ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ ತ್ಯಾಗ, ಬಲಿದಾನಗಳ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಬೆಳಗಾವಿ ನಗರದಲ್ಲಿ ಬುಧವಾರ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಈ ಹಬ್ಬವನ್ನು ಹಿಂದು-ಮುಸ್ಲಿಂ ಮತ್ತು ಇತರೆ ಸಮುದಾಯದವರು ಒಟ್ಟಿಗೆ ಸೇರಿ ಆಚರಿಸಿ, ಸೌಹಾರ್ದತೆ ಮೆರೆದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ತ್ಯಾಗ, ಬಲಿದಾನಗಳ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಬೆಳಗಾವಿ ನಗರದಲ್ಲಿ ಬುಧವಾರ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಈ ಹಬ್ಬವನ್ನು ಹಿಂದು-ಮುಸ್ಲಿಂ ಮತ್ತು ಇತರೆ ಸಮುದಾಯದವರು ಒಟ್ಟಿಗೆ ಸೇರಿ ಆಚರಿಸಿ, ಸೌಹಾರ್ದತೆ ಮೆರೆದರು.ಖಂಜರಗಲ್ಲಿ, ದರ್ಬಾರ್ ಗಲ್ಲಿ, ಗಾಂಧಿನಗರ, ಟೋಪಿಗಲ್ಲಿ, ರವಿವಾರ ಪೇಟೆ ಒಳಗೊಂಡು ನಗರದ ವಿವಿಧ ಬಡಾಣೆಗಳಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಪಂಜಾ, ತಾಬೂತ (ತಾಜಿಯಾ)ಗಳು ಹಬ್ಬದ ಹತ್ತನೇ ದಿನವಾದ ಬುಧವಾರ ಬೆಳಗ್ಗೆ ದರ್ಬಾರ್‌ಗಲ್ಲಿ ಸಮ್ಮಿಲನಗೊಂಡು, ನಂತರ ತಮ್ಮ ಬಡಾವಣೆ ಸ್ಥಳಕ್ಕೆ ಮರಳಿದವು.
ಪಂಜಾಗಳ ಈ ಅಪೂರ್ವ ಮಿಲನ ನೋಡಲು ಎಲ್ಲ ಧರ್ಮಿಯರು ನೆರೆದಿದ್ದರು. ಇದಕ್ಕಾಗಿ ದರ್ಬಾರಗಲ್ಲಿ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಯಾ ಹಸನ್ ಯಾ ಹುಸೇನ್, ಹಸೇನ್ ಹುಸೇನ್ ಕೀ ದೊಸ್ತರಾ ದ್ದೀನ್ ಎಂದು ಜಯ ಘೋಷ ಹಾಕಿ ಭಕ್ತಿ ಸಮರ್ಪಣೆ ಮಾಡಿದರು. ಮುಸ್ಲಿಂ ಧರ್ಮಿಯರು ಧರ್ಮಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಹಸೇನ್, ಹುಸೇನರ ಸ್ಮರಣೆಗೆ ಈ ಮೊಹರಂನ್ನು ಆಚರಣೆ ಮಾಡುತ್ತಾರೆ. ಇದನ್ನು ಸಂಭ್ರಮವಾಗಿ ನಡೆಸದೆ, ಭಕ್ತಿ ಸಮರ್ಪಣೆಗೆ ಸೀಮಿತಗೊಳಿಸಿಕೊಂಡಿರುತ್ತಾರೆ. ಹತ್ತು ದಿನಗಳ ಕಾಲ ಪ್ರತಿಷ್ಠಾಪನೆಗೊಳ್ಳುವ ಪಂಜಾ, ತಾಜಿಯಾಗಳು ಮೆರವಣಿಗೆ ಮೂಲಕ ತೆರಳಿ, ವಿಸರ್ಜನೆಗೊಂಡವು.