ಮುಸ್ಲಿಮರಿಲ್ಲದ ಊರಲ್ಲಿ ಸಂಭ್ರಮದ ಮೊಹರಂ

| Published : Jul 06 2025, 11:48 PM IST

ಸಾರಾಂಶ

ತಾಲೂಕಿನ ಮುಷ್ಠಗಟ್ಟೆ ಗ್ರಾಮದಲ್ಲಿ ಒಂದೂ ಮುಸ್ಲಿಂ ಕುಟುಂಬವಿಲ್ಲ. ಇಲ್ಲಿ ಹಿಂದೂಗಳೇ ನೂರಾರು ವರ್ಷಗಳಿಂದ ಊರ ಹಬ್ಬದಂತೆ ಮೊಹರಂ ಆಚರಿಸುತ್ತಾ ಭಾವೈಕ್ಯತೆ ಮೆರೆದು ಮಾದರಿಯಾಗಿದ್ದಾರೆ.

ಭಾವೈಕ್ಯತೆ, ಮಾದರಿ, ಸೌಹಾರ್ದತೆಗೆ ಸಾಕ್ಷಿ

ಕನ್ನಡಪ್ರಭ ವಾರ್ತೆ ಕುರುಗೋಡು

ತಾಲೂಕಿನ ಮುಷ್ಠಗಟ್ಟೆ ಗ್ರಾಮದಲ್ಲಿ ಒಂದೂ ಮುಸ್ಲಿಂ ಕುಟುಂಬವಿಲ್ಲ. ಇಲ್ಲಿ ಹಿಂದೂಗಳೇ ನೂರಾರು ವರ್ಷಗಳಿಂದ ಊರ ಹಬ್ಬದಂತೆ ಮೊಹರಂ ಆಚರಿಸುತ್ತಾ ಭಾವೈಕ್ಯತೆ ಮೆರೆದು ಮಾದರಿಯಾಗಿದ್ದಾರೆ.

ಹಿಂದೂಗಳೇ ಮುಂದೆ ನಿಂತು ಮೊಹರಂ ಆಚರಣೆ ನಡೆಸುತ್ತಿರುವುದು ಗ್ರಾಮಸ್ಥರ ಸೌಹಾರ್ದತೆಗೆ ಸಾಕ್ಷಿ ಆಗಿದೆ. ಭಕ್ತರ ಇಷ್ಟಾರ್ಥ ಪೂರೈಸುವ ಪೀರಲು ದೇವರಿಗೆ ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸುವುದು ಹಿಂದಿನಿಂದಲೂ ಬಂದ ಪರಂಪರೆ. ಇಲ್ಲಿನ ಮಸೀದಿಯಲ್ಲಿ ಪ್ರತಿಷ್ಠಾಪಿಸುವ 9 ಬಗೆಯ ಪೀರಲದೇವರುಗಳಲ್ಲಿ ಮೂರುಗೆರೆ ಪೀರಲ ದೇವರು, ಕಂಪ್ಲಿ ಪೀರಲದೇವರು, ಮೂಕು ಪೀರಲದೇವರು ಮತ್ತು ಸೋಮಲಾಪುರ ಪೀರಲದೇವರುಗಳು ಹೆಚ್ಚು ಮಹತ್ವ ಪಡೆದಿವೆ.

ಭಕ್ತರ ಇಷ್ಟಾರ್ಥ ಪೂರೈಸುವ ದೇವರೆಂದೇ ಖ್ಯಾತಿ ಗಳಿಸಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಮೊಹರಂ ಸಂದರ್ಭದಲ್ಲಿ ಭೇಟಿ ದೇವರಿಗೆ ಸಕ್ಕರೆ ಅರ್ಪಿಸುತ್ತಾರೆ. ನೆಂಟಸ್ಥರು ಹಬ್ಬಕ್ಕೆ ಬಂದು ಗ್ರಾಮದ ಸಂಭ್ರಮದಲ್ಲಿ ಗ್ರಾಮದ ಆಂಜನೇಯಸ್ವಾಮಿ ಮತ್ತು ಈಶ್ವರ ದೇವಸ್ಥಾನದ ಮಧ್ಯೆ ಹಿಂದೂಗಳೇ ಮಸೀದಿ ನಿರ್ಮಿಸಿರುವುದು ವಿಶೇಷ.

ಗ್ರಾಮದಲ್ಲಿ ೬೦೦ ಮನೆಗಳಿದ್ದು, ೪,೦೦೦ ಜನಸಂಖ್ಯೆ ಇದೆ. ವಾಲ್ಮೀಕಿ, ಲಿಂಗಾಯತ, ಮಡಿವಾಳ ಮತ್ತು ಪರಿಶಿಷ್ಟ ಜಾತಿಯವರು ವಾಸಿಸುತ್ತಿದ್ದಾರೆ. ಗ್ರಾಮದಲ್ಲಿ ಮುಸ್ಲಿಮರು ವಾಸಿಸುತ್ತಿಲ್ಲ. ಆದರೂ ಗ್ರಾಮದ ಜನರಿಗೆ ಒಳಿತಾಗಲಿ ಎನ್ನುವ ಸದುದ್ದೇಶದಿಂದ ಪ್ರತಿವರ್ಷ ಸರ್ವರು ಸೇರಿ ಮೊಹರಂ ಆಚರಿಸುತ್ತೇವೆ ಎಂದು ತುಂಗಭದ್ರಾ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಮುಷ್ಠಗಟ್ಟೆ ಭೀಮನಗೌಡ ಹೇಳಿದರು.

ಹನುಮಂತಪ್ಪ ಮತ್ತು ಮಲ್ಲಪ್ಪ, ಪರಿಶಿಷ್ಟ ಸಮುದಾಯದ ಮಾರೆಣ್ಣ ಮತ್ತು ಈರಣ್ಣ ದೇವರನ್ನು ಹೊರುತ್ತಾರೆ. ಭಾನುವಾರ ಕತ್ತಲ ರಾತ್ರಿ ನಡೆದಿದ್ದು, ಜು.7ನ್ನು ಮುಷ್ಠಗಟ್ಟೆ ಗ್ರಾಮದಲ್ಲಿ ಮೊಹರಂ ಕೊನೆಯ ದಿನವಾಗಿ ಆಚರಿಸಲಾಗುತ್ತದೆ.