ಶ್ರದ್ಧಾ ಭಕ್ತಿಯ ಮೊಹರಂ ಹಬ್ಬ ಆಚರಣೆ, ಡೋಲಿ, ಪಂಜಾಗಳ ಮೆರವಣಿಗೆ

| Published : Jul 06 2025, 11:48 PM IST

ಸಾರಾಂಶ

ಹಾವೇರಿ ತಾಲೂಕಿನ ಟಾಟಾ ಮಣ್ಣೂರ ಗ್ರಾಮದಲ್ಲಿ ಹಿಂದೂ- ಮುಸ್ಲಿಮರು ಭೇದಭಾವವಿಲ್ಲದೇ ಸಹಬಾಳ್ವೆಯಿಂದ ಎಲ್ಲರೂ ಒಗ್ಗಟ್ಟಾಗಿ ಸಂಭ್ರಮದಿಂದ ಮೊಹರಂ ಹಬ್ಬವನ್ನು ಆಚರಿಸಿ ಭಾವೈಕ್ಯತೆಗೆ ಸಾಕ್ಷಿಯಾದರು.

ಹಾವೇರಿ: ಹಿಂದೂ- ಮುಸ್ಲಿಮರ ಭಾವೈಕ್ಯೆತೆಯ ಪ್ರತೀಕವಾದ ಮೊಹರಂ ಹಬ್ಬವನ್ನು ಜಿಲ್ಲಾದ್ಯಂತ ಶನಿವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.ತಾಲೂಕಿನ ಟಾಟಾ ಮಣ್ಣೂರ ಗ್ರಾಮದಲ್ಲಿ ಹಿಂದೂ- ಮುಸ್ಲಿಮರು ಭೇದಭಾವವಿಲ್ಲದೇ ಸಹಬಾಳ್ವೆಯಿಂದ ಎಲ್ಲರೂ ಒಗ್ಗಟ್ಟಾಗಿ ಸಂಭ್ರಮದಿಂದ ಮೊಹರಂ ಹಬ್ಬವನ್ನು ಆಚರಿಸಿ ಭಾವೈಕ್ಯತೆಗೆ ಸಾಕ್ಷಿಯಾದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಳಗ್ಗೆ ವಿವಿಧ ಹೂವುಗಳಿಂದ ಅಲಂಕರಿಸಿದ ಡೋಲಿ ಹಾಗೂ ಪಂಜಾಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಗ್ರಾಮದ ಹಿರಿಯರು ಹಾಗೂ ಯುವಕರು, ಮಕ್ಕಳು ಮೆರವಣಿಗೆ ಸಂದರ್ಭದಲ್ಲಿ ಅಲಾಬಿ ಪದಗಳನ್ನು ಹಾಡುತ್ತ ಹೆಜ್ಜೆ ಹಾಕಿ ಸಂಭ್ರಮಿಸಿದರು. ಗ್ರಾಮದ ಮಹಿಳೆಯರು ಹಾಗೂ ಮಕ್ಕಳು ಮನೆಯ ಎದುರು ಡೋಲಿ ಬಂದ ಸಂದರ್ಭದಲ್ಲಿ ಪೂಜೆ ಸಲ್ಲಿಸಿ ಭಾವೈಕ್ಯತೆ ಮೆರೆದರು. ಇನ್ನೂ ಕೆಲವರು ಪಂಜಾಗಳನ್ನು ಹಿಡಿದು ಬಂದ ಮಕ್ಕಳಿಗೆ ನಮಸ್ಕರಿಸುವ ದೃಶ್ಯ ಕಂಡುಬಂದಿತು. ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಮರು ನೆರೆದಿದ್ದ ಸಾರ್ವಜನಿಕರಿಗೆ ಪಾನಕ ವಿತರಿಸಿದರು. ಮೊಹರಂ ಹಬ್ಬದ ನಿಮಿತ್ತ ಕೆಲವರು ಹುಲಿ ವೇಷ ಧರಿಸಿ ಹೆಜ್ಜೆ ಹಾಕಿ ಭಕ್ತಿ ಪ್ರದರ್ಶಿಸಿ ಗಮನ ಸೆಳೆದರು. ಪಂಜಾಗಳನ್ನು ಹಿಡಿದ ಕೆಲವರು ಬೆಂಕಿ ಹಾಯ್ದು ಗಮನ ಸೆಳೆದರು. ಈ ಸಂದರ್ಭದಲ್ಲಿ ಪಕ್ಕೀರಪ್ಪ ಕಮತರ, ಚೇತನ್ ತೊರಗಲ್ಲ, ಹೊನ್ನಪ್ಪ ತಳವಾರ, ಅಲ್ಲಾಭಕ್ಷಿ ಅಗಸರ, ಮೆಹಬೂಬ್‌ಸಾಬ್ ಅಗಸರ, ಈರಪ್ಪ ಹೊಸಮನಿ, ರಮೇಶ ಮಡ್ಲೂರ, ಜ್ಯೋತೆಪ್ಪ ಹೊಸಮನಿ, ಚಂದ್ರಯ್ಯ ಹಿರೇಮಠ, ಶೇಖಪ್ಪ ಕಮತರ, ಹುಸೇನಸಾಬ್ ಪಿಂಜಾರ, ಶಿವಾನಂದ ಮಡ್ಲೂರ, ಶಿವಪ್ಪ ಬಳ್ಳಾರಿ, ಗಂಗಪ್ಪ ಯರೇಶಿಮಿ, ಮಾಂತಪ್ಪ ಹರಿಜನ, ದ್ಯಾಮಣ್ಣ ಬಡಿಗೇರ, ಖಾದರಸಾಬ್ ಅಗಸರ, ಮಹೇಶ ಹನ್ನೀರ, ಪ್ರಕಾಶ ಹನ್ನಿರ, ಈರಣ್ಣ ಭರಡಿ ಸೇರಿದಂತೆ ಗ್ರಾಮಸ್ಥರು ಇದ್ದರು.

ಗಮನ ಸೆಳೆದ ಮರಗಾಲು ಹೆಜ್ಜೆ ಕುಣಿತ

ರಾಣಿಬೆನ್ನೂರು: ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಭಾನುವಾರ ಸರ್ವಧರ್ಮಿಯರೆಲ್ಲ ಸೇರಿ ಶ್ರದ್ಧಾ ಭಕ್ತಿಯಿಂದ ಮೊಹರಂ ಹಬ್ಬವನ್ನು ಆಚರಿಸಲಾಯಿತು.ಹಬ್ಬದ ಅಂಗವಾಗಿ ಗ್ರಾಮದಲ್ಲಿ ಬೀಬಿ ಫಾತಿಮಾ, ಹಸನ್‌ಹುಸೇನಿ, ಮೌಲಾವಲಿ ಲಾಲ್‌ಸಬ್ ವಲಿಯವರ ಮೆರವಣಿಗೆ ಮಾಡಲಾಯಿತು. ಹಲಗೆಯ ತಾಳಕ್ಕೆ ತಕ್ಕಂತೆ ಹುಲಿವೇಷಧಾರಿಗಳು ಹೆಜ್ಜೆ ಹಾಕುತ್ತಿದ್ದರೆ ಮಟಕಿ ಹೆಜ್ಜೆ ಕುಣಿತ, ಮರಗಾಲು ಹೆಜ್ಜೆ ಕುಣಿತ ಎಲ್ಲರ ಗಮನ ಸೆಳೆಯಿತು.

ಮೆರವಣಿಗೆಯಲ್ಲಿ ರೈತ ಮುಖಂಡ ರವೀಂದ್ರಗೌಡ ಪಾಟೀಲ, ಅಲ್ಲಾಭಕ್ಷಸಾಬ್ ಸೇತಸನದಿ, ದಿಳ್ಳೆಪ್ಪ ಕುರುಬರ, ದೊಣ್ಣೆಪ್ಪ ಹರಿಜನ, ಪ್ರದೀಪ ರಡ್ಡಿ ಎರೇಕುಪ್ಪಿ, ನಾಗನಗೌಡ ಪಾಟೀಲ, ನಾಗಸಯ್ಯ ಹಿರೇಮಠ, ಮಹಮ್ಮದಅಲಿ ಪಿಂಜಾರ, ಸೋಮಪ್ಪ ಕೋಣನತೆಲಿ, ಅಕ್ಬರಸಾಬ್ ಸೇತಸನದಿ, ಹರಿಹರಗೌಡ ಪಾಟೀಲ, ಮುನಾಫ್‌ಸಾಬ್ ಸೇತಸನದಿ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.