಶಿಸ್ತು, ಸಮಯಪ್ರಜ್ಞೆ ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಜೊತೆಗೆ ತಂದೆ, ತಾಯಿ, ಗುರುಹಿರಿಯರು, ದೇಶ ಮತ್ತು ಸಮಾಜವನ್ನು ಪ್ರೀತಿಸುವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಕೆ. ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಬಲ್ಮಠ ಕಾಲೇಜು ಪ್ರಾಂಶುಪಾಲೆ ವನಿತಾ ದೇವಾಡಿಗ ಮಾತನಾಡಿ, ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶ್ರೀ ಭಾರತೀ ಶಾಲೆ ಹಳೆ ವಿದ್ಯಾರ್ಥಿ ಪೂವಪ್ಪ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಘಟಕ ನಾಯಕಿಯರಾದ ರಶ್ಮಿತಾ ಹಾಗೂ ಅಕ್ಷತಾ ಲಮಾಣಿ ಹಾಜರಿದ್ದರು.

ಉಪನ್ಯಾಸಕ ಉಮೇಶ್ ಕೆ.ಆರ್. ಸ್ವಾಗತಿಸಿದರು. ಶಿಬಿರಾಧಿಕಾರಿ ಚೇತನಾ ವಂದಿಸಿದರು. ಸಹ ಶಿಬಿರಾಧಿಕಾರಿ ಸಂತೋಷ ಸಿ. ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ ವಿದ್ಯಾರ್ಥಿನಿಯರು ವಿವಿಧ ಸೇವಾ ಚಟುವಟಿಕೆಗಳನ್ನು ಕೈಗೊಂಡರು. ವಿದ್ಯಾರ್ಥಿನಿಯರಿಗೆ ಕ್ಷೇತ್ರ ಸಂಚಾರ, ಕೃಷಿ ಕಾರ್ಯಕ್ಷೇತ್ರ ದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪರಿಸರ ಸ್ವಚ್ಛತೆ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.