ಎನ್. ಪಂಪನಗೌಡ ಬಾದನಹಟ್ಟಿ
ಕುರುಗೋಡು: ತಾಲೂಕಿನ ಮುಷ್ಠಗಟ್ಟೆ ಗ್ರಾಮದಲ್ಲಿ ಮೊಹರಂ ಹಬ್ಬ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಮಾದರಿಯಾಗಿದೆ.ಈ ಗ್ರಾಮದಲ್ಲಿ ಒಂದೇ ಒಂದೂ ಮುಸ್ಲಿಂ ಕುಟುಂಬ ಇಲ್ಲ. ಆದರೆ ಹಿಂದೂಗಳೇ ನೂರಾರು ವರ್ಷಗಳಿಂದ ಊರ ಹಬ್ಬದಂತೆ ಮೊಹರಂ ಆಚರಿಸುತ್ತಾ ಬಂದಿದ್ದಾರೆ.
ಜೂ. 26ರಂದು ಕತ್ತಲ್ ರಾತ್ರಿ ಅದ್ಧೂರಿಯಾಗಿ ಹಿಂದೂಗಳೇ ಮುಂದೆ ನಿಂತು ಆಚರಿಸುತ್ತಾರೆ. ಭಕ್ತರ ಇಷ್ಟಾರ್ಥ ಪೂರೈಸುವ ಪೀರಲ ದೇವರನ್ನು ಗ್ರಾಮಸ್ಥರು ಪೂಜಿಸುತ್ತಾರೆ. ಇಲ್ಲಿನ ಮಸೀದಿಯಲ್ಲಿ ಪ್ರತಿಷ್ಠಾಪಿಸುವ ಒಂಬತ್ತು ಬಗೆಯ ಪೀರಲ ದೇವರುಗಳಲ್ಲಿ ಮೂರುಗೆರೆ ಪೀರಲ ದೇವರು, ಕಂಪ್ಲಿ ಪೀರಲದೇವರು, ಮೂಕು ಪೀರಲದೇವರು ಮತ್ತು ಸೋಮಲಾಪುರ ಪೀರಲದೇವರುಗಳು ಹೆಚ್ಚು ಮಹತ್ವ ಪಡೆದಿದೆ.ಸುತ್ತಮುತ್ತಲಿನ ಗ್ರಾಮಸ್ಥರು ಮೊಹರಂ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ದೇವರಿಗೆ ಸಕ್ಕರೆ ಅರ್ಪಿಸುತ್ತಾರೆ. ನೆಂಟರು ಹಬ್ಬಕ್ಕೆ ಬಂದು ಗ್ರಾಮದ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ.
ಕುಂಬಾರ ಹನುಮಂತಪ್ಪ ಮತ್ತು ಮಲ್ಲಪ್ಪ, ಪರಿಶಿಷ್ಟ ಸಮುದಾಯದ ಮಾರೆಣ್ಣ ಮತ್ತು ಈರಣ್ಣ ದೇವರನ್ನು ಹಿಡಿಯುತ್ತಾರೆ.
ಗ್ರಾಮದ ಆಂಜನೇಯಸ್ವಾಮಿ ಮತ್ತು ಈಶ್ವರ ದೇವಸ್ಥಾನದ ಮಧ್ಯೆ ಮಸೀದಿ ನಿರ್ಮಿಸಿರುವುದು ಇಲ್ಲಿಯ ವಿಶೇಷ.
ಎಚ್. ವೀರಾಪುರ ಗ್ರಾಮದ ಮುಸ್ಲಿಂ ಕುಟುಂಬದವರು ಪೂಜೆ ನೆರವೇರಿಸುತ್ತಾರೆ ಎಂದು ಕುಂಬಾರ ಹನುಮಂತಪ್ಪ ಹೇಳಿದರು.ಗ್ರಾಮದಲ್ಲಿ ೬೦೦ ಮನೆಗಳಿದ್ದು, ೪,೦೦೦ ಜನಸಂಖ್ಯೆ ಇದೆ. ವಾಲ್ಮೀಕಿ, ಲಿಂಗಾಯತ, ಮಡಿವಾಳ ಮತ್ತು ಪರಿಶಿಷ್ಟ ಜಾತಿಯವರು ವಾಸಿಸುತ್ತಿದ್ದಾರೆ.
ಗ್ರಾಮದಲ್ಲಿ ಮುಸ್ಲಿಮರು ವಾಸಿಸುತ್ತಿಲ್ಲ. ಆದರೂ ಗ್ರಾಮದ ಜನರಿಗೆ ಒಳಿತಾಗುತ್ತಿದೆ ಎನ್ನುವ ಸದುದ್ದೇಶದಿಂದ ಪ್ರತಿವರ್ಷ ಸರ್ವರೂ ಸೇರಿ ಮೊಹರಂ ಆಚರಿಸುತ್ತೇವೆ ಎಂದು ಗ್ರಾಮದ ಮುಖಂಡ ಪಂಪನಗೌಡ ಮುಷ್ಠಘಟ್ಟೆ ಹೇಳಿದರು.ಫಕೀರಸ್ವಾಮಿ ಮಠದಲ್ಲಿ ಪೀರಲು ದೇವರ ಪ್ರತಿಷ್ಠಾಪನೆ
ಹಿಂದೂ ಧರ್ಮದ ಫಕೀರಸ್ವಾಮಿ ಮಠದಲ್ಲಿ ಮೊಹರಂ ಹಬ್ಬದ ಅಂಗವಾಗಿ ಪೀರಲು ದೇವರುಗಳನ್ನು ಹಿಂದೂಗಳೇ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದಿದ್ದಾರೆ.ಹೂವಿನಹಡಗಲಿ ತಾಲೂಕಿನ ಬ್ಯಾಲಹುಣ್ಸಿ ಗ್ರಾಮದ ಫಕೀರಸ್ವಾಮಿ ಮಠದಲ್ಲಿ ಪೀರಲು ದೇವರು ಪ್ರತಿಷ್ಠಾಪಿಸಿದ್ದಾರೆ. ಶಿವಪುರ, ಶಿವಪುರ ತಾಂಡಾ, ಹಾಳ್ ತಿಮ್ಲಾಪುರ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಮುಸ್ಲಿಮರೇ ಇಲ್ಲ. ಆದರೂ ಹಸೇನ್-ಹುಸೇನ್ ಬಲಿದಾನದ ಹಬ್ಬವನ್ನು ಹಿಂದೂಗಳೇ ಸಂಪ್ರದಾಯವಾಗಿ 10 ದಿನಗಳ ಮುಂಚೆ ಅಲಾಯಿ ಕುಣಿಗೆ ಗುದ್ದಲಿ ಪೂಜೆ ಮಾಡಿ, ಆನಂತರದಲ್ಲಿ ಪೀರಲು ದೇವರುಗಳನ್ನು ಬಡಿಗೇರ ಮನೆಯಿಂದ ತಂದು ಮೊಹರಂ ಹಬ್ಬದಲ್ಲಿ ಪ್ರತಿಷ್ಠಾಪಿಸಿ ಅದ್ಧೂರಿಯಾಗಿ ಹಬ್ಬ ಆಚರಿಸುತ್ತಾರೆ.ಹಿಂದೂಗಳೇ ಹಿಂದಿನಿಂದ ಮುಸ್ಲಿಂ ಸಂಪ್ರದಾಯದಂತೆ ಹಸೇನ್-ಹುಸೇನ್ ತ್ಯಾಗ, ಬಲಿದಾನದ ಸಂಕೇತವಾದ ಮೊಹರಂ ಹಬ್ಬದ ಅಂಗವಾಗಿ ಕತ್ತಲ್ ರಾತ್ರಿ ದಿನ ಎಲ್ಲ ಮನೆಯಲ್ಲಿ ಮಾಡಿದ ಗೋಧಿ ಹಿಟ್ಟಿನ ಮಾಲ್ದಿ, ಸಕ್ಕರೆ, ಉಪ್ಪು ಸೇರಿದಂತೆ ಕುದುರೆಗಳನ್ನು ದೇವರಿಗೆ ಅರ್ಪಿಸಿದರು.ಬ್ಯಾಲಹುಣ್ಸಿ ಗ್ರಾಮದಲ್ಲಿ ಫಕೀರಸ್ವಾಮಿ ಮಠದ ಮುಂದೆ ಅಲಾಯಿ ಕುಣಿ ತೆಗೆದು, ಅದರಲ್ಲಿ ಕಟ್ಟಿಗೆಯಿಂದ ಬೆಂಕಿ ಹೊತ್ತಿಸಿ, ನಿಗಿ ನಿಗಿ ಬೆಂಕಿ ಕೆಂಡವಾದ ನಂತರದಲ್ಲಿ ಹಲವು ಯುವಕರು ಅಲಾಯಿ ಕುಣಿಯ ಬೆಂಕಿಯಲ್ಲಿ ಹಾಯ್ದು ಮಠದಲ್ಲಿರುವ ಪೀರಲು ದೇವರುಗಳನ್ನು ಕೈ ಹಿಡಿದು ಹಲಾಯಿ ಕುಣಿ ಸುತ್ತು ಹಾಕಿದರು. ಇಡೀ ರಾತ್ರಿ ಮಠದ ಮುಂದೆ ಸವಾಲು ಪದಗಳು, ಹೆಜ್ಜೆ ಮೇಳ ಕುಣಿತ ನೆರೆದಿದ್ದ ಭಕ್ತರ ಗಮನ ಸೆಳೆದವು.ನಮ್ಮೂರಿನಲ್ಲಿ ಕಳೆದ 35 ವರ್ಷಗಳಿಂದ ಮೊಹರಂ ಹಬ್ಬವನ್ನು ಹಿಂದೂಗಳೇ ಆಚರಿಸುತ್ತಾ ಬಂದಿದ್ದೇವೆ. ಹಿರಿಯರ ಮಾರ್ಗದರ್ಶನದಲ್ಲಿ ಮಕರಬ್ಬಿ ಗ್ರಾಮದ ಫಕೀರಸಾಬ್ ಅವರನ್ನು ಕರೆ ತಂದು ಹಬ್ಬ ಆಚರಿಸುತ್ತೇವೆ ಎಂದು ಬ್ಯಾಲಹುಣ್ಸಿ ಲಕ್ಷ್ಮಣ ಬಾರ್ಕಿ ಹೇಳಿದರು.ಮೊಹರಂ ಹಬ್ಬದಲ್ಲಿ ಭಕ್ತರು ಹಬ್ಬದ ಕೊನೆ ದಿನದ ವರೆಗೂ ವಿವಿಧ ರೀತಿಯಲ್ಲಿ ಹರಕೆ ತೀರಿಸುತ್ತಾರೆ. ಅಲಾಯಿ ಕುಣಿಯ ಬೆಂಕಿಗೆ ರೈತರು ಉಪ್ಪು ಹಾಕುವುದರಿಂದ ಜಾನುವಾರುಗಳಿಗೆ ಉಣ್ಣೆ ಕೀಟ ಬಾಧೆ ಬರುವುದಿಲ್ಲ ಎಂದು ಮಕರಬ್ಬಿ ಫಕೀರಸಾಬ್ ಹೇಳಿದರು.