ಸಾರಾಂಶ
ಶಿಂಢಬೋಗನಹಳ್ಳಿ ಗ್ರಾಮದ ಹೊರಭಾಗದ ದೇವರ ಕಲ್ಯಾಣಿ ಕೊಳದ ಬಳಿ ಗಂಗೆಪೂಜೆ ನೆರವೇರಿಸಿ ಕನ್ಯಾ ಮಕ್ಕಳಿಂದ ಕರಗ ಉತ್ಸವವನ್ನು ಮೆರವಣಿಗೆ ಮೂಲಕ ಗ್ರಾಮಕ್ಕೆ ತರಲಾಯಿತು. ನಂತರ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆವರೆಗೂ ಗ್ರಾಮದ ವಿವಿಧ ಬೀದಿಗಳಲ್ಲಿ ಕರಗ ಉತ್ಸವ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಶಿಂಢಬೋಗನಹಳ್ಳಿಯಲ್ಲಿ ಗ್ರಾಮದೇವತೆ ಮೂಗುಮಾರಮ್ಮ ದೇವರ ಕರಗ ಉತ್ಸವ ಮಂಗಳವಾರ ರಾತ್ರಿವಿಡಿ ವಿಜೃಂಭಣೆಯಿಂದ ಜರುಗಿತು.ಹಬ್ಬದ ಅಂಗವಾಗಿ ಗ್ರಾಮದ ಹೊರಭಾಗದ ದೇವರ ಕಲ್ಯಾಣಿ ಕೊಳದ ಬಳಿ ಗಂಗೆಪೂಜೆ ನೆರವೇರಿಸಿ ಕನ್ಯಾ ಮಕ್ಕಳಿಂದ ಕರಗ ಉತ್ಸವವನ್ನು ಮೆರವಣಿಗೆ ಮೂಲಕ ಗ್ರಾಮಕ್ಕೆ ತರಲಾಯಿತು. ನಂತರ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆವರೆಗೂ ಗ್ರಾಮದ ವಿವಿಧ ಬೀದಿಗಳಲ್ಲಿ ಕರಗ ಉತ್ಸವ ನಡೆಸಲಾಯಿತು.
ಗ್ರಾಮದ ಪ್ರತಿ ಮನೆಯ ಬಳಿಗೆ ಉತ್ಸವ ಹೋದಾಗ ಭಕ್ತರು ಪೂಜೆಸಲ್ಲಿಸಿ ಭಕ್ತಿಭಾವ ಪ್ರದರ್ಶಿಸಿದರು. ಉತ್ಸವದ ಬಳಿಕ ಮತ್ತೆ ಮೂಗುಮಾರಮ್ಮ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಕರಗ ಉತ್ಸವವನ್ನು ಇಡಲಾಯಿತು. ಕರಗ ಉತ್ಸವದಲ್ಲಿ ವಾಧ್ಯಗೋಷ್ಠಿ, ತಮಟೆ, ನಗಾರಿ, ಡೊಳ್ಳುಕುಣಿತ ಹಾಗೂ ವೀರಮಕ್ಕಳ ಕುಣಿತ ಎಲ್ಲರ ಗಮನ ಸೆಳೆದವು. ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ಬುಧವಾರ ಬೆಳಗ್ಗೆ ಭಕ್ತರು ದೇವಿಗೆ ತಂಬಿಟ್ಟು ಆರತಿ ಪೂಜೆಸಲ್ಲಿಸಿದರು. ಕರಗ ಉತ್ಸವಕ್ಕೆ ಹರಕೆ ಹೊತ್ತ ಮಹಿಳಾ ಭಕ್ತರು ಬಾಯಿಬೀಗ ಹಾಕಿಸಿ, ಬಾಳೆ ಹಣ್ಣಿನ ಗೊನೆಯನ್ನು ದೇವಿಗೆ ಅರ್ಪಿಸುವ ಮೂಲಕ ಭಕ್ತಿ ಭಾವ ಮೆರದರು.
ಉತ್ಸವದಲ್ಲಿ ಶಿಂಢಭೋಗನಹಳ್ಳಿ, ಕಣಿವೆಕೊಪ್ಪಲು, ಹೊನಗಾನಹಳ್ಳಿ, ಬೇಬಿ, ರಾಗಿಮುದ್ದನಹಳ್ಳಿ, ಚಿನಕುರಳಿ, ಕಾವೇರಿಪುರ, ಬನ್ನಂಗಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಹಬ್ಬದ ಅಂಗವಾಗಿ ಗ್ರಾಮದಲ್ಲಿ ವಿಶೇಷವಾಗಿ ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗಿತ್ತು.ಕರಗ ಉತ್ಸವದ ನೇತೃತ್ವವನ್ನು ಗ್ರಾಮದ ಯಜಮಾನರಾದ ಎಸ್.ಟಿ.ನಾಗಣ್ಣ, ನರಸಿಂಹೇಗೌಡ, ಪ.ಮೊಮ್ಮಗ ಪ್ರದೀಪ್, ನಿಂಗೇಗೌಡ, ಗಿರೀಗೌಡ, ನಾಗೇಂದ್ರ, ಎಸ್.ಆರ್.ಆನಂದ ಸೇರಿದಂತೆ ಗ್ರಾಮದ ಮುಖಂಡರು, ಯುವಕರು ಗ್ರಾಮಸ್ಥರು ಯಶಸ್ವಿಯಾಗಿ ಆಚರಣೆ ಮಾಡಿದರು.