ಮಳೆಯಲ್ಲೇ ಮೊಹರಂ ಪಂಜಾ ಮೆರವಣಿಗೆ

| Published : Jul 18 2024, 01:33 AM IST

ಸಾರಾಂಶ

ಪಂಜಾ ದೇವರುಗಳ ಹೊತ್ತುವರು, ಭಕ್ತರು, ಅಲ್ಲಿ ನೆರೆದ ಅಪಾರ ಜನಸ್ತೋಮ ಮತ್ತು ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮೊಹರಂ ಸಡಗರ ಹೆಚ್ಚಿಸಿದರು

ರೋಣ: ಹಿಂದು-ಮುಸ್ಲಿಂ ಬಾಂಧವರ ಭಾವೈಕ್ಯತೆಯ ಪ್ರತೀಕವಾದ ಮೊಹರಂ ಹಬ್ಬದ ಕೊನೆಯ ದಿನ ಬುಧವಾರ ರಾತ್ರಿ ಪಟ್ಟಣದಲ್ಲಿ ಸುರಿವ ಮಳೆ ಲೆಕ್ಕಿಸದೇ ಶ್ರದ್ಧಾ-ಭಕ್ತಿಯಿಂದ ಪಂಜಾ ಅಲೈ ದೇವರು) ಮೆರವಣಿಗೆ ಜರುಗಿತು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಮಸೀದಿಗಳಿಂದ ಹೊರಟ ಪಂಂಜಾ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಂಚರಿಸಿತು. ಜನತೆ ರಸ್ತೆ ಎರಡು ಬದಿ ನಿಂತು ಪಂಜಾ (ಅಲೈ ದೇವರು) ದರ್ಶನ ಪಡೆದರು. ರಾತ್ರಿವರೆಗೂ ನಡೆಯುವ ಪಂಜಾ ಅಲೈ ದೇವರು)ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, ಹೆಜ್ಜೆ ಮೇಳ, ಕೋಲಾಟ ತಂಡಗಳು ಪ್ರಮುಖ ಆಕರ್ಷಿಣಿಯವಾಗಿದ್ದವು. ಸುಮಾರು 25 ಕ್ಕೂ ಹೆಚ್ಚು ಪಂಜಾ(ಅಲೈ ದೇವರು)ಗಳು ಪಟ್ಟಣದ ಪೋತದಾರರಾಜನ ಕಟ್ಟೆಯ ಹತ್ತಿರ ಒಂದಡೆ ಸೇರುವ ದೃಶ್ಯ ನೋಡುಗರ ಕಣ್ಮನ ಸೆಳೆಯುವಂತಿತ್ತು.

ರಾತ್ರಿಯಿಡಿ ಮಳೆ ಜಿಟಿಜಿಟಿಯಾಗಿ ಸುರಿಯಿತು. ಇದ್ಯಾವದನ್ನು ಲೆಕ್ಕಿಸದೇ ಪಂಜಾ ದೇವರುಗಳ ಹೊತ್ತುವರು, ಭಕ್ತರು, ಅಲ್ಲಿ ನೆರೆದ ಅಪಾರ ಜನಸ್ತೋಮ ಮತ್ತು ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮೊಹರಂ ಸಡಗರ ಹೆಚ್ಚಿಸಿದರು.

ತಡ ರಾತ್ರಿವರೆಗೂ ಪಂಜಾ ದೇವರುಗಳ ಮೆರವಣಿಗೆ ಜರುಗಿತು. ಬಳಿಕ ಪಂಜಾ ದೇವರುಗಳನ್ನು ನದಿಗೆ ( ವಿಸರ್ಜನೆ) ಕಳುಹಿಸುವ ಮೂಲಕ ಮೋಹರಂ ಹಬ್ಬಕ್ಕೆ ವಿದಾಯ ಹೇಳಲಾಯಿತು‌. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.