ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ ಸಂಭ್ರಮ

| Published : Jul 03 2025, 11:49 PM IST / Updated: Jul 03 2025, 11:50 PM IST

ಸಾರಾಂಶ

ತಾಲೂಕಿನ ಭುಜಂಗನಗರ ಗ್ರಾಮದಲ್ಲಿ ಇರುವವರೆಲ್ಲ ಹಿಂದೂಗಳೆ. ಇಲ್ಲಿ ಮುಸ್ಲಿಮರ ವಾಸವಿಲ್ಲ. ಆದಾಗ್ಯೂ ಈ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿರುವುದು ವಿಶೇಷ.

ಪೀರಲದೇವರು ಪ್ರತಿಷ್ಠಾಪನೆ, ಸರ್ವ ಜನಾಂಗದವರಿಂದ ಪೂಜೆವಿ.ಎಂ. ನಾಗಭೂಷಣ

ಕನ್ನಡಪ್ರಭ ವಾರ್ತೆ ಸಂಡೂರು

ತಾಲೂಕಿನ ಭುಜಂಗನಗರ ಗ್ರಾಮದಲ್ಲಿ ಇರುವವರೆಲ್ಲ ಹಿಂದೂಗಳೆ. ಇಲ್ಲಿ ಮುಸ್ಲಿಮರ ವಾಸವಿಲ್ಲ. ಆದಾಗ್ಯೂ ಈ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿರುವುದು ವಿಶೇಷ. ಐತಿಹ್ಯ:

ಮುಸ್ಲಿಮರಿಲ್ಲದಿದ್ದರೂ ಗ್ರಾಮದಲ್ಲಿ ಹೊನ್ನೂರಸ್ವಾಮಿ ಹೆಸರಿನ ಪೀರಲದೇವರು ಪ್ರತಿಷ್ಠಾಪನೆಗೊಂಡು ಗ್ರಾಮದ ಸರ್ವ ಜನಾಂಗದವರಿಂದ ಪೂಜಿಸಲ್ಪಡುತ್ತಿರುವ ಕುರಿತು ಐಹಿತ್ಯವಿದೆ. ಈ ಐತಿಹ್ಯದ ಕುರಿತು ಗ್ರಾಮಸ್ಥರು ಹಾಗೂ ರೈತ ಸಂಘದ ಮುಖಂಡರೂ ಆದ ಚಂದ್ರಶೇಖರ ಮೇಟಿ ಕನ್ನಡಪ್ರಭದೊಂದಿಗೆ ಮಾತನಾಡಿ, ನಮ್ಮ ಹಿರಿಯರು ಹೇಳಿದ ಪ್ರಕಾರ ಒಂದೆರಡು ಶತಮಾನಗಳ ಹಿಂದೆ ಗ್ರಾಮದ ಬಳಿಯ ಬಗಟೆ ಗುಡ್ಡದ ಬಳಿಯಲ್ಲಿ ಕೆಲವರು ದನ ಮೇಯಿಸಲು ತೆರಳಿದ್ದಾಗ, ಅಲ್ಲಿ ಹೊಳೆಯುವ ಲೋಹದ ವಸ್ತುವೊಂದು ಕಾಣಿಸಿದೆ. ಅಚ್ಚರಿಗೊಂಡ ದನ ಕಾಯುವವರು ಗ್ರಾಮಕ್ಕೆ ಆಗಮಿಸಿ, ಗ್ರಾಮದ ಮುಖಂಡರಿಗೆ ವಿಷಯ ತಿಳಿಸಿದ್ದಾರೆ. ಆಗ ಮುಖಂಡರು ಗ್ರಾಮಸ್ಥರೊಂದಿಗೆ ಗುಡ್ಡಕ್ಕೆ ತೆರಳಿ ನೋಡಲಾಗಿ, ಅಲ್ಲಿ ಪೀರಲ ದೇವರ ಮೂರ್ತಿ ಕಾಣಿಸಿದೆ. ಗ್ರಾಮಸ್ಥರು ಮೂರ್ತಿಯನ್ನು ಗ್ರಾಮಕ್ಕೆ ತಂದು, ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದಾರೆ. ಅಂದಿನಿಂದ ಪ್ರತಿವರ್ಷ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲ್ಪಡುತ್ತಿದೆ. ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಗ್ರಾಮಸ್ಥರೆಲ್ಲ ಕೂಡಿ ಸಂಭ್ರಮದಿಂದ ಪ್ರತಿವರ್ಷ ಆಚರಿಸುತ್ತಾರೆ.

ಸಂಡೂರಿನ ಮುಸ್ಲಿಂ ಕುಟುಂಬವೊಂದರ ಸದಸ್ಯರು ಗ್ರಾಮಕ್ಕೆ ಆಗಮಿಸಿ ಪೀರಲದೇವರ ಪೂಜೆ ನೆರವೇರಿಸುತ್ತಾರೆ. ಮೊಹರಂ ಹಬ್ಬದ ಕೊನೆಯ ದಿನದಂದು, ಪೀರಲ ದೇವರು ಊರ ಬುಡ್ಡೆಕಲ್ಲು ಬಳಿ ಬಂದಾಗ, ಗ್ರಾಮಸ್ಥರು ಮಳೆ ಬೆಳೆ, ಜನ ಹಾಗೂ ಜಾನುವಾರುಗಳ ಯೋಗಕ್ಷೇಮ ಕುರಿತು ಭವಿಷ್ಯ ಕೇಳುತ್ತಾರೆ ಎಂದರು.

ಗ್ರಾಮದಲ್ಲಿ ಮುಸ್ಲಿಮರಿಲ್ಲದಿದ್ದರೂ, ಗ್ರಾಮದಲ್ಲಿ ಭಾವೈಕ್ಯತೆಯ ಹಬ್ಬವಾದ ಮೊಹರಂ ಅನ್ನು ಗ್ರಾಮಸ್ಥರೆಲ್ಲರು ಕೂಡಿ ಸಂಭ್ರಮದಿಂದ ಆಚರಿಸುತ್ತಿರುವುದು ವಿಶೇಷವಾಗಿದೆ.