ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವು 2025ನೇ ಸಾಲಿನ ಪ್ರತಿಷ್ಠಿತ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ಘೋಷಿಸಿದ್ದು, ‘ಬಡತನ ರಹಿತ ಮತ್ತು ವೃದ್ಧಿತ ಜೀವನೋಪಾಯ ಪಂಚಾಯಿತಿ’ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಮುದ್ರಾಡಿ ಗ್ರಾಮ ಪಂಚಾಯತ್‌, ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ.

ಕನ್ನಡಪ್ರಭ ವಾರ್ತೆ ನವದೆಹಲಿ/ಉಡುಪಿ:

ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವು 2025ನೇ ಸಾಲಿನ ಪ್ರತಿಷ್ಠಿತ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ಘೋಷಿಸಿದ್ದು, ‘ಬಡತನ ರಹಿತ ಮತ್ತು ವೃದ್ಧಿತ ಜೀವನೋಪಾಯ ಪಂಚಾಯಿತಿ’ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಮುದ್ರಾಡಿ ಗ್ರಾಮ ಪಂಚಾಯತ್‌, ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ.

ರಾಜ್ಯದ ಒಟ್ಟಾರೆ 6 ಗ್ರಾ.ಪಂ.ಗಳು ವಿವಿಧ ವಿಭಾಗಗಳಲ್ಲಿ ಈ ಬಾರಿಯ ಪ್ರಶಸ್ತಿಗೆ ಆಯ್ಕೆಯಾಗಿವೆ. ರಾಜ್ಯಕ್ಕೆ ಲಭಿಸಿದ 6 ಪ್ರಶಸ್ತಿಗಳ ಪೈಕಿ 5 ಪ್ರಶಸ್ತಿಗಳು ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತಿಗಳಿಗೆ ಲಭಿಸಿವೆ. ಜೂನ್‌ 3ರಂದು ದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಆಯ್ಕೆಯಾದ ಗ್ರಾ.ಪಂ.ಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿ, ‘ಬಡತನ ರಹಿತ ಮತ್ತು ವೃದ್ಧಿತ ಜೀವನೋಪಾಯ ಪಂಚಾಯಿತಿ’ ವಿಭಾಗದಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದ್ದು, ಈ ಅಪೂರ್ವ ಸಾಧನೆಗಾಗಿ ಪಂಚಾಯಿತಿಗೆ ಕೇಂದ್ರ ಸರ್ಕಾರದಿಂದ ಒಂದು ಕೋಟಿ ರುಪಾಯಿ ನಗದು ಬಹುಮಾನ ಘೋಷಿಸಲಾಗಿದೆ. ಆ ಮೂಲಕ ಮುದ್ರಾಡಿ, ಇಂದು ಭಾರತದ ಮಾದರಿ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಮಧ್ಯೆ, ಆರೋಗ್ಯ ಮತ್ತು ಕಲ್ಯಾಣ ವಿಭಾಗದಲ್ಲಿ ಉಡುಪಿ ಜಿಲ್ಲೆಯ ವಂಡ್ಸೆ ಗ್ರಾಮ ಪಂಚಾಯಿತಿ ಹಾಗೂ ಮಕ್ಕಳ ಸ್ನೇಹಿ ಪಂಚಾಯಿತಿ ವಿಭಾಗದಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಹಲನಾಯಕನಹಳ್ಳಿ ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ. ಸಮಗ್ರ ನೀರು ನಿರ್ವಹಣೆ ವಿಭಾಗದಲ್ಲಿ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯಿತಿ ಆಯ್ಕೆಯಾಗಿದ್ದು, ಇವುಗಳಿಗೆ ತಲಾ ₹75 ಲಕ್ಷ ಬಹುಮಾನ ಘೋಷಿಸಲಾಗಿದೆ.

ಅಲ್ಲದೆ, ಸ್ವಾವಲಂಬಿ ಮೂಲಸೌಕರ್ಯ ಅಭಿವೃದ್ಧಿ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಸಾಣೂರು ಹಾಗೂ ಸಾಮಾಜಿಕ ನ್ಯಾಯ ವಿಭಾಗದಲ್ಲಿ ಉಡುಪಿ ಜಿಲ್ಲೆ ಕುಂದಾಪುರದ ಹಕ್ಲಾಡಿ ಗ್ರಾಮ ಪಂಚಾಯಿತಿಗಳು ದೇಶದಲ್ಲಿ ಮೂರನೇ ಸ್ಥಾನ ಪಡೆದು, ತಲಾ 50 ಲಕ್ಷ ರುಪಾಯಿ ಬಹುಮಾನ ಗಳಿಸಿವೆ. ಮುದ್ರಾಡಿ ಗ್ರಾಪಂ ಸಾಧನೆಯೇನು?:

ಮುದ್ರಾಡಿ ಪಂಚಾಯಿತಿ ಒಟ್ಟು 1,671 ಮನೆಗಳನ್ನು ಹೊಂದಿದ್ದು, ಸುಮಾರು 6,102 ಜನರಿಗೆ ಸಮರ್ಪಕ ಸೇವೆ ಒದಗಿಸುತ್ತಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿರುವ 1,046 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಏಳಿಗೆಗಾಗಿ ವಿಶೇಷ ಆದ್ಯತೆ ನೀಡಲಾಗಿದೆ.ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ಪಂಚಾಯಿತಿ, ಕಾಡು ಉತ್ಪನ್ನ ಆಧಾರಿತ ಜೀವನೋಪಾಯ, ನೀರಿನ ಸಂರಕ್ಷಣೆ, ಮಣ್ಣಿನ ಸುಧಾರಣೆ ಮತ್ತು ಹಸಿರು ಆರ್ಥಿಕತೆಯತ್ತ ಗ್ರಾಮಸ್ಥರನ್ನು ಪ್ರೇರೇಪಿಸಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದು, ಗ್ರಾಮೀಣ ಕುಟುಂಬಗಳಿಗೆ ನಿರಂತರ ಉದ್ಯೋಗ ಭದ್ರತೆ ಒದಗಿಸುವುದರ ಜೊತೆಗೆ ಗ್ರಾಮದ ಮೂಲಸೌಕರ್ಯ ಅಭಿವೃದ್ಧಿಗೂ ಯೋಜನೆಯ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡಿದೆ. ಸಾಮಾಜಿಕ ಭದ್ರತಾ ಯೋಜನೆಗಳ ಶೇ.100ರಷ್ಟು ವ್ಯಾಪ್ತಿ ಸಾಧಿಸಿರುವುದು ಇಲ್ಲಿನ ಮತ್ತೊಂದು ಮೈಲಿಗಲ್ಲು. ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಅಂಗವಿಕಲರ ನೆರವು ಸೇರಿದಂತೆ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ತಲುಪಿಸಿದೆ.-----

ಪಂಚಾಯತಿಗಳ ಅಭಿವೃದ್ಧಿಯ ದೃಷ್ಟಿಕೋನ, ಸಿಬ್ಬಂದಿಗಳ ಕಾರ್ಯಕ್ಷಮತೆ ಹಾಗೂ ಎಲ್ಲರ ಸಹಕಾರದಿಂದ ಈ ಅಭಿವೃದ್ಧಿ ಸಾಧ್ಯವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

-ವಿ‌.ಸುನೀಲ್ ಕುಮಾರ್, ಶಾಸಕರು ಕಾರ್ಕಳ.

--

ಬಡತನ ನಿರ್ಮೂಲನೆ, ಮಹಿಳಾ ಸಬಲೀಕರಣ, ಶಾಶ್ವತ ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಭದ್ರತೆಯನ್ನು ಸಮಗ್ರವಾಗಿ ಜಾರಿಗೊಳಿಸಿದ ಮುದ್ರಾಡಿ ಪಂಚಾಯಿತಿ, ಗ್ರಾಮೀಣಾಭಿವೃದ್ಧಿಯಲ್ಲಿ ದೇಶಕ್ಕೆ ಮಾದರಿಯಾಗಿ ಹೊರಹೊಮ್ಮಿದೆ.

-ಸುಭಾಸ್, ಪಿಡಿಒ, ಮುದ್ರಾಡಿ.