ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಮುನ್ನೂರುಕಾಪು ಸಮಾಜದ ನೇತೃತ್ವದಲ್ಲಿ ಕಾರಹುಣ್ಣಿಮೆ ನಿಮಿತ್ತ ರೈತರ ಹಬ್ಬವಾದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ಬರುವ ಜೂ.21ರಿಂದ 23ವರೆಗೆ ಆಯೋಜಿಸಲಾಗಿದೆ ಎಂದು ಹಬ್ಬದ ರುವಾರಿಗಳಾದ ಮಾಜಿ ಶಾಸಕ ಹಾಗೂ ಸಮಾಜದ ಹಿರಿಯ ಮುಖಂಡ ಎ.ಪಾಪಾರೆಡ್ಡಿ ತಿಳಿಸಿದರು.ಸ್ಥಳೀಯ ಪತ್ರಿಕಾ ಭವನದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 24 ವರ್ಷಗಳಿಂದ ಮುನ್ನೂರುಕಾಪು ಸಮಾಜವು ಈ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದೆ. 21 ರಿಂದ ಮೂರು ದಿನಗಳ ಕಾಲ ಜೋಡೆತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ, ಕುಲದೇವತೆ ಲಕ್ಷ್ಮಮ್ಮ ದೇವಿ ಮೂರ್ತಿ ಜೊತೆಗೆ ಕಲಾತಂಡಗಳ ಮೆರವಣಿಗೆ, ಕುಸ್ತಿ, ಕಲ್ಲು ಗುಂಡು, ಉಸುಕಿನ ಚೀಲ ಎತ್ತುವ ಸ್ಪರ್ಧೆ ಮತ್ತು ಸಂಜೆ ನೃತ್ಯ ರೂಪಕದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸುವ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮೂರು ದಿನಗಳ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು ಹಾಗೂ ವಿವಿಧ ಮಠಗಳ ಸ್ವಾಮೀಜಿ ಸೇರಿ ಅನೇಕರು ಭಾಗವಹಿಸಲಿದ್ದಾರೆ ಎಂದರು.
ಹಬ್ಬದ ಮೊದಲ ದಿನವಾದ ಜೂ.21ರಂದು ಬೆಳಗ್ಗೆ 8ಕ್ಕೆ ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ಕರ್ನಾಟಕ ರಾಜ್ಯದ ಜೋಡೆತ್ತುಗಳಿಂದ 1.5ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ನಡೆಯಲಿದ್ದು, ಸಂಜೆ 6ಕ್ಕೆ ನಗರದ ವೀರಾಂಜನೇಯ ಮನ್ನೂರುಕಾಪು ಕಲ್ಯಾಣ ಮಂಟಪದಲ್ಲಿ ನೃತ್ಯ ರೂಪಕ ಜರುಗಲಿದೆ. ಜೂ.22ಕ್ಕೆ (ಅಖಿಲ ಭಾರತ ಮುಕ್ತ) 2 ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ಜರುಗಲಿದ್ದು, ಅಂದು ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಎತ್ತುಗಳ ಬೃಹತ್ ಮೆರವಣಿಗೆ, ಗ್ರಾಮೀಣ ಶೈಲಿಯಲ್ಲಿ ಕಲಾರೂಪಕ ವೀರಗಾಸೆ, ಕತ್ತಿವರಸೆ, ಡೊಳ್ಳುಕುಣಿತ, ಗಾಲಿಹಲಗೆ, ಕರಡಿ ಮಜಲು, ಕಂಸಾಳೆ ಹಾಗೂ ವಿವಿಧ ಜಿಲ್ಲೆಗಳ ಕಲಾವಾಹಿನಿ ತಂಡಗಳಿಂದ ಕಲಾಪ್ರದರ್ಶನವು ನಡೆಯಲಿದ್ದು, ನಂತರ ನಗರದ ನಿಜಲಿಂಗಪ್ಪ ಕಾಲೋನಿ ಗಣೇಶ ಗುಡಿ ದೇವಸ್ಥಾನದಲ್ಲಿ ನೃತ್ಯ ರೂಪಕ ಜರುಗಲಿದೆ.ಜೂ.23ರಂದು ಮುಂಜಾನೆ ಅಖಿಲ ಭಾರತ ಮುಕ್ತ ಸ್ಪರ್ಧೆಯಲ್ಲಿ ಜೋಡೆಗಳಿಂದ 2.5 ಟನ್ ಭಾರವಾದ ಕಲ್ಲುಗಳ ಎಳೆಯುವ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಲಕ್ಷ್ಮಮ್ಮ ದೇವಸ್ಥಾನದಲ್ಲಿ ಕಲ್ಲು ಗುಂಡು, ಉಸುಕಿನ ಚೀಲ ಎತ್ತುವ ಸ್ಪರ್ಧೆ ಹಾಗೂ ಸಂಜೆ 5ಕ್ಕೆ ಗಂಜ್ ಆವರಣದಲ್ಲಿ ದೇಶದ ವಿವಿಧ ರಾಜ್ಯಗಳ ಪೈಲ್ವಾನರಿಂದ ಕುಸ್ತಿ ಬಲ ಪ್ರದರ್ಶನ ಸ್ಪರ್ಧೆಗಳು ನಂತರ ಸಂಜೆ 6ಕ್ಕೆ ಗಂಜ್ ಕಲ್ಯಾಣ ಮಂಟಪದಲ್ಲಿ ನೃತ್ಯರೂಪಕವು ನಡೆಯದೆ ಎಂದು ವಿವರಿಸಿದರು.
ಇಡೀ ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿಯೂ ಆಚರಿಸದಂತೆ ರಾಯಚೂರಿನಲ್ಲಿ ಮೂರು ದಿನಗಳ ಮುಂಗಾರು ಸಾಂಸ್ಕೃತಿಕ ಹಬ್ಬವನ್ನು ಆಚರಿಸುತ್ತಾ ಬರುತ್ತಿದ್ದು, ಈ ಬಾರಿಯೂ ಸಹ ಸಮಾಜದವರಿಂದ ದೇಣಿಗೆ ಪಡೆದ ₹50 ಲಕ್ಷ ರು. ಮೊತ್ತದಿಂದ ಹಬ್ಬ ಆಚರಿಸಲಾಗುತ್ತಿದೆ. ಹಲವಾರು ವರ್ಷಗಳಿಂದ ಸರ್ಕಾರದಿಂದ ಹಬ್ಬ ಆಚರಿಸಬೇಕು ಎಂದು ಒತ್ತಾಯಿಸುತ್ತಾ ಬರಲಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ ನಡೆಯುವ ಕಂಬಳಕ್ಕೆ ಸರ್ಕಾರ ನೆರವು ನೀಡುತ್ತದೆ ಅದೇ ಮಾದರಿಯಲ್ಲಿ ಗ್ರಾಮೀಣ ಸೊಗಡಿನ ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಸರ್ಕಾರ ಅನುದಾನ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಗೌರವಾಧ್ಯಕ್ಷ ವಿ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಜಿ.ಬಸವರಾಜ ರೆಡ್ಡಿ, ಯುವ ಅಧ್ಯಕ್ಷ ಬಂಗಿ ನರಸರೆಡ್ಡಿ, ಮುಖಂಡರಾದ ಪಿ.ಚಂfರಶೇಖರ ರೆಡ್ಡಿ, ನರವ ಶ್ರೀನಿವಾಸ ರೆಡ್ಡಿ, ಯು.ಗೋವಿಂದ ರೆಡ್ಡಿ, ಜಿ.ನರಸರೆಡ್ಡಿ,ಎಸ್.ವೆಂಕಟರೆಡ್ಡಿ,ಮಾನಂದರೆಡ್ಡಿ, ಪಿ.ಮಲ್ಲೇಶ,ಪಿ.ರಾಜೇಂದ್ರ ರೆಡ್ಡಿ, ಮಹೇಂದ್ರೆರೆಡ್ಡಿ, ಜಂಪರೆಡ್ಡಿ ಇದ್ದರು.