ಸಾರಾಂಶ
ಸೆಪ್ಟೆಂಬರ್‌ನಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ ಚಾಲನೆಭೀಮಣ್ಣ ಗಜಾಪುರ
ಕನ್ನಡಪ್ರಭ ವಾರ್ತೆ ಕೂಡ್ಲಿಗಿಹುಣಸೆ ಹಾಗೂ ಶೇಂಗಾದ ನಾಡೆಂದೇ ಹೆಸರಾದ ಕೂಡ್ಲಿಗಿ ತಾಲೂಕಿನಲ್ಲಿ ಹುಣಸೆ ಹಣ್ಣಿನ ಜತೆಗೆ ಶೇಂಗಾಕ್ಕೂ ಸಂಸ್ಕರಣಾ ಘಟಕ ಭಾಗ್ಯ ಒಲಿದಿದೆ.
ತಾಲೂಕಿನ ಗುಡೇಕೋಟೆ ಸಮೀಪದ ಕಸಾಪುರ ಬಳಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದೇ ತಿಂಗಳು ಆ. 31ರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬರುವ ದಿನಾಂಕ ನಿಗದಿಯಾಗಿತ್ತು. ಕಾರಣಾಂತರಗಳಿಂದ ಮುಂದೂಡಿದ್ದು, ಕೇಂದ್ರ ಸಚಿವರು ಸೆಪ್ಟೆಂಬರ್‌ನಲ್ಲಿ ಗುಡೇಕೋಟೆಗೆ ಆಗಮಿಸಲಿದ್ದಾರೆ. ಹುಣಸೆ, ಶೇಂಗಾ ಸಂಸ್ಕರಣಾ ಘಟಕಗಳಿಗೆ ಚಾಲನೆ ನೀಡಲಿದ್ದಾರೆ.ಈ ಹಿನ್ನೆಲೆ ವಿಜಯನಗರ ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಎರಡು- ಮೂರು ದಿನಗಳಿಂದ ಗುಡೇಕೋಟೆಗೆ ಭೇಟಿ ನೀಡಿದ್ದಾರೆ.
ತಾಲೂಕಿನಲ್ಲಿ 15 ಸಾವಿರಕ್ಕೂ ಹೆಚ್ಚು ಹುಣಸೆ ಮರಗಳಿವೆ. ತಾಲೂಕಿನ ಪ್ರಮುಖ ಬೆಳೆಯಾಗಿ ಶೇಂಗಾ ಬೆಳೆಯಲಾಗುತ್ತಿದೆ. ಹೀಗಾಗಿ ತಾಲೂಕಿನಲ್ಲಿ ಹುಣಸೆ ಮತ್ತು ಶೇಂಗಾ ಸಂಸ್ಕರಣ ಘಟಕವಾಗುತ್ತಿರುವುದು ರೈತರಿಗೆ ವರದಾನವಾಗಲಿದೆ. ನೂರಾರು ವರ್ಷಗಳಿಂದಲೂ ಸಾಂಪ್ರದಾಯಕವಾಗಿ ಹುಣಸೆ ಹಣ್ಣು ಬೆಳೆಯುವ ಈ ತಾಲೂಕಲ್ಲಿ ರೈತರಿಗೆ ಮಾರುಕಟ್ಟೆ ಸೌಲಭ್ಯ, ಬೆಲೆ ಕುಸಿತದಿಂದ ಪಾರಾಗಲು ಶೀತಲೀಕರಣ, ಸಂಸ್ಕರಣಾ ಘಟಕ ಸೇರಿ ಯಾವುದೇ ಸೌಕರ್ಯವಿರಲಿಲ್ಲ. ಆದರೀಗ, ತಾಲೂಕಿನಲ್ಲಿ ಹುಣಸೆ ಹಣ್ಣಿನ ಜತೆಗೆ ಶೇಂಗಾ ಸಂಸ್ಕರಣಾ ಘಟಕ ಸ್ಥಾಪನೆಗೆ ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರ ಇಚ್ಛಾಶಕ್ತಿಯೂ ಕಾರಣ. ಕಸಾಪುರ ಬಳಿ 1 ಎಕರೆ ವಿಸ್ತೀರ್ಣದ ಜಾಗದಲ್ಲಿ ಹುಣಸೆ ಮತ್ತು ಶೇಂಗಾ ಸಂಸ್ಕರಣಾ ಘಟಕ ಸ್ಥಾಪನೆಗೊಳ್ಳುತ್ತಿದೆ. ಈ ಯೋಜನೆಗೆ ಹಣಕಾಸು ಸಚಿವರ ಸಹಯೋಗದ ಅನುದಾನ ಹಾಗೂ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್)ನಿಂದ ಒಟ್ಟು ₹3.50 ಕೋಟಿ ವೆಚ್ಚದಲ್ಲಿ ಈ ಯೋಜನೆ ಸಾಕಾರಗೊಳ್ಳಲಿದೆ.ಬೆಳೆಗಾರರಿಗೆ ಲಾಭ:ತಾಲೂಕಿನಲ್ಲಿ ಯಥೇಚ್ಛವಾಗಿ ಬೆಳೆಯುವ ಹುಣಸೆ ಹಣ್ಣು ಮತ್ತು ಶೇಂಗಾವನ್ನು ಬೇರೆ ರಾಜ್ಯದ ವ್ಯಾಪಾರಿಗಳು ಕಡಿಮೆ ದರ ನೀಡಿ ಖರೀದಿಸುತ್ತಿದ್ದರಿಂದ ರೈತರು ಬಹಳ ದಿನ ಇಟ್ಟುಕೊಳ್ಳಲು ವ್ಯವಸ್ಥೆ ಇಲ್ಲದ್ದರಿಂದ ನಷ್ಟವೇ ಜಾಸ್ತಿಯಾಗುತ್ತಿತ್ತು. ಈಗ ಸಂಸ್ಕರಣಾ ಘಟಕ ಸ್ಥಾಪನೆಯಾಗುವುದರಿಂದ ಬೆಲೆ ಬರುವವರೆಗೂ ಇಟ್ಟುಕೊಳ್ಳಬಹುದು. ಅಲ್ಲದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಬೆಳೆಗಳನ್ನು ರೈತ ಉತ್ಪಾದಕ ಸಂಘಗಳ ಮೂಲಕ ಬೆಳೆ ಮಾರಾಟ ಮಾಡುವುದರಿಂದ ಬೆಳೆಗಾರರಿಗೆ ಲಾಭವಾಗಲಿದೆ. ಅಲ್ಲದೆ, ಸ್ಥಳೀಯ ಸಂಪನ್ಮೂಲವು ಸ್ಥಳೀಯರಿಗೆ ಉದ್ಯಮವಾಗಿ ಬೆಳೆಯುವುದರಿಂದ ಉದ್ಯೋಗವಕಾಶಗಳು ಹೆಚ್ಚಾಗಲಿವೆ ಎನ್ನುತ್ತಾರೆ ನಬಾರ್ಡ್ ಅಧಿಕಾರಿ ವಿಜಯಕುಮಾರ್.